Advertisement

ಮೈಸೂರಿನ ಕುಕ್ಕರಹಳ್ಳಿ ಕೆರೆ ಸಂಪೂರ್ಣ ಭರ್ತಿ

06:07 PM Oct 21, 2022 | Team Udayavani |

ಮೈಸೂರು: ನಗರದ ಹೃದಯ ಭಾಗದಲ್ಲಿ ನೂರು ಎಕರೆಗೂ ಹೆಚ್ಚು ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಕುಕ್ಕರಹಳ್ಳಿಕೆರೆ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹೊರ ಹೋಗದ ಪರಿಣಾಮ ಕೆರೆಯ ಏರಿ ಶಿಥಿಲಾವಸ್ಥೆಗೆ ತಲುಪುವ ಅಪಾಯದಲ್ಲಿದೆ.

Advertisement

ಕಳೆದೆರೆಡು ವರ್ಷಗಳಿಂದ ಉತ್ತಮವಾಗಿ ಮಳೆಯಾಗಿದ್ದು ಹಾಗೂ ವಾರದಿಂದ ಬಿಟ್ಟು ಬಿಡದೆ ಸುರಿದ ಭಾರೀ ಮಳೆಯಿಂದಾಗಿ ಕುಕ್ಕರಹಳ್ಳಿ ಕೆರೆ ಭರ್ತಿಯಾಗಿದೆ. ಜತೆಗೆ ನಿರಂತರವಾಗಿ ನೀರು ಹರಿದುಬರುತ್ತಿರುವುದರಿಂದ ಕೆರೆಯ ಉತ್ತರ ಭಾಗದಲ್ಲಿ(ಮೈಸೂರು-ಹುಣಸೂರು ಹೆದ್ದಾರಿ ಬಳಿ)ನ ಏರಿ ಮಟ್ಟಕ್ಕೆ ನೀರು ಏರಿಕೆಯಾಗಿದ್ದು, ಅಲ್ಲಲ್ಲಿ ಕುಸಿದಿದೆ.ಜತೆಗೆ ಏರಿಯ ಇಕ್ಕೆಲದಲ್ಲಿದ್ದ ಬೃಹತ್‌ ಮರಗಳು ಧರೆಗುರುಳಿ ಮತ್ತಷ್ಟು ಶಿಥಿಲಾವಸ್ಥೆಗೆ ತಲುಪಿದೆ.

ಕೆರೆ ಭರ್ತಿಯಾಗಿದ್ದರಿಂದ, ಕೆರೆ ಏರಿಯ ಮತ್ತೊಂದು ಭಾಗದಲ್ಲಿ ಶೇಖರಣೆಯಾಗಿದ್ದ ಪಡುವರಹಳ್ಳಿಯಿಂದ ಬಂದ ಕಲುಷಿತ ನೀರು ಕೆರೆಗೆ ಸೇರುತ್ತಿರುವುದು ಒಂದೆಡೆಯಾದರೆ, ಏರಿಯ ಮೇಲೆ ನಿರ್ಮಿಸಿರುವ ಯುಜಿಡಿ ಲೈನ್‌ ಕುಸಿದು ತ್ಯಾಜ್ಯವೆಲ್ಲ ಕೆರೆ ಸೇರುತ್ತಿದೆ.

ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ: ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ಕೆರೆ ತುಂಬಿದಾಗಲೇ ಮೈಸೂರು ವಿಶ್ವವಿದ್ಯಾಲಯದ ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಹೆಚ್ಚುವರಿ ನೀರು ಹೊರ ಹೋಗುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೆ ಈ ಕಾರ್ಯ ಮಾಡದೆ ನಿರ್ಲಕ್ಷಿಸಿದ್ದರಿಂದ ಏರಿಯ ಮೇಲೆ ಒತ್ತಡ ಹೆಚ್ಚಿದೆ. ಪರಿಣಾಮ ಅಲ್ಲಲ್ಲಿ ನೀರು ಸೋರಿಕೆಯಾಗಿ ಕೆರೆಯ ಪಕ್ಕದಲ್ಲಿರುವ ರಸ್ತೆಯಲ್ಲಿ ಹರಿಯುತ್ತಿದೆ.

ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾದ ಬಳಿಕ ಎಚ್ಚೆತ್ತುಕೊಂಡ ಮೈಸೂರು ವಿವಿ ಮತ್ತು ಪಾಲಿಕೆ ಅಧಿಕಾರಿಗಳು, ಜಂಟಿಯಾಗಿ ಕಳೆದೆರೆಡು ದಿನಗಳಿಂದ ಮೋಟರ್‌ ಅಳವಡಿಸಿ ಹೆಚ್ಚುವರಿ ನೀರನ್ನು ಹೊರಹಾಕುವ ಕೆಲಸ ನಡೆಸಿದ್ದಾರೆ. ಜತೆಗೆ ಕೆರೆಯಿಂದ ಹೊರ ಬರುತ್ತಿರುವ ನೀರು, ಕೆರೆಯ ಕೆಳ ಭಾಗದಲ್ಲಿರುವ ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದ ಗಿಡಮೂಲಿಕೆಗಳ ತೋಟವನ್ನು ಆವರಿಸಿಕೊಂಡಿದೆ.

Advertisement

ಕೆರೆಯ ತೂಬಿನ ವಾಲ್‌ ರಿಪೇರಿ: 150 ವರ್ಷಗಳ ಹಿಂದೆ ಮಹಾರಾಜರು ಕಟ್ಟಿಸಿದ ಕುಕ್ಕರಹಳ್ಳಿ ಕೆರೆ, ಗುಡಿ ಕೈಗಾರಿಕೆ ಮತ್ತು ಕೃಷಿ ಉಪಯೋಗವಾಗುವ ದೃಷ್ಟಿಯಿಂದ ತೂಬು ನಿರ್ಮಿಸಿ ವಾಲ್‌ ಅಳವಡಿಸಿದ್ದರು. ಕೆರೆಯ ನೀರು ಬಳಕೆಗೆ ತೂಬು ಅನುಕೂಲವಾಗಿತ್ತು. ಬಳಿಕ ಕೆರೆ ಭರ್ತಿಯಾಗದ ಹಿನ್ನೆಲೆ ಹಾಗೂ ಕೆರೆಯ ನೀರಿನ ಅವಲಂಬನೆ ಕಡಿಮೆಯಾಗುತ್ತಿದ್ದಂತೆ ತೂಬಿನ ವಾಲ್‌ ಕೆಟ್ಟು ನಿಂತಿತ್ತು. ಆದರೀಗ ಕೆರೆ ಸಂಪೂರ್ಣವಾಗಿ ತುಂಬಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಹಾಕಲು ತೂಬಿನ ಗೇಟ್‌ ಬಳಕೆ ಮಾಡುವುದು ಅನಿವಾರ್ಯವಾಗಿದ್ದರಿಂದ ಪಾಲಿಕೆ, ಮುಡಾ, ಕೆಆರ್‌ಎಸ್‌ ಎಂಜಿನಿಯರ್‌ಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಬುಧವಾರ ರಿಪೇರಿ ಮಾಡಿದ್ದು, ಬುಧವಾರ ಸಂಜೆಯಿಂದ ನೀರನ್ನು ಹೊರಬಿಡಲಾಗುತ್ತಿದೆ.

ಜಲಚರಗಳಿಗೆ ಆಪತ್ತು ?
ಕೆರೆಯ ಉತ್ತರ ದಿಕ್ಕಿನಲ್ಲಿ ಶೇಕರಣೆಯಾಗಿದ್ದ ಕಲುಷಿತ ನೀರು, ಏರಿ ಕುಸಿತದಿಂದ ಕೆರೆಗೆ ಸೇರುತ್ತಿದೆ. ಜತೆಗೆ ಏರಿಯ ಮೇಲೆ ನಿರ್ಮಿಸಿದ್ದ ಯುಜಿಡಿ ಲೈನ್‌ ಕೂಡ ಕುಸಿದಿರುವು ದರಿಂದ ತ್ಯಾಜ್ಯ ಕೆರೆಗೆ ನೇರವಾಗಿ ಸೇರುತ್ತಿರುವುದರಿಂದ ಕೆರೆಯಲ್ಲಿರುವ ಜಲಚರಳಿಗೆ ಮಾರಕವಾಗುವ ಅಪಾಯವಿದೆ.

ಯುಜಿಸಿ ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮುಳುಗಡೆ: ಕೆರೆಯ ಪಶ್ಚಿಮ ದಿಕ್ಕಿನ ದಂಡೆಯಲ್ಲಿ ನಿರ್ಮಿಸಿರುವ ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಕಟ್ಟಡ ಕಳೆದ 5 ತಿಂಗಳಿನಿಂದ ಮುಳುಗಡೆಯಾಗಿದ್ದು, ಎಲ್ಲಾ ಶೈಕ್ಷಣಿಕ ಮತ್ತು ತರಬೇತಿ ಚಟುವಟಕೆಗಳು ಸ್ಥಗಿತವಾಗಿವೆ. ಕಟ್ಟಡವನ್ನು ಅವೈಜ್ಞಾನಿಕವಾಗಿ ಕೆರೆಯ ಅಂಚಿನಲ್ಲಿ ನಿರ್ಮಾಣ ಮಾಡಲಾಗಿದೆ. ಜತೆಗೆ ಕೆರೆ ಏರಿಯ ಮಟ್ಟಕ್ಕಿಂತ ಸ್ವಲ್ಪ ಕೆಳಭಾಗದಲ್ಲಿ ಕಟ್ಟಡ ಇರುವುದರಿಂದ
ಜಲಾವೃತಗೊಂಡಿದೆ.

ಸದ್ಯಕ್ಕೆ ಕರೆ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಜತೆಗೆ ತಾತ್ಕಾಲಿಕವಾಗಿ ಕೆರೆಗೆ ಹೊರ ಭಾಗದಿಂದ ನೀರು ಬರದಂತೆ ನೋಡಿಕೊಳ್ಳಲಾಗುವುದು. ಎಂಜಿನಿಯರ್‌ ತಂಡ ಕೆರೆ ತೂಬಿನ ವಾಲ್‌ ರಿಪೇರಿ ಮಾಡಿ, ಸರಾಗವಾಗಿ ನೀರು ಹೋಗುವಂತೆ ಮಾಡಿದೆ.
● ಲಕ್ಷ್ಮೀಕಾಂತ ರೆಡ್ಡಿ, ಪಾಲಿಕೆ ಆಯುಕ್ತ

ಕೆರೆ ಸಂಪೂರ್ಣವಾಗಿ ಭರ್ತಿಯಾಗಿರುವುದ ರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೆರೆ ತೂಬಿನಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಕೆರೆಯ ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ್ದ ಸ್ವಲ್ಪ ಶಿಥಿಲವಾಗಿದೆ.
● ಪ್ರೊ.ಆರ್‌.ಶಿವಪ್ಪ, ಕುಲಸಚಿವ
ಮೈಸೂರು ವಿವಿ

● ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next