Advertisement

ವಿದ್ಯುದ್ಧೀಪಗಳ ನಡುವೆ ಮೈಸೂರು ನವವಧು    

12:10 PM Sep 15, 2017 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಆರಂಭಕ್ಕೆ ಇನ್ನು 6 ದಿನಗಳಷ್ಟೇ ಬಾಕಿ. ದಸರೆಗೆ ಮೈಸೂರು ನಗರ ನವವಧುವಿನಂತೆ ಸಿಂಗಾರಗೊಳ್ಳುತ್ತಿದೆ. ಮೈಸೂರು ದಸರೆ ಕೇಂದ್ರ ಬಿಂದುವಾಗಿರುವ ಮೈಸೂರು ಅರಮನೆಗೆ ಸುಣ್ಣ-ಬಣ್ಣ ಬಳಿಯುವ, ವಿದ್ಯುದ್ಧೀಪಗಳನ್ನು ಸರಿಪಡಿಸುವ ಕಾರ್ಯ ಸೇರಿದಂತೆ ಅರಮನೆ ಆವರಣದಲ್ಲಿ ಕೆಲಸಗಾರರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

Advertisement

ಇತ್ತ ನಗರದ ಹೊರಗೆ ರಸ್ತೆಗಳ ಗುಂಡಿಮುಚ್ಚುವ, ಪಾದಚಾರಿ ರಸ್ತೆಗಳನ್ನು ದುರಸ್ತಿಪಡಿಸುವ ಸರ್ಕಾರಿ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸವೂ ಸಾಗಿದೆ. ಆದರೆ, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಎಲ್ಲಾ ಕಾಮಗಾರಿಗಳನ್ನೂ ತರಾತುರಿಯಲ್ಲಿ ಮುಗಿಸುತ್ತಿರುವುದರಿಂದ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ನಗರದ ಸಾರ್ವಜನಿಕ ಸ್ಥಳಗಳಲ್ಲಿನ ಗೋಡೆಗಳಿಗೆ ಇದೇ ಮೊದಲ ಬಾರಿಗೆ 10 ಲಕ್ಷ ರೂ. ವೆಚ್ಚದಲ್ಲಿ ಕಾವಾ ವಿದ್ಯಾರ್ಥಿಗಳಿಂದ ಮೈಸೂರಿನ ಕಲೆ-ಸಂಸ್ಕೃತಿ-ಪರಂಪರೆ ಬಿಂಬಿಸುವ ಛಾಯಾಚಿತ್ರಗಳನ್ನು ಬರೆಸುತ್ತಿರುವುದು ಸ್ವಾಗತಾರ್ಹವಾದರೂ ನಿರ್ವಹಣೆ ಮಾಡದಿದ್ದರೆ ಕೆಲವೇ ವರ್ಷಗಳಲ್ಲಿ ಹಾಳಾಗಲಿವೆ.

ಈ ಹಿಂದೆ ಬಿಬಿಎಂಪಿವತಿಯಿಂದ ಇಂತಹ ಕೆಲಸ ಮಾಡಿಸಲಾಗಿತ್ತಾದರೂ ನಿರ್ವಹಣೆ ಇಲ್ಲದೆ ಹಾಳಾಗಿದ್ದು ಕಣ್ಣಮುಂದಿದೆ. ದಸರಾ ವಿದ್ಯುತ್‌ ದೀಪಾಲಂಕಾರ ಸಮಿತಿಯಿಂದ ನಗರದ ತುಂಬೆಲ್ಲಾ ಎಲ್‌ಇಡಿ ಬಲ್ಬ್ಗಳಿಂದ ಅಲಂಕರಿಸಿರುವುದರಿಂದ ಕತ್ತಲಾಗುತ್ತಿದ್ದಂತೆ ಮೈಸೂರು ಜಗಮಿಸುತ್ತಿದೆ. 

ವಸ್ತುಪ್ರದರ್ಶನ: ನಾಡಹಬ್ಬ ಮೈಸೂರು ದಸರೆ ಮತ್ತೂಂದು ಆಕರ್ಷಣೆ, ವಸ್ತುಪ್ರದರ್ಶನ. ಪ್ರತಿವರ್ಷ ದಸರಾ ಉದ್ಘಾಟನೆ ದಿನವೇ ವಸ್ತುಪ್ರದರ್ಶನದ ಎಲ್ಲಾ ಮಳಿಗೆಗಳು ಸಿದ್ಧಗೊಂಡಿರಬೇಕು ಎಂದು ತಾಕೀತು ಮಾಡಲಾಗುತ್ತದೆಯಾದರೂ ದಸರಾ ಆರಂಭವಾಗಿ ತಿಂಗಳು ಕಳೆದರೂ ಮಳಿಗೆಗಳು ಪೂರ್ಣವಾಗುತ್ತಲೇ ಇರುತ್ತದೆ. ಈ ವರ್ಷ ಸರ್ಕಾರಿ ಇಲಾಖೆಗಳಿಂದಲೇ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ.

Advertisement

ಒಟ್ಟು 37 ಇಲಾಖೆಗಳ ಪೈಕಿ 33 ಇಲಾಖೆಗಳು ಮಳಿಗೆ ನಿರ್ಮಾಣ ಮಾಡುತ್ತಿದ್ದು, ಇನ್ನು 3 ಇಲಾಖೆ ಸಿದ್ಧತೆ ಆರಂಭಿಸಿಲ್ಲ. ಗುರುವಾರ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ಮಳಿಗೆಗಳ ನಿರ್ಮಾಣ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ ರಂದೀಪ್‌ ಡಿ., ಮಳಿಗೆ ನಿರ್ಮಾಣ ಕಾರ್ಯ ಆರಂಭಿಸಿದ ಇಲಾಖೆಗಳವರಿಗೆ ಒಂದೆರಡು ದಿನಗಳಲ್ಲಿ ಆರಂಭಿಸದಿದ್ದರೆ ಅವರಿಗೆ ಜಾಗ ನೀಡಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸೆ.21 ರೊಳಗೆ ಎಲ್ಲಾ ತಯಾರಿ ಮುಗಿಸಿರಬೇಕು. ಎಲ್ಲಾ ಕೆಲಸ ಮುಗಿದ ನಂತರವಷ್ಟೇ ಉದ್ಘಾಟನೆಗೆ ಕರೆಯಿರಿ, ಇಲ್ಲದಿದ್ದರೆ ಬರಲ್ಲ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ. ಇದನ್ನು ಸವಾಲಾಗಿ ತೆಗೆದುಕೊಂಡಿದ್ದೇವೆ. ಸೆ.21ರೊಳಗೆ ಬಹುತೇಕ ಎಲ್ಲಾ ಕೆಲಸ ಮುಗಿಯಲಿದೆ ಎಂದು ಹೇಳಿದರು.

ಅಲ್ಲದೆ, ಪ್ರವಾಸಿಗರ ಅನುಕೂಲಕ್ಕಾಗಿ ಅರಮನೆ ಮತ್ತು ವಸ್ತುಪ್ರದರ್ಶನದ ನಡುವೆ ಸಂಪರ್ಕ ಕಲ್ಪಿಸುವ ಸಬ್‌-ವೇಯನ್ನು ಸುಸ್ಥಿತಿಯಲ್ಲಿಟ್ಟು ಬೆಳಕಿನ ವ್ಯವಸ್ಥೆ ಮಾಡಿ ಮತ್ತು ಭದ್ರತೆಗಾಗಿ ಸಿಸಿ ಕ್ಯಾಮರಾ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗಡುವು ಮೀರಿದರೆ ಅನುಮತಿ ರದ್ದು
ರಾಜ್ಯ ಸರ್ಕಾರದ ಇಲಾಖೆಗಳು 13 ಮಳಿಗೆಗಳನ್ನು ತೆರೆಯಲಿದ್ದು, ಈ ಪೈಕಿ 11 ಮಳಿಗೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಕೇಂದ್ರ ಸರ್ಕಾರದ ಇಲಾಖೆಗಳು 3 ಮಳಿಗೆ ತೆರೆಯಲಿದ್ದು, 2 ಪ್ರಗತಿಯಲ್ಲಿದೆ. ನಿಗಮ-ಮಂಡಳಿಗಳ 5 ಮಳಿಗೆಗಳಲ್ಲಿ 3 ಪ್ರಗತಿಯಲ್ಲಿದ್ದು, 2 ಆರಂಭವಾಗಿಲ್ಲ.

ಜಿಪಂನ 5 ಮಳಿಗೆಗಳಲ್ಲಿ 3ಪ್ರಗತಿಯಲ್ಲಿದ್ದು, 2ಆರಂಭವಾಗಿಲ್ಲ ಎಂದು ಮಾಹಿತಿ ನೀಡಿದರು. ಅಲ್ಲದೆ, ತಕ್ಷಣ ಉಳಿದ ಎಲ್ಲಾ ಇಲಾಖೆಗಳ ಮಳಿಗೆ ಆರಂಭಿಸಲು ಸೂಚನೆ ನೀಡಲಾಗಿದೆ. ತಪ್ಪಿದ್ದಲ್ಲಿ ನೀಡಿರುವ ಅನುಮತಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ರಂಡೀಪ್‌ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next