ಮೈಸೂರು: ಸಹಜ ಸಮೃದ್ಧ ಸಂಸ್ಥೆ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಗೆಡ್ಡೆ-ಗೆಣಸು ಮೇಳದಲ್ಲಿ ಗೆಡ್ಡೆ-ಗೆಣಸಿನಿಂದ ತಯಾರಿಸಿದ ನವೀನ ಮಾದರಿಯ ಖಾದ್ಯಗಳು ಹಾಗೂ ಆಹಾರ ಪದಾರ್ಥಗಳು ಗಮನ ಸೆಳೆದವು.
ಶನಿವಾರ ಮತ್ತು ಭಾನುವಾರ ಏರ್ಪಡಿಸಿದ್ದ ಮೇಳಕ್ಕೆ ನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮಾಂತರ ಪ್ರದೇಶದವರಯ ಭೇಟಿಕೊಟ್ಟು ತಮಗಿಷ್ಟವಾದ ಗೆಣಸು, ಗೆಡ್ಡೆಗಳನ್ನು ಕೊಂಡೊಯ್ದರೆ, ಮತ್ತೆ ಕೆಲವರು ಅಲ್ಲಿಯೇ ವಿವಿಧ ಬಗೆಯ ಗೆಡ್ಡೆ, ಗೆಣಸಿನಿಂದ ತಯಾರಿಸಿದ ಹೋಳಿಗೆ, ಪಾಯಸ, ಐಸ್‌ಕ್ರೀಂ, ಗೋಬಿ, ಉಪ್ಪಿನಕಾಯಿಯ ರುಚಿ ನೋಡಿದರು.
ನಾನಾ ಬಗೆಯ ಖಾದ್ಯ: ಮೇಳದ ಎರಡನೇ ದಿನವಾದ ಭಾನುವಾರ ರಜೆ ದಿನವಾದ ಕಾರಣ 4 ಸಾವಿರಕ್ಕೂ ಹೆಚ್ಚು ಮಂದಿ ಕುಟುಂಬದೊಂದಿಗೆ ಆಗಮಿಸಿ ಮೇಳದ ವಿವಿಧ ಮಳಿಗೆಗಳಲ್ಲಿ ತಯಾರಾದ ಸುವರ್ಣ ಗೆಡ್ಡೆ ಬಿರಿಯಾನಿ ಹಾಗೂ ಗೋಬಿ, ಸಿಹಿಗೆಣಸಿನ ಹೋಳಿಗೆ ಮತ್ತು ಪಾಯಸ, ಮರಗೆಣಸು ಟಿಕ್ಕಿ, ಚಿಪ್ಸ್, ಉಪ್ಪಿನಕಾಯಿ, ಗೆಣಸಿನ ಐಸ್‌ಕ್ರೀಂ, ಹಪ್ಪಳ ಸೇರಿದಂತೆ ನಾನಾ ಬಗೆಯ ಖಾದ್ಯಗಳ ರುಚಿ ಸವಿದರು.
ತರಾವರಿ ಗೆಡ್ಡೆ-ಗೆಣಸು ಮಾರಾಟ: ಮೊದಲ ದಿನವಾದ ಶನಿವಾರಕ್ಕಿಂತಲೂ ಭಾನುವಾರ ಗೆಡ್ಡೆ- ಗೆಣಸು ಖರೀದಿ ಜೋರಾಗಿತ್ತು. ಬೆಳಗ್ಗೆಯಿಂದಲೇ ಮೇಳಕ್ಕೆ ಆಗಮಿಸಿದ ಜನರು ಗಿಡ, ಜೇನು, ವಿವಿಧ ಬಗೆಯ ಗೆಣಸುಗಳನ್ನು ಖರೀದಿಸಿದರು. ಎರೆಗೆಣಸು, ಕುವಲೆಗೆಣಸು, ಕೆಸು ಗೆಣಸು, ಕಾಸಾಳ ಆಳು, ತೋಟಂಬಲ ಗೆಣಸು, ಬತ್ತಿ ಗೆಣಸು, ಚಿಂದಿ ಗೆಣಸು, ಸಿಹಿ ಗೆಣಸು, ಹಸಿ ಅರಿಶಿಣ, ಬೆಲ್ಲದ ಗೆಣಸು, ಸುವರ್ಣ ಗೆಡ್ಡೆ, ಕೆಸು ಗೆಡ್ಡೆ, ದಾವಂಚೆ ಕೆಸು,ಕುರುಪಣ ಗೆಣಸು, ಮರದ ಕಣಗ, ಬಿಳಿಸಿಹಿ ಗೆಣಸು, ಚಾಣಿ ಗೆಡ್ಡೆ ಇದೇ ಮುಂತಾದ ಬಗೆಯ ಗೆಣಸುಗಳನ್ನು ಖರೀದಿಸಿದಿದರು.
ಗಮನ ಸೆಳೆದ ಅಡುಗೆ ಸ್ಪರ್ಧೆ: ಮೇಳದ ಕೊನೆಯ ದಿನವಾದ ಭಾನುವಾರ ಗೆಡ್ಡೆ-ಗೆಣಸಿನಿಂದ ಅಡುಗೆ ತಯಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ 10ಮಂದಿ ಭಾಗವಹಿಸಿದ್ದರು. ಕೆಸವಿನಗೆಡ್ಡೆ ಕಾರಗೋಲ್, ಮರಗೆಣಸಿನ ನೂಡಲ್ಸ್, ಸುವರ್ಣ ಗೆಡ್ಡೆ ತವಾ ಪ್ರೈ, ಸಿಹಿಗಣಸಿನ ಕೇಕು, ಸಂಜೆ ಮಲ್ಲಿಗೆ ಗೆಡ್ಡೆ ಬೋಂಡಾ, ಸಲ್ಲಾಡ್, ಮಜ್ಜಿಗೆ ಹುಳಿ, ಕ್ಯಾರೇಟ್ ಕೇಕ್, ಸ್ವೀಟ್ ಪೊಟ್ಯಾಟ್ ಕೆನೋ, ಕೆಸವಿನ ಗೆಡ್ಡೆ ಪಾಪ್, ಸುವರ್ಣಗೆಡ್ಡೆ ಪೊಡಿ, ಸಿಹಿಗೆಣಸಿನ ಲಾಡು ಸೇರಿದಂತೆ ಇತರೆ ಖಾದ್ಯಗಳನ್ನು ಮಾಡಲಾಗಿತ್ತು. ಸ್ಪರ್ಧೆಯಲ್ಲಿ ಮಂಗಳ ಪ್ರಕಾಶ್ (ಪ್ರ), ಮನೋನ್ಮಣಿ, ರತಿ ಸಂತೋಷ್ (ದ್ವಿ), ಬಿ.ಕೆ.ಲೀಲಾವತಿ, ಶ್ರೀದೇವಿ ಹೆಗಡೆ (ತೃ) ಸ್ಥಾನಗಳಿಸಿದರು.