Advertisement

ಮೈಸೂರು ವಾರಿಯರ್-ಶಿವಮೊಗ್ಗ ಲಯನ್ಸ್‌ ಮುಖಾಮುಖಿ

12:07 PM Aug 28, 2018 | Team Udayavani |

ಮೈಸೂರು: ಆರಂಭದ ಎರಡು ಪಂದ್ಯಗಳನ್ನು ಸೋತು 7ನೇ ಆವೃತ್ತಿಯ ಕೆಪಿಎಲ್‌ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿರುವ ಶಿವಮೊಗ್ಗ ಲಯನ್ಸ್‌ ಇಂದು ಆತಿಥೇಯ ಮೈಸೂರು ವಾರಿಯರ್ ವಿರುದ್ಧ ಹೋರಾಡಲು ಸಜ್ಜಾಗಿದೆ. 

Advertisement

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ತಮ್ಮ ಗೆಲುವಿನ ಲಯ ಕಂಡುಕೊಳ್ಳುವ ತವಕದಲ್ಲಿದೆ. ಇನ್ನೊಂದೆಡೆ ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿದ ಮೈಸೂರು ವಾರಿಯರ್ ಇಂದಿನ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲೇರುವ ಆಸೆ ಹೊಂದಿದೆ.

ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದ್ದು, ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ. ಪಂದ್ಯದ ಮುನ್ನಾದಿನವಾದ ಸೋಮವಾರ ಎರಡೂ ತಂಡದ ಆಟಗಾರರು ಮೈದಾನದಲ್ಲಿ ಕೆಲಕಾಲ ಅಭ್ಯಾಸ ನಡೆಸಿದರು. 

ಒತ್ತಡದಲ್ಲಿ ಲಯನ್ಸ್‌: ಈ ಬಾರಿಯ ಕೆಪಿಎಲ್‌ನಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಸೋತಿರುವ ಶಿವಮೊಗ್ಗ ವಾರಿಯರ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಟೂರ್ನಿಯಲ್ಲಿ ಮುಂದಿನ ಹಂತಕ್ಕೇರಲು ಶಿವಮೊಗ್ಗ ತಂಡಕ್ಕೆ ಗೆಲುವು ಅನಿವಾರ್ಯವಾದ ಕಾರಣ ಸಹಜವಾಗಿ ಶಿವಮೊಗ್ಗ ಲಯನ್ಸ್‌ ಮೇಲೆ ಒತ್ತಡ ಹೆಚ್ಚಾಗಿದೆ. ಈಗಾಗಲೇ ಹುಬ್ಬಳ್ಳಿ ಟೈಗರ್ ಹಾಗೂ ಬೆಂಗಳೂರು ಬ್ಲಾಸ್ಟರ್ ವಿರುದ್ಧ ಸೋತಿರುವ ಅನಿರುದ್ಧ ಜೋಶಿ ನಾಯಕತ್ವದ ಶಿವಮೊಗ್ಗ ಲಯನ್ಸ್‌ಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಬೌಲಿಂಗ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶಿವಮೊಗ್ಗ ಲಯನ್ಸ್‌ ಬ್ಯಾಟಿಂಗ್‌ನಲ್ಲಿ ಚೇತರಿಕೆ ಕಾಣಬೇಕಿದೆ. ಎರಡೂ ಪಂದ್ಯಗಳಲ್ಲಿ ತಂಡದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫ‌ಲವಾದ ಕಾರಣ ಶಿವಮೊಗ್ಗ ಸೋಲಿನ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಮೈಸೂರು ವಿರುದ್ಧದ ಇಂದಿನ ಪಂದ್ಯದಲ್ಲಿ ಗೆದ್ದರಷ್ಟೇ ಶಿವಮೊಗ್ಗ ಲಯನ್ಸ್‌ ಟೂರ್ನಿಯಲ್ಲಿ ಜೀವಂತವಾಗಿ ಉಳಿಯಲಿದೆ. 

Advertisement

ಗೆಲುವು ಅನಿವಾರ್ಯ: ಟೂರ್ನಿಯಲ್ಲಿ ಆಡಿರುವ ಎರಡು ಪಂದ್ಯದಲ್ಲಿ ಒಂದು ಪಂದ್ಯದಲ್ಲಿ ಗೆದ್ದು 2 ಅಂಕದೊಂದಿಗೆ 5ನೇ ಸ್ಥಾನದಲ್ಲಿರುವ ಮೈಸೂರು ವಾರಿಯರ್ಗೂ ಇದು ಪ್ರಮುಖ ಪಂದ್ಯವಾಗಿದೆ. ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಸುಚಿತ್‌ ಪಡೆಗೆ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ವಾರಿಯರ್ಗೆ ಬೌಲರ್‌ಗಳು ಸ್ಥಿರ ಪ್ರದರ್ಶನ ತೋರಬೇಕಾದ ಅಗತ್ಯವಿದೆ.

ಕಳೆದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡಿದರೂ, ಕೊನೆಯ ಓವರ್‌ಗಳಲ್ಲಿ ಬೌಲರ್‌ಗಳು ದುಬಾರಿ ರನ್‌ ಬಿಟ್ಟುಕೊಟ್ಟಿದ್ದು ತಂಡಕ್ಕೆ ಮುಳುವಾಯಿತು. ಆದ್ದರಿಂದ ಹಿಂದಿನ ಪಂದ್ಯದ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮ ಪ್ರದರ್ಶನ ನೀಡಿದರೆ ಮೈಸೂರು ವಾರಿಯರ್ಗೆ ಗೆಲುವು ಸುಲಭವಾಗಿ ಒಲಿಯಲಿದೆ. ಅಲ್ಲದೆ ತವರಿನ ಅಭಿಮಾನಿಗಳ ಪ್ರೋತ್ಸಾಹ ಕೂಡ ತಂಡಕ್ಕೆ ಲಭಿಸುವುದು ತಂಡಕ್ಕೆ ಮತ್ತಷ್ಟು ನೆರವಾಗಲಿದೆ. 

ಮಳೆಯ ಭೀತಿ: ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆಯ ಆಟ ಮತ್ತೆ ಶುರುವಾಗಿದೆ. ಪಂದ್ಯದ ಮುನ್ನಾದಿನವಾದ ಸೋಮವಾರ ಬೆಳಗ್ಗೆ ಮಳೆ ಸುರಿಯುವ ಜತೆಗೆ ದಿನವೀಡಿ ಮೋಡ ಕವಿದ ವಾತಾವರಣವಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಸಹಜವಾಗಿ ಮಳೆ ಅಡ್ಡಿಯಾಗುವ ಆತಂಕವಿದೆ. ಮಳೆಯಿಂದ ಸಂಪೂರ್ಣವಾಗಿ ಪಂದ್ಯ ರದ್ದಾಗದಿದ್ದರೂ, ಕೆಲವು ಗಂಟೆಗಳ ಆಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. 

* ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next