ಬಳ್ಳಾರಿ: ಮೈಸೂರು ದುರ್ಘಟನೆಯಲ್ಲಿ ಮೃತಪಟ್ಟಿದ್ದ ತಾಲೂಕಿನ ಸಂಗನಕಲ್ಲು ಗ್ರಾಮದ 9 ಜನರ ಮೃತದೇಹಗಳನ್ನು ಗ್ರಾಮದಲ್ಲಿ ಮಂಗಳವಾರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.
ಗ್ರಾಮದ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ವಿಧಿವಿಧಾನಗಳಿಂದ ಒಂದೇ ಸಾಲಿನಲ್ಲಿ ಗುಂಡಿಗಳನ್ನು ಅಗೆದು, ಏಕಕಾಲದಲ್ಲಿ ಮೃತದೇಹಗಳನ್ನು ಮಣ್ಣು ಮಾಡಲಾಯಿತು.
ಮೈಸೂರಿನಿಂದ ನಾಲ್ಕು ಆಂಬ್ಯುಲೆನ್ಸ್ ಗಳಲ್ಲಿ 9 ಜನರ ಮೃತದೇಹಗಳನ್ನು ತರಲಾಯಿತು. ಕೆಲಹೊತ್ತು ಮನೆಯಂಗಳದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು. ಕೆಲವರು ಹೂಮಾಲೆ ಹಾಕಿ ನಮಸ್ಕರಿಸಿ ಅಂತಿಮ ದರ್ಶನ ಪಡೆದರು. ಬಳಿಕ 12 ಗಂಟೆ ಸುಮಾರಿಗೆ ಅದೇ ಆಂಬ್ಯುಲೆನ್ಸ್ ಗಳಲ್ಲಿ ಮೃತದೇಹಗಳನ್ನು ಸಮೀಪದ ವೀರಶೈವ ರುದ್ರಭೂಮಿಗೆ ತಂದು ಸಾಮೂಹಿಕವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೊನೆಗೆ ಸಾರ್ವಜನಿಕರು ಮಣ್ಣು ನೀಡಿದ ಬಳಿಕ ಜೆಸಿಬಿ ಯಂತ್ರದಿಂದ ಕುಣಿಗಳನ್ನು ಮುಚ್ಚಲಾಯಿತು.
ಸ್ಥಳಕ್ಕೆ ಮಾಜಿ ಸಚಿವ ಬಿ.ಶ್ರೀರಾಮುಲು, ಸಚಿವ ಬಿ.ನಾಗೇಂದ್ರ ಅವರ ಸಹೋದರ ಬಿ.ವೆಂಕಟೇಶ್ ಪ್ರಸಾದ್, ಡಿಸಿ ಪವನ್ ಕುಮಾರ್ ಮಾಲಪಾಟಿ, ಎಡಿಸಿ ಮೊಹಮ್ಮದ್ ಝುಬೇರಾ, ಡಿಹೆಚ್ಒ ಹೆಚ್.ಎಲ್.ಜನಾರ್ಧನ ಸೇರಿ ಹಲವರು ಸ್ಥಳದಲ್ಲೇ ಇದ್ದು, ಅಂತ್ಯಕ್ರಿಯೆ ನೆರವೇರಿಸಲು ಅನುವು ಮಾಡಿಕೊಟ್ಟರು.
ಈ ವೇಳೆ ಡಿಸಿ ಪವಬ್ ಕುಮಾರ್ ಮಾಲಪಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಘೋಷಿಸಿರು ಪರಿಹಾರ ವಿತರಿಸಲು ಮೃತರ ಸಂಬಂಧ ಪಟ್ಟವರ ಬ್ಯಾಂಕ್ ಖಾತೆಗಳ ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡು ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರ ಪೈಕಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಈ ಕುರಿತು ನಮ್ಮ ಡಿಹೆಚ್ ಒ ಅವರು ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.