ಕಡಬ: ಕುಟ್ರಾಪ್ಪಾಡಿ ಗ್ರಾ. ಪಂ. ವ್ಯಾಪ್ತಿಯ ಬಲ್ಯ ಪರಿಸರದಲ್ಲಿ “ಜನುಮದಾತೆ ಸೇವಾ ಟ್ರಸ್ಟ್ ಬೆಂಗಳೂರು’ ಸಂಸ್ಥೆಯ ಕರಪತ್ರ ಹಂಚುತ್ತಾ ದೇಣಿಗೆ ಸಂಗ್ರಹಿಸುತ್ತಿದ್ದ ಮೈಸೂರಿನ ವ್ಯಕ್ತಿಗಳನ್ನು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಡಬ ಪೊಲೀಸರು ವಶಕ್ಕೆ ಪಡೆದು, ಬಳಿಕ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.
ಮಿನಿ ಗೂಡ್ಸ್ ವಾಹನದಲ್ಲಿ ಆಗಮಿಸಿದ್ದ ತಂಡವೊಂದು ವೃದ್ಧಾಶ್ರಮ, ಅನಾಥಾಶ್ರಮ ಇತ್ಯಾದಿ ನಡೆಸುತ್ತಿರುವುದಾಗಿ ಹೇಳಿ ಬಲ್ಯ ಪರಿಸರದಲ್ಲಿ ರವಿವಾರ ಸಂಜೆ ಹಳೆಯ ಬಟ್ಟೆ ಹಾಗೂ ದೇಣಿಗೆ ಸಂಗ್ರಹಿಸುತ್ತಿತ್ತು.
ಇವರ ಬಗ್ಗೆ ಅನುಮಾನಗೊಂಡು ಸ್ಥಳೀಯರು ಗ್ರಾಮ ಪಂಚಾಯತ್‌ಗೆ ದೂರವಾಣಿ ಮೂಲಕ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫೆ†ಡ್ ಲಾರೆನ್ಸ್ ರೋಡ್ರಿಗಸ್ ಅವರು ದೇಣಿಗೆ ಸಂಗ್ರಹಿಸುತ್ತಿದವರಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ, ಅದರಲ್ಲಿದ್ದ ಟ್ರಸ್ಟ್ ಮುಖ್ಯಸ್ಥರ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗಲೂ ಸಮರ್ಪಕ ಉತ್ತರ ಸಿಗಲಿಲ್ಲ. ಬಳಿಕ ಅವರನ್ನು ವಾಹನ ಸಹಿತ ಕಡಬ ಠಾಣೆಗೆ ಕರೆದೊಯ್ಯಲಾಯಿತು. ಪೊಲೀಸರ ವಿಚಾರಣೆ ವೇಳೆಯೂ ಸೂಕ್ತ ಉತ್ತರ ಸಿಗಲಿಲ್ಲ. ಅವರ ವಾಹನದ ದಾಖಲೆಗಳೂ ಸಮರ್ಪಕವಾಗಿರಲಿಲ್ಲ. ಬಳಿಕ ಅವರಿಗೆ ದಂಡ ವಿಧಿಸಿ, ಸೂಕ್ತ ಅನುಮತಿ ಪತ್ರ ಇಲ್ಲದೇ ದೇಣಿಗೆ ಸಂಗ್ರಹಿಸದಂತೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಯಿತು.
ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವವರು ಅಥವಾ ಅನುಮತಿ ರಹಿತವಾಗಿ ದೇಣಿಗೆ ಸಂಗ್ರಹಿಸುವವರು ಕಂಡುಬಂದರೆ ಅಂಥವರ ಮಾಹಿತಿಯನ್ನು ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಪೊಲೀಸ್ ಠಾಣೆಗೆ ನೀಡುವುದು ಗ್ರಾಮಸ್ಥರ ಕರ್ತವ್ಯ. ಗ್ರಾಮಸ್ಥರು ಜಾಗೃತರಾಗಿದ್ದರೆ ಅಪರಿಚಿತರಿಂದ ಆಗುವ ಕಳ್ಳತನ, ವಂಚನೆ ಪ್ರಕರಣಗಳನ್ನು ತಡೆಗಟ್ಟಬಹುದು.
ವಿಲ್ಫೆ†ಡ್ ಲಾರೆನ್ಸ್ ರೋಡ್ರಿಗಸ್, ಕುಟ್ರಾಪ್ಪಾಡಿ ಪಿಡಿಒ