ಮೈಸೂರು: ನಗರದಲ್ಲಿ ಗುರುವಾರ ಸಂಜೆ ಬಿದ್ದ ಭಾರೀ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಹಲವು ಪ್ರದೇಶಗಳು ಹಾನಿಗೊಳಗಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಮನೆಗಳಿಗೆ ನುಗ್ಗಿದ ನೀರು:ಕುವೆಂಪು ನಗರ, ಜಯನಗರ, ಸರಸ್ವತಿಪುರಂ, ಚಾಮರಾಜಪುರಂ, ಕೃಷ್ಣಮೂರ್ತಿಪುರಂ ಸೇರಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್, ಟೆಲಿಫೋನ್ , ಕೇಬಲ್ ಸಂಪರ್ಕವಿಲ್ಲದೇ ಜನರು ಪರದಾಡು ವಂತಾಯಿತು. ಮಳೆಯಿಂದ ಕುವೆಂಪುನಗರ, ಜಯ ನಗರ ಹಾಗೂ ಸರಸ್ವತಿಪುರಂನಲ್ಲಿ ಹೆಚ್ಚು ಹಾನಿಯಾಗಿದ್ದು, 2 ಕಾರು, ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗಳು ಹಾಗೂ ಬೈಕ್‌ಗಳಿಗೆ ಹಾನಿಯಾಗಿದೆ. ಜೊತೆಗೆ ಇಟ್ಟಿಗೆಗೂಡಿನಲ್ಲಿ ಮನೆ ಚಾವಣಿ ಹಾರಿಹೋಗಿರುವ ಘಟನೆ ನಡೆದಿದೆ. ಇದಲ್ಲದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಕೆಲವು ಮನೆಗಳಿಗೆ ನೀರು ತುಂಬಿಕೊಂಡಿತ್ತು.
ಶುಕ್ರವಾರ ರಾತ್ರಿ ಮರ ಹಾಗೂ ತುಂಡಾದ ವಿದ್ಯುತ್ ಕಂಬ ತೆರವು ಕಾರ್ಯಾಚರಣೆ ಮುಗಿಯಲಿದ್ದು, ನಂತರ ವಿದ್ಯುತ್ ಕಂಬ ಹಾಗೂ ಸಂಪರ್ಕ ದುರಸ್ತಿ ಕಾಮಗಾರಿ ನಡೆಯಲಿದೆ. ಕುವೆಂಪು ನಗರ ಸೇರಿ ಹಲವು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಷ್ಟ. ಮರ ತೆರವು ಕಾರ್ಯಾಚರಣೆ ಹಾಗೂ ಕಂಬ ದುರಸ್ತಿಯಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಇಷ್ಟೇ ಅಲ್ಲದೆ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಮರ ಉರುಳಿರುವುದು, ವಿದ್ಯುತ್ ಸಂಪರ್ಕ ಕಡಿತ ಸೇರಿ ಮಳೆ ಹಾನಿ ಸಂಬಂಧ ಗುರುವಾರ ರಾತ್ರಿಯೇ ಪಾಲಿಕೆ ಕಂಟ್ರೋಲ್ ರೂಂಗೆ ನೂರಕ್ಕೂ ಹೆಚ್ಚು ದೂರು ಬಂದಿವೆ ಎಂದು ಅಧಿಕಾರಿಗಳು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಸರಸ್ವತಿ ಪುರಂ, ಕುವೆಂಪು ನಗರ, ಜಯ ನಗರ, ಕೃಷ್ಣಮೂರ್ತಿ ಪುರಂ, ಚಾಮರಾಜ ಪುರಂನಲ್ಲಿ ಹೆಚ್ಚು ಮರ ಉರುಳಿವೆ. ಕುವೆಂಪು ನಗರದ ಆದಿಚುಂಚನಗಿರಿ ರಸ್ತೆ, ಉದಯ ರವಿ ರಸ್ತೆಯ ಉದ್ದಕ್ಕೂ ಇಕ್ಕೆಲದಲ್ಲಿದ್ದ ಮರದ ಕೊಂಬೆಗಳು ಮುರಿದು ಬಿದ್ದಿವೆ. ವಿದ್ಯಾವರ್ಧಕ ಶಾಲಾ ಮುಂಭಾಗದ ರಸ್ತೆಯಲ್ಲಿ ಮರ ಬಿದ್ದು 2 ಕಾರು ಜಖಂಗೊಂಡರೆ, ಕುವೆಂಪು ನಗರ ಒಂದರಲ್ಲೇ 20ಕ್ಕೂ ಹೆಚ್ಚು ವಿದ್ಯುತ್ ಕಂಬ ಉರುಳಿವೆ. ನಗರದ ಬೇರೆ ಪ್ರದೇಶಗಳಲ್ಲಿ 10 ಕಂಬ ಸೇರಿ 30ಕ್ಕೂ ಹೆಚ್ಚು ವಿದ್ಯುತ್ ಕಂಬ ಮುರಿದು ಬಿದ್ದಿವೆ. ಶುಕ್ರವಾರ ಬೆಳಗ್ಗೆಯಿಂದಲೇ ಮರ ತೆರವು ಕಾರ್ಯಾಚರಣೆಯನ್ನು ಆಭಯ ತಂಡ ಆರಂಭಿಸಿ, ಮರ ತೆರವುಗೊಳಿಸಿದ ನಂತರ ವಿದ್ಯುತ್ ಕಂಬಗಳ ದುರಸ್ತಿ ಕಾಮಗಾರಿ ನಡೆಯಿತು. ರಾತ್ರಿ ಹೊತ್ತಿಗೆ ಕುವೆಂಪು ನಗರ, ಕೃಷ್ಣಮೂರ್ತಿಪುರಂ, ಚಾಮರಾಜಪುರಂ ಸೇರಿ ಮತ್ತಿತರರ ಪ್ರದೇಶಕ್ಕೆ ವಿದ್ಯುತ್ ಹಾಗೂ ಕೇಬಲ್ ಸಂಪರ್ಕ ಲಭ್ಯವಾಯಿತು. ಅಗ್ರಹಾರ, ರಾಮಾನುಜ ರಸ್ತೆ, ಶಾಂತಲ ಚಿತ್ರ ಮಂದಿರ, ಸರಸ್ವತಿ ಪುರಂ ಬೇಕ್‌ಪಾಯಿಂಟ್ ವೃತ್ತ, ಅಶೋಕ ಪುರಂ, ಜಗನ್ಮೋಹ ಅರಮನೆ ಸಮೀಪ, ಗಾಯಿತ್ರಿ ಪುರಂ, ಕೆ.ಜಿ.ಕೊಪಲ್, ಜೆ.ಪಿ.ನಗರ, ದೊಡ್ಡೆಕೆರೆ ಮೈದಾನ, ಮಾನಸಗಂಗೋತ್ರಿ ಕ್ಯಾಂಪಸ್ ಬಳಿ ಒಂದೆರಡು ಮರಗಳು ಉರುಳಿವೆಯಾದರೂ ವಿದ್ಯುತ್ ಕಂಬಗಳ ಹೊರತಾಗಿ ಯಾವುದೇ ಹಾನಿಯಾಗಿಲ್ಲ.
Advertisement
ಗುರುವಾರ ಸಂಜೆ 5.30ಕ್ಕೆ ಆರಂಭವಾದ ಭಾರೀ ಮಳೆ, ಗಾಳಿ ಸಹಿತ ಜೋರು ಮಳೆಗೆ ನಗರದ 50ಕ್ಕೂ ಹೆಚ್ಚು ಪ್ರಮುಖ ರಸ್ತೆಗಳಲ್ಲಿ ಮರ ಮತ್ತು ಮರದ ಕೊಂಬೆಗಳು ಮುರಿದು ಬಿದ್ದು, ಅಪಾರ ಹಾನಿಯಾಗಿದೆ. ದೊಡ್ಡ, ದೊಡ್ಡ ಮರಗಳು ಉರುಳಿ ಬಿದ್ದ ಪರಿಣಾಮ 40ಕ್ಕೂ ಹೆಚ್ಚು ವಿದ್ಯುತ್ ಕಂಬ ತುಂಡಾಗಿದ್ದು, ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿತ್ತು.
Related Articles
ಅಪಾಯದ ಸ್ಥಿತಿಯಲ್ಲಿದ್ದ ಮರಗಳ ತೆರವು ಕಾರ್ಯ:
ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಹಲವು ಮರಗಳು ಮತ್ತು ಮರದ ಕೊಂಬೆಗಳು ರಸ್ತೆ, ವಾಹನಗಳ ಮೇಲೆ ಉರುಳಿ ಬಿದ್ದಿವೆ. ನಗರಪಾಲಿಕೆ ತಕ್ಷಣವೇ ಕಾರ್ಯಾಚರಣೆಗೆ ಇಳಿದು ಗುರುವಾರ ರಾತ್ರಿಯೇ ರಸ್ತೆ ಮೇಲಿ ಬಿದ್ದಿದ್ದ ಮರಗಳನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. 3 ಅಭಯ್ ತಂಡ, 5 ಖಾಸಗಿ ತಂಡ ಸೇರಿ ನೂರಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಗೆ ಇಳಿದು, ಶುಕ್ರವಾರ ಪೂರ್ತಿ ರಸ್ತೆ, ಫುಟ್ಪಾತ್ ಮೇಲೆ ಉರುಳಿ ಬಿದ್ದಿರುವ ಮರ ತೆರವುಗೊಳಿಸಲಾಗಿದೆ. ಜೊತೆಗೆ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ನಗರ ಪಾಲಿಕೆ ಎಂಜಿನಿಯರ್ ಸದಾಶಿವ ಚಟ್ನಿ ‘ಉದಯವಾಣಿ’ಗೆ ತಿಳಿಸಿದ್ದಾರೆ.
Advertisement