ಮುಂಬಯಿ: ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ಇದರ 33ನೇ ವಾರ್ಷಿಕೋತ್ಸವದ ಅಂಗವಾಗಿ ಕೆ. ಎಸ್. ನರಸಿಂಹ ಸ್ವಾಮಿ ನೆನಪಿನ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಮಾ.11ರಂದು ಮೈಸೂರಿನಲ್ಲಿರುವ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಂಬಯಿಯ ಹಿರಿಯ ಸಾಹಿತಿ ಡಾ| ಜಿ. ಡಿ. ಜೋಶಿ ಅವರ ಮಿಂಚಿದ ಕ್ಷಣಗಳು ಕೃತಿಯನ್ನು ಅನಾವರಣಗೊಳಿಸಲಾಯಿತು. ಹಾಗೆಯೇ, ಡಾ| ಜಿ.ಡಿ. ಜೋಶಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
ಮಹಿಳಾ ಸಂಘಟನೆ ಹಾಗೂ ಹೊರನಾಡಿನಲ್ಲಿ ಕನ್ನಡ ಸೇವೆಗಾಗಿ ಶ್ರೀ ಶಕ್ತಿ ಮಹಿಳಾ ಮಂಡಳಿ ಥಾಣೆ, ಮಹಾರಾಷ್ಟ್ರ ಇದರ ಅಧ್ಯಕ್ಷೆ ಉಷಾ ಪಿ. ಹೆಗಡೆ ಹಾಗೂ ಹೊರನಾಡಿನಲ್ಲಿ ಸಾಹಿತ್ಯ , ಯಕ್ಷಗಾನ ಕ್ಷೇತ್ರದಲ್ಲಿ ಮತ್ತು ಕನ್ನಡ ಸೇವೆಗಾಗಿ ಮುಂಬಯಿಯ ಸಾಹಿತಿ, ಕಲಾವಿದ ಗುಣಪಾಲ್ ಉಡುಪಿ ಅವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಹೊರನಾಡಿನಲ್ಲಿ ಕನ್ನಡ ಸಾಹಿತ್ಯ ಸೇವೆಗಾಗಿ ಮುಂಬಯಿಯ ಲೇಖಕಿ ಶಾರದಾ ವಿ. ಅಂಚನ್ ಅವರಿಗೆ ಪ್ರೊ| ಎಚ್ಚೆಸ್ಕೆ ಸಾಹಿತ್ಯ ಪ್ರಶಸ್ತಿ ಮತ್ತು ಅವರ ಬಾಳ ಚಂದಿರ ಕವಿತೆಗಾಗಿ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಕಾವ್ಯ ಪುರಸ್ಕಾರವನ್ನು ಪ್ರದಾನಿಸಲಾಯಿತು.
ವೇದಿಕೆಯಲ್ಲಿ ಮಹಾಕವಯತ್ರಿ ಡಾ| ಲಲಿತಾ ರಾಜಶೇಖರ್ ಮೈಸೂರು, ಹಿರಿಯ ಸಾಹಿತಿ, ಅಂಕಣಕಾರ ಪ್ರೊ| ಕೆ. ಭೆ çರವ ಮೂರ್ತಿ, ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಪುತ್ರರಾದ ಸಾಹಿತಿ ಕೆ.ಎನ್. ಮಹಾಬಲ ಹಾಗೂ ಸಾಹಿತಿಗಳಾದ ಡಾ| ಕೆ. ರಘುರಾಂ ವಾಜಪೇಯಿ, ಡಾ| ಎ. ಪುಷ್ಪಾ ಅಯ್ಯಂಗಾರ್, ಎ. ಹೇಮಗಂಗಾ, ಮಂಜುಳಾ ಉಮೇಶ್ ಹಾಗೂ ಕಾರ್ಯಕ್ರಮದ ಆಯೋಜಕರಾದ ಭೇರ್ಯ ರಾಮಕುಮಾರ್ ಉಪಸ್ಥಿತರಿದ್ದರು.