Advertisement

ಮೈಸೂರು: ಕಾರ್ಮಿಕರ ಮಕ್ಕಳಿಗೆ ನೆರಳಾದ ಕೂಸಿನ ಮನೆ

01:04 PM Feb 22, 2024 | Team Udayavani |

ಉದಯವಾಣಿ ಸಮಾಚಾರ
ಮೈಸೂರು: ಮನರೇಗಾ ಕೆಲಸದಲ್ಲಿ ತೊಡಗಿಸಿಕೊಂಡಿರು ವ ಮಹಿಳಾ ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡುವ ಸಲುವಾಗಿ ಜಿಲ್ಲೆಯ 80 ಕಡೆಗಳಲ್ಲಿ ಕೂಸಿನ ಮನೆ ಕೇಂದ್ರ ಸ್ಥಾಪಿಸಲಾಗಿದೆ.

Advertisement

ಜಿಪಂನಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರ ಮೂರು ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಆರಂಭಿಸಲಾಗಿರುವ ಕೂಸಿನ ಮನೆ ಮಹಿಳೆಯರಿಗೆ ವರದಾ ನವಾಗಿ ಪರಿಣಮಿಸಿದೆ.

ಮನ ರೇಗ ಮಹಿಳಾ ಕಾರ್ಮಿಕ ಮಕ್ಕಳ ಪೋಷಣೆ, ರಕ್ಷಣೆ, ಪಾಲನೆ ಹಾಗೂ ಪೌಷ್ಟಿಕತೆ ಹೆಚ್ಚಳಕ್ಕೆ ಕೂಸಿನ ಮನೆ ಕೇಂದ್ರ ಪ್ರಮುಖವಾಗಿದೆ. ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಇರಿಸಿ ನೆಮ್ಮದಿಯಿಂದ ಕೂಲಿ ಮಾಡಲು ಈ ಕೇಂದ್ರ ಪೂರಕವಾಗಿದೆ.

80 ಕಡೆಗಳಲ್ಲಿ ಕೇಂದ್ರ ಪ್ರಾರಂಭ: ಜಿಲ್ಲೆಯಲ್ಲಿ ಈಗಾಗಲೇ 80 ಕಡೆಗಳಲ್ಲಿ ಕೇಂದ್ರ ಪ್ರಾರಂಭವಾಗಿದ್ದು, ಎಚ್‌.ಡಿ. ಕೋಟೆಯಲ್ಲಿ 7, ಹುಣಸೂರಿನಲ್ಲಿ 16, ಕೆ.ಆರ್‌. ನಗರದಲ್ಲಿ 6, ಮೈಸೂರು 12, ನಂಜನಗೂಡು 11, ಪಿರಿಯಾಪಟ್ಟಣ 12, ಸರಗೂರು 6, ತಿ.ನರಸೀಪುರ 10 ಕಡೆಗಳಲ್ಲಿ ಕೂಸಿನ ಮನೆ ಕಾರ್ಯಾರಂಭ ಮಾಡಿ ಮಕ್ಕಳ ಪಾಲನೆ, ಪೋಷಣೆಗೆ ಶ್ರಮಿಸುತ್ತಿವೆ.

ಮುಂದಿನ ಮಾರ್ಚ್‌ನಲ್ಲಿ ಜಿಲ್ಲೆಗೆ ನಿಗದಿಪಡಿಸಿರುವ 109 ಕೂಸಿನ ಕೇಂದ್ರ ಸ್ಥಾಪನೆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಹೆಜ್ಜೆಯನ್ನಿರಿಸಿದ್ದು, ಕೂಸಿನ ಮನೆ ನಿರ್ವಹಣೆಗಾಗಿ ಸರ್ಕಾರದಿಂದ ಮೈಸೂರು ಜಿಲ್ಲೆಗೆ 1 ಕೋಟಿ 9 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.

Advertisement

ಜಾಬ್‌ ಕಾರ್ಡ್‌ದಾರರೇ ಆರೈಕೆದಾರರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಾಬ್‌ ಕಾರ್ಡ್‌ ಪಡೆದಿರುವ 10ನೇ ತರಗತಿ ಪಾಸಾಗಿರುವ ಮಹಿಳಾ ಕಾರ್ಮಿಕರೇ ಕೇರ್‌ ಟೇಕರ್ಸ್‌ ಆಗಿ ಕೂಸಿನ ಮನೆ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಕೂಸಿನ
ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಕುರಿತು ಈಗಾಗಲೇ ಮೊದಲನೇ ಹಂತದಲ್ಲಿ 351 ಆರೈಕೆ ದಾರರಿಗೆ ತರಬೇತಿ ನೀಡಲಾಗಿದೆ. ಪ್ರತಿ ಕೇಂದ್ರಕ್ಕೆ ಸುಮಾರು 25 ಮಕ್ಕಳಿಗೆ ಅವಕಾಶವಿದ್ದು, ಪ್ರತಿದಿನ ಕನಿಷ್ಠ 6-7 ಗಂಟೆ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಆರೈಕೆದಾರರದ್ದಾ ಗಿದೆ.

ಕೇಂದ್ರದಲ್ಲಿ ಮಕ್ಕಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟ, ಸಂಜೆ ಲಘು ಉಪಾಹಾರ ನೀಡಲಾಗುತ್ತಿದ್ದು, ಮಕ್ಕಳ ಹಾಜರಾತಿಯನ್ನೂ ನಿರ್ವಹಿಸಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ ಆಯಾ ಗ್ರಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ 11 ಜನರ ಸಮಿತಿ ಇರಲಿದೆ.

ಸರ್ಕಾರಿ ಕಟ್ಟಡಗಳಲ್ಲೇ ಕೇಂದ್ರ: ಎಲ್ಲೆಲ್ಲಿ ಮ-ನರೇಗಾ ಕಾಮಗಾರಿ ಹೆಚ್ಚೆಚ್ಚು ನಡೆಯುತ್ತಿದೆಯೊ ಆಯಾ ಭಾಗದಲ್ಲಿನ ಸರ್ಕಾರಿ ಕಟ್ಟಡಗಳಲ್ಲೆ ಕೂಸಿನ ಮನೆ ಕಾರ್ಯಾರಂಭಗೊಂಡಿದೆ. ಶಾಲಾ ಕಟ್ಟಡ, ಸಮುದಾಯ ಭವನ, ಗ್ರಾ.ಪಂ ಕಟ್ಟಡ ಸೇರಿ ಇನ್ನಿತರೆ ಸರ್ಕಾರಿ ಕಟ್ಟಡಗಳನ್ನು ಬಳಸಿ ಕೊಳ್ಳಲಾಗುತ್ತಿದೆ.

ಕೂಸಿನ ಮನೆಯಲ್ಲಿ ಮಕ್ಕ ಳಿಗೆ ಪೌಷ್ಟಿಕ ಆಹಾರ ವಿತರಣೆ
ಕೂಸಿನ ಮನೆ ಕೇಂದ್ರಕ್ಕೆ ಬರುವ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ವಾರದಲ್ಲಿ ಆರು ದಿನವೂ ವಿವಿಧ ರೀತಿಯ ಆಹಾರ ವಿತರಿ ಸಲಾಗುತ್ತಿದೆ. ಸೋಮವಾರದಂದು ಹಾಲು, ದಾಲ್‌ ಕಿಚಡಿ, ನ್ಯೂಟ್ರಿಮಿಕ್ಸ್‌ , ಮಂಗಳವಾರ ಹಾಲು, ಸಿಹಿ ಪೊಂಗಲ್, ನ್ಯೂಟ್ರಿಮಿಕ್ಸ್, ಬುಧವಾರ ಹಾಲು, ಮೊಳಕೆ ಬರಿಸಿದ ಗೋದಿ ಪಾಯಸ, ಶೇಂಗಾ ಲಾಡು, ಗುರುವಾರದಂದು ಹಾಲು, ದಾಲ್‌ ಕಿಚಡಿ, ನ್ಯೂಟ್ರಿಮಿಕ್ಸ್‌ , ಶುಕ್ರವಾರ ದಿನ ದಂದು ಹಾಲು, ಸಿಹಿ ಪೊಂಗಲ್‌, ನ್ಯೂಟ್ರಿಮಿಕ್ಸ್ , ಶನಿವಾರದಂದು ಮೊಳಕೆ ಬರಿಸಿದ ಗೋದಿ ಪಾಯಸ, ನ್ಯೂಟ್ರಿಮಿಕ್ಸ್ ವಿತರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಈ ರೀತಿಯ ಆರೋಗ್ಯಕರ ಪೌಷ್ಟಿಕ ಆಹಾರವನ್ನು ಒದಗಿಸುತ್ತಿರುವುದರಿಂದ ಹಾಗೂ ಆರೋಗ್ಯ ತಪಾಸಣೆ ಕೈಗೊಳ್ಳುವುದರಿಂದ ಗ್ರಾಮೀಣ ಭಾಗದ ಮಕ್ಕಳು ಪದೆ ಪದೇ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಪ್ಪಿಸಲು ಸಹಕಾರಿಯಾಗಿದೆಎಂದು ಜಿಪಂ ಪ್ರಕಟಣೆಯಲ್ಲಿ ತಿಳಿಸಿದೆ.

ಮನರೇಗಾ ಯೋಜನೆಯಲ್ಲಿ ಮಹಿಳಾ ಕಾರ್ಮಿಕರಿಗೆ ಸಹಕಾರಿಯಾಗಲು ಈ ಯೋಜನೆ ಜಾರಿಗೆ ತರಲಾಗಿದೆ. ಚಿಕ್ಕ ಮಕ್ಕಳ
ತಾಯಂದಿರು ಮಕ್ಕಳ ಲಾಲನೆ-ಪಾಲನೆ ಯಲ್ಲಿ ತೊಡಗುವುದರಿಂದ ಮನರೇಗಾ ಯೋಜನೆಯ ಪ್ರಯೋಜನ ಪಡೆಯಲು
ಸಾಧ್ಯವಾಗುತ್ತಿರಲಿಲ್ಲ. ಪ್ರಸ್ತುತ ಈ ಯೋಜನೆಯು ಮಕ್ಕಳಿಗೆ ಆಶ್ರಯ ಹಾಗೂ ಮಹಿಳಾ ಕೂಲಿಕಾರರಿಗೆ ಕೂಲಿ ಕೆಲಸ ಹಾಗೂ
ಆರ್ಥಿಕ ಸ್ವಾವಲಂಭಿಯಾಗಲು ಸಹಕಾರಿಯಾಗುತ್ತದೆ.
●ಕೆ.ಎಂ.ಗಾಯಿತ್ರಿ, ಜಿಪಂ ಸಿಇಒ ಮೈಸೂರು

■ ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next