Advertisement

Sculptor Arun yogiraj: ಶಿಲ್ಪಿ ಅರುಣ್‌ ಯೋಗಿರಾಜ್‌ ಕೆತ್ತಿದ ನಂದಿ ವಿಗ್ರಹ ಅಮರನಾಥಕ್ಕೆ

10:11 PM May 30, 2024 | Team Udayavani |

ಮೈಸೂರು: ಕೇದಾರನಾಥದ ಶಂಕರಾಚಾರ್ಯರ ಪ್ರತಿಮೆ, ದೆಹಲಿ ಕರ್ತವ್ಯ ಪಥದ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆ ಹಾಗೂ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಬಳಿಕ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ರಿಂದ ಮತ್ತೂಂದು ದಾಖಲೆ  ಸೃಷ್ಟಿಯಾಗಿದ್ದು, ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶ್ಮೀರದ ಅಮರನಾಥ ದೇಗುಲಕ್ಕೆ ಅರುಣ್‌ ಯೋಗಿರಾಜ್‌ ನಂದಿ ವಿಗ್ರಹವನ್ನು ಕೆತ್ತನೆ ಮಾಡಿಕೊಟ್ಟಿದ್ದಾರೆ.

Advertisement

3 ಅಡಿ ಎತ್ತರದ ವಿಗ್ರಹ: ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಕೃಷ್ಣ ಶಿಲೆಯಿಂದಲೇ ನಂದಿ ವಿಗ್ರಹ ಮಾಡಲಾಗಿದ್ದು, 3 ಅಡಿ ಎತ್ತರದ ನಂದಿ ವಿಗ್ರಹವು ನಂದಿಯ ನೈಜ್ಯತೆಯ ಪ್ರತಿರೂಪದಂತಿದೆ. ಕೊರಳಲ್ಲಿ ಗಂಟೆ, ಗೆಜ್ಜೆ, ಸರಪಳಿ, ಹಗ್ಗದ ಸೂಕ್ಷ್ಮ ಕೆತ್ತನೆ ಒಳಗೊಂಡಿದೆ. ಈ ನಂದಿ ವಿಗ್ರಹ ಅಮರನಾಥ ಹಿಮದ ಉದ್ಭವ ಲಿಂಗದ ಮುಂದೆ ಪ್ರತಿಷ್ಠಾಪನೆಯಾಗಲಿದೆ.

ಅಮರನಾಥ ಸ್ಥಳ ದುರ್ಗಮ ಪ್ರದೇಶದಲ್ಲಿರುವ ಕಾರಣ ಮೂರ್ತಿಯನ್ನು ಉದ್ದೇಶಿತ ಸ್ಥಳಕ್ಕೆ ಸಾಗಿಸಲು ಅನುಕೂಲವಾಗುವ ದೃಷ್ಟಿಯಿಂದ ದೇಗುಲದ ಟ್ರಸ್ಟ್‌ 3 ಅಡಿ ಎತ್ತರದ ಮೂರ್ತಿ ಕೆತ್ತನೆ ಮಾಡುವಂತೆ ತಿಳಿಸಿದೆ.

ಎರಡೂವರೆ ತಿಂಗಳ ಹಿಂದೆ ಮನವಿ: ಎರಡೂವರೆ ತಿಂಗಳ ಹಿಂದೆ ಅರುಣ್‌ ಯೋಗಿರಾಜ್‌ ಅವರಿಗೆ ಅಮರನಾಥ್‌ ಬೋರ್ಡ್‌ನಿಂದ ನಂದಿ ವಿಗ್ರಹ ನಿರ್ಮಾನಕ್ಕೆ ಮನವಿ ಬಂದಿತ್ತು. ಅದರಂತೆ 2 ತಿಂಗಳಲ್ಲಿ ಶಿಲ್ಪವನ್ನು ಕೆತ್ತಿರುವ ಅರುಣ್‌, ಮೇ 29ರಂದು ಮೈಸೂರಿನಿಂದ ಅಮರನಾಥ್‌ಗೆ ಕಳುಹಿಸಿಕೊಟ್ಟಿದ್ದಾರೆ.

ನಂದಿ ವಿಗ್ರಹ ಸುಂದರವಾಗಿ ಮೂಡಿಬಂದಿದ್ದು, ಮೈಸೂರಿನಿಂದ ದೂರದ ಕಾಶ್ಮೀರದ ಅಮರನಾಥಗೆ ಗುರುವಾರ ಸಂಜೆ ಕಳುಹಿಸಿಕೊಡಲಾಗಿದೆ. ಕಲೆಯನ್ನು ಶ್ರದ್ಧೆಯಿಂದ ಕಲಿತಿದ್ದಕ್ಕಾಗಿ ದೇವರು ಈ ರೀತಿಯ ಪ್ರತಿಫ‌ಲ ನೀಡುತ್ತಿದ್ದಾನೆ. ದಕ್ಷಿಣ ಭಾರತದ ಶೈಲಿಯಲ್ಲಿದ್ದು, ಉತ್ತರ ಭಾರತದಲ್ಲೂ ನಮ್ಮ ಕಲೆ ಪ್ರಸಿದ್ಧಿಗೆ ಬರಲಿದೆ.– ಅರುಣ್‌ ಯೋಗಿರಾಜ್‌, ಶಿಲ್ಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next