Advertisement

ಮೈಸೂರು ರಾಜಮನೆತನದ ಕೊಡುಗೆ ಅಪಾರ

12:52 PM Dec 18, 2017 | Team Udayavani |

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಮೈಸೂರು ಅರಸರ ಕೊಡುಗೆ ಅಪಾರ ಎಂದು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಬಣ್ಣಿಸಿದರು. ನಗರದಲ್ಲಿ ಭಾನುವಾರ ದಿ ಮಿಥಿಕ್‌ ಸೊಸೈಟಿ ಹಮ್ಮಿಕೊಂಡಿದ್ದ ಡ್ಯಾಲಿ ಮೆಮೋರಿಯಲ್‌ ಹಾಲ್‌ನ ಶತಮಾನೋತ್ಸವ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಐದೇ ವರ್ಷಕ್ಕೆ ಅವುಗಳ ಏಳ್ಗೆ ಮಾಡದೇ ಸುಮ್ಮನಾಗುತ್ತಾರೆ. ಆದರೆ ಮೈಸೂರು ಮಹಾರಾಜ ವಂಶಸ್ಥರು ಇದಕ್ಕೆ ಅಪವಾದವೆನ್ನುವಂತೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಜತೆಗೆ ಅವುಗಳ ಶ್ರೇಯೋಭಿವೃದ್ಧಿಗೂ ಪಣತೊಟ್ಟಿದ್ದರು. ಹೀಗಾಗಿ ಇಂದಿಗೂ ಅನೇಕ ಶಿಕ್ಷಣ ಸಂಸ್ಥೆಗಳು ನಮ್ಮ ಮುಂದೆ ಜೀವಂತವಾಗಿವೆ ಎಂದರು.

ಮೈಸೂರು ಅರಸರು ಮಿಥಿಕ್‌ ಸೊಸೈಟಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ. ಇಂತಹ ಸಂಘ ಸಂಸ್ಥೆಗಳೊಂದಿಗೆ ರಾಜಮನೆತನದವರು ಹೊಂದಿದ್ದ ಸಂಬಂಧ ಹಾಗೇ ಮುಂದುವರಿಯಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಿ ಮಿಥಿಕ್‌ ಸೊಸೈಟಿ ಉಪಾಧ್ಯಕ್ಷ ಪ್ರೊ.ಕೃ.ನರಹರಿ ಮಾತನಾಡಿ, ಮೈಸೂರು ಮಹಾರಾಜ ವಂಶಸ್ಥರು ಜನೋಪಕಾರಿ ಕೆಲಸಗಳಿಗೆ ಜನಜನಿತರು. ಹೀಗಾಗಿ ಈ ರಾಜಮನೆತನವನ್ನು ಕನ್ನಡಿಗರು ಇಂದಿಗೂ ನೆನೆಯುತ್ತಾರೆ ಎಂದು ಹೇಳಿದರು.

ದಿ ಮಿಥಿಕ್‌ ಸೊಸೈಟಿ ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಏಳು ಬೀಳುಗಳನ್ನು ಕಂಡಿದ್ದರೂ ಇಂದಿಗೂ ತನ್ನ ಅಸ್ಥಿತ್ವ ಉಳಿಸಿಕೊಂಡಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರ ಸೊಸೈಟಿಯ ಆಸ್ಥಿ ಮುಟ್ಟುಗೋಲು ಹಾಕಿಕೊಂಡಿತ್ತು. ನಂತರ ಕಾನೂನು ಹೋರಾಟದಲ್ಲಿ ಸೊಸೈಟಿ ಜಯಿಸಿತು.

Advertisement

ಮೈಸೂರು ರಾಜವಂಶದ ಜತೆ ಸೊಸೈಟಿ ನಿಕಟ ಸಂಬಂಧ ಹೊಂದಿದ್ದು, ಅದನ್ನು ಹಾಗೇ ಮುಂದುವರಿಸಿಕೊಂಡು ಹೋಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಇದೇ ವೇಳೆ ಮೈಸೂರು ಅರಸರ ಕೊಡುಗೆಗಳ ಕುರಿತ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಲಾಯಿತು.

ಅರಸರ ಕಾಲದಲ್ಲೇ ತಿಂಗಳಿಗೆ 30 ಬಾಲ್ಯ ವಿವಾಹ!: “ಮೈಸೂರಿನ ಅರಸರ ಕಾಲದಲ್ಲೇ ಪ್ರತಿ ತಿಂಗಳು ಸುಮಾರು 30 ಬಾಲ್ಯವಿವಾಹಗಳು ನಡೆಯುತ್ತಿದ್ದವು ಎಂಬ ಉಲ್ಲೇಖವಿದೆ. ಬಾಲ್ಯವಿವಾಹವನ್ನು ಗಂಭೀರವಾಗಿ ಪರಿಗಣಿಸಿದ್ದ ಮೈಸೂರಿನ ರಾಜರು ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು.

ವಿಧಾನ ಪರಿಷತ್‌ ಸ್ಥಾಪನೆ ಜತೆಗೆ ಗೆಜ್ಜೆಪೂಜೆ ಪದ್ಧತಿಗೆ ನಿಷೇಧ ಹೇರಿದ್ದರು. ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೊಳಿಸಿ ಹಿಂದುಳಿದವರಿಗೂ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮೈಸೂರಿನ ಅರಸರು ದಿಟ್ಟ ಹೆಜ್ಜೆ ಇರಿಸಿದ್ದರು,’ ಎಂದು ಡಾ.ಜೆ.ವಿ.ಗಾಯತ್ರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next