Advertisement

ಮೈಸೂರಲ್ಲಿ ಶಾಶ್ವತ ಪಾಸ್‌ಪೋರ್ಟ್‌ ಸೆಂಟರ್‌

12:14 PM Jan 24, 2017 | Team Udayavani |

ಮೈಸೂರು: ಹಳೇ ಮೈಸೂರು ಭಾಗದ ಜನರ ಬಹುವರ್ಷಗಳ ಬೇಡಿಕೆಯಾದ ಮೈಸೂರಿನಲ್ಲಿ ಪಾಸ್‌ಪೋರ್ಟ್‌ ಸೇವಾ ಸೆಂಟರ್‌ ತೆರೆಯಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಜ.25ರಂದು ಕೇಂದ್ರ ಸಚಿವ ಅನಂತಕುಮಾರ್‌ ಅವರು ಈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ಶಾಶ್ವತ ಪಾಸ್‌ಪೋರ್ಟ್‌ ಸೇವಾ ಕೇಂದ್ರ ತರುವ ತಮ್ಮ ಎರಡೂವರೆ ವರ್ಷಗಳ ಹೋರಾ ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ, ಗುಜರಾತ್‌ನ ಭರೂಚ್‌ ಹಾಗೂ ಕರ್ನಾಟಕದ ಮೈಸೂರಿನಲ್ಲಿ ಕೇಂದ್ರ ಸರ್ಕಾರ ಪೈಲಟ್‌ ಯೋಜನೆಯಾಗಿ ಪಾಸ್‌ಪೋರ್ಟ್‌ ಸೇವಾ ಸೆಂಟರ್‌ ಅನ್ನು ಆರಂಭಿಸುತ್ತಿದೆ. ಮೇಟಗಳ್ಳಿ ಯಲ್ಲಿನ ಅಂಚೆ ಕಚೇರಿ ಕಟ್ಟಡದಲ್ಲಿ ಜ.25 ರಿಂದ ಕೇಂದ್ರ ಕಾರ್ಯರಂಭ ಮಾಡಲಿದೆ ಎಂದರು.

ಮೈಸೂರಲ್ಲಿ 11 ಎಂಜಿನಿಯರಿಂಗ್‌ ಕಾಲೇಜು, ಪದವಿ ಕಾಲೇಜು ಗಳಿದ್ದು, ಪ್ರತಿವರ್ಷ ಸಾವಿರಾರು ಅಭ್ಯರ್ಥಿಗಳು ಉದ್ಯೋಗಅರಸಿ ಬೇರೆಡೆಗೆ ಹೋಗಲು ಪಾಸ್‌ ಪೋರ್ಟ್‌ಗೆ ಎಡತಾಕುತ್ತಿದ್ದಾರೆ. ಆದರೂ ಮೈಸೂರಿನಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರವಿರಲಿಲ್ಲ. ಎಸ್‌.ಎಂ. ಕೃಷ್ಣ ಅವರೇ ವಿದೇಶಾಂಗ ಸಚಿವರಾಗಿದ್ದಾಲೂ ಈ ಭಾಗಕ್ಕೆ ಶಾಶ್ವತ ಪಾಸ್‌ಪೋರ್ಟ್‌ ಕೇಂದ್ರ ಮಂಜೂ ರಾಗಿರಲಿಲ್ಲ.

ತಮ್ಮ ಸತತ ಪ್ರಯತ್ನದ ಫ‌ಲ ವಾಗಿ ವಿದೇಶಾಂಗ ಇಲಾಖೆ, ಪಾಸ್‌ ಪೋರ್ಟ್‌ ಸೇವಾ ಶಿಬಿರಗಳನ್ನು ನಡೆಸಿತು. ಇದೀಗ ಪಾಸ್‌ಪೋರ್ಟ್‌ ಸೇವಾ ಸೆಂಟರ್‌ ತೆರೆ ಯಲು ಅನುಮೋದನೆ ನೀಡಿದೆ ಎಂದರು. ಆರಂಭದ ಕೆಲ ದಿನಗಳು ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ, ಸಿಬ್ಬಂದಿ ಮೈಸೂರಿಗೆ ಬಂದು ಇಲ್ಲಿನ ಅಂಚೆ ಕಚೇರಿ ಅಧಿಕಾರಿ, ಸಿಬ್ಬಂದಿಗೆ ಪಾಸ್‌ಪೋರ್ಟ್‌ ಸೇವಾ ಸೆಂಟರ್‌ನ ಕಾರ್ಯ ನಿರ್ವಹಣೆಯ ಬಗ್ಗೆ ತರಬೇತಿ ನೀಡುತ್ತಾರೆ.

ಆರಂಭದ ಕೆಲ ದಿನಗಳು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗೆ ಮಾತ್ರ ಕೇಂದ್ರವನ್ನು ಸೀಮಿತಗೊಳಿಸಿ, ನಿತ್ಯ 100 ಪಾಸ್‌ಪೋರ್ಟ್‌ ವಿತರಿಸುವ ಕೆಲಸ ಮಾಡಲಾಗುತ್ತದೆ. ಎಲ್ಲ ಪ್ರಕ್ರಿಯೆಗಳು ಒಂದು ಹಂತಕ್ಕೆ ಬಂದ ನಂತರ ಮಂಡ್ಯ, ಕೊಡಗು ಹಾಗೂ ಹಾಸನ ಜಿಲ್ಲೆಗೂ ಸೇವೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

Advertisement

“ರಾಜ್ಯ ಸರ್ಕಾರ ಸ್ಪಂದಿಸಲಿ’
ಮಂಡಕಳ್ಳಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಜತೆಗೆ, ವಿಮಾನದ ಇಂಧನದ ಮೇಲೆ ರಾಜ್ಯ ಸರ್ಕಾರ ವಿಧಿಸುವ ತೆರಿಗೆಯನ್ನು ಕಡಿಮೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯ ಸರ್ಕಾರ ವಿಮಾನದ ಇಂಧನದ ಮೇಲೆ ಶೇಕಡ 29ರಷ್ಟು ತೆರಿಗೆ ವಿಧಿಸುತ್ತಿರುವುದರಿಂದ ಲಘು ವಿಮಾನಗಳೂ ಸಹ ಇಲ್ಲಿಂದ ಹಾರಾಟ ನಡೆಸಲಾರದಂತಹ ಸ್ಥಿತಿ ಇದೆ.

ಹೀಗಾಗಿ ತೆರಿಗೆ ಕಡಿಮೆ ಮಾಡುವ ಮೂಲಕ ರಾಜ್ಯ ಸರ್ಕಾರ ವಿಮಾನ ಹಾರಾಟಕ್ಕೆ ಸ್ಪಂದಿಸಬೇಕು ಎಂದರು. ಬಿಜೆಪಿ ಉಪಾಧ್ಯಕ್ಷರಾದ ಎಂ.ರಾಜೇಂದ್ರ, ಮೈಸೂರು ವಿಭಾಗದ ಬಿಜೆಪಿ ಪ್ರಭಾರಿ ಎಲ್‌.ನಾಗೇಂದ್ರ, ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್‌.ವಿ. ರಾಜೀವ್‌, ನಂದೀಶ್‌ ಪ್ರೀತಂ ಹಾಜರಿದ್ದರು.

ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಗ್ರಾಹಕರು ಇನ್ನು ಮುಂದೆ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಕೇಂದ್ರಕ್ಕೆ ಹೋಗಬೇಕಾದ ಪ್ರಮೇಯ ಬರುವುದಿಲ್ಲ. ಮೈಸೂರಿನ ಕೇಂದ್ರದಲ್ಲೇ ದಾಖಲಾತಿಗಳ ಪರಿಶೀಲನೆ, ಬಯೋಮೆಟ್ರಿಕ್‌, ಮಂಜೂರಾತಿ, ಅನುಮೋದನೆ ನಡೆಯಲಿದೆ. ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಪಾಸ್‌ಪೋರ್ಟ್‌ನ ಮುದ್ರಣ ಮತ್ತು ವಿತರಣೆ ಮಾತ್ರ ನಡೆಯಲಿದೆ.
-ಪ್ರತಾಪಸಿಂಹ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next