“ಮಂಗಳೂರು ಉಪ್ಪು, ಉತ್ತರ ಕರ್ನಾಟಕದ ಮೆಣಸಿನಕಾಯಿ, ಮಂಡ್ಯದ ಕಬ್ಬು …’ ಇವಿಷ್ಟೂ ಹೊಸಬರ ಚಿತ್ರದೊಳಗಿರುವ ಹೈಲೆಟ್. ಅಂದರೆ ಮೂರು ಸ್ಥಳಗಳ, ಮೂವರು ಹುಡುಗರ ಕುರಿತಾದ ಕಥೆ. ಅದಕ್ಕೆ ಅವರು ಇಟ್ಟುಕೊಂಡಿರುವ ಹೆಸರು “ಆ್ಯಪಲ್ ಕೇಕ್’. ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಹಿರಿಯ ನಿರ್ದೇಶಕ ಭಗವಾನ್, ತಿಪಟೂರು ರಘು, ಶಿವಶಂಕರ್ ಮೊದಲ ದೃಶ್ಯಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಈ ಚಿತ್ರಕ್ಕೆ ರಂಜಿತ್‌ಕುಮಾರ್ ಗೌಡ ನಿರ್ದೇಶಕರು. ಅಷ್ಟೇ ಅಲ್ಲ, ಚಿತ್ರದ ಮೂವರು ನಾಯಕರ ಪೈಕಿ ಅವರೂ ಒಬ್ಬರು. ರಂಜಿತ್‌ಕುಮಾರ್, ಹಿರಿಯ ರಂಗಕರ್ಮಿ ಎ.ಎಸ್.ಮೂರ್ತಿ ಅವರೊಂದಿಗೆ ಬೀದಿನಾಟಕ ಸೇರಿದಂತೆ ಒಂದರೆಡು ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಈಗ ಸ್ವತಂತ್ರ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಕೇಕ್ ತಯಾರಾಗೋದು ಉಳಿದ ಪದಾರ್ಥಗಳಿಂದ ಎಂಬುದು ಅವರ ಅಂಬೋಣ. ಹಾಗಾಗಿ, ಇದಕ್ಕೆ “ಆ್ಯಪಲ್ ಕೇಕ್’ ಅಂತ ಹೆಸರಿಟ್ಟಿದ್ದಾರಂತೆ.
ಸಮಾಜದಲ್ಲಿ ಗುರುತಿಸದವರ, ಕಡೆಗಣಿಸಿದವರ ವಿಷಯ ಇಟ್ಟುಕೊಂಡು ಕಥೆಯೊಂದನ್ನು ರೆಡಿ ಮಾಡಿ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ ರಂಜಿತ್. ಮೂರು ಊರುಗಳ ವಿಭಿನ್ನ ಮನಸ್ಥಿತಿ ಇರುವಂತಹ ಹುಡುಗರು ಒಂದೆಡೆ ಸೇರಿದಾಗ, ಏನೇನು ಆಗುತ್ತೆ ಅನ್ನೋದು ಸಿನಿಮಾದ ಒನ್‌ಲೈನ್. ಇಲ್ಲಿ ಪ್ರೀತಿ, ಸ್ನೇಹ, ನಂಬಿಕೆ, ವ್ಯಥೆ, ಸೆಂಟಿಮೆಂಟ್ ಎಲ್ಲವೂ ಒಳಗೊಂಡಿದ್ದು, ಈಗಿನ ಕಾಲಕ್ಕೆ ತಕ್ಕದಾಗಿರುವ ಸಿನಿಮಾ ಆಗಲಿದೆ ಎಂಬುದು ಚಿತ್ರತಂಡ ಹೇಳಿಕೆ.
ಇನ್ನು, ಶಂಕರ್ ಮತ್ತು ಅರವಿಂದ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಈ ಪೈಕಿ ಅರವಿಂದ್ ಆವರು ಕ್ಯಾಮೆರಾ ಮುಂದೆಯೂ ನಿಲ್ಲುತ್ತಿದ್ದಾರೆ. ಶುಭಾ ರಕ್ಷಿತ್ ಚಿತ್ರದ ನಾಯಕಿ. ಈಗಾಗಲೇ ಬಾಲಿವುಡ್‌ನಲ್ಲೊಂದು ಮತ್ತು ಕನ್ನಡದಲ್ಲೊಂದು ಚಿತ್ರ ಮಾಡಿರುವ ಶುಭಾರಕ್ಷಿತ್‌ಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಮೈಸೂರಿನ ರಂಗಭೂಮಿ ನಟಿ ಚೈತ್ರಾಶೆಟ್ಟಿ ನಾಯಕಿಯಾಗಿ ಇದು ಎರಡನೇ ಚಿತ್ರ. ಇವರಿಗೂ ಚಿತ್ರದಲ್ಲಿ ಹೊಸ ತರಹದ ಪಾತ್ರ ಸಿಕ್ಕಿದೆಯಂತೆ. ಮಂಗಳೂರು, ಚನ್ನಪಟ್ಟಣ, ಹಾವೇರಿ, ಬೆಂಗಳೂರು ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಮೂರು ಹಾಡುಗಳಿಗೆ ಶ್ರೀಧರ್ ಕಶ್ಯಪ್ ಸಂಗೀತ ನೀಡುತ್ತಿದ್ದಾರೆ.