Advertisement

ಉತ್ತರ ಕರ್ನಾಟಕದಲ್ಲಿ ಮೈಸೂರು ಚಿತ್ರಕಲೆ ಪ್ರಚಾರ

12:56 AM Jun 29, 2019 | Lakshmi GovindaRaj |

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಸಾಂಪ್ರದಾಯಿಕ ಮೈಸೂರು ಚಿತ್ರಕಲೆ ಪ್ರಚುರಪಡಿಸಲು ಕರ್ನಾಟಕ ಲಲಿತಕಲಾ ಅಕಾಡೆಮಿ ಮುಂದಾಗಿದೆ. ತಂಜಾವೂರು ಮತ್ತು ಸಾಂಪ್ರದಾಯಿಕ ಮೈಸೂರು ಚಿತ್ರಕಲೆ ಎರಡು ಒಂದೇ ಎಂದು ಇಂದಿನ ಯುವ ಪೀಳಿಗೆ ಭಾವಿಸಿದೆ.

Advertisement

ಆದರೆ, ಈ ತಪ್ಪು ತಿಳಿವಳಿಕೆ ಹೋಗಲಾಡಿಸಿ ಎರಡು ಚಿತ್ರಕಲೆಗಳ ನಡುವೆ ಇರುವ ವ್ಯತ್ಯಾಸ ಹಾಗೂ ಸಾಂಪ್ರದಾಯಿಕ ಮೈಸೂರು ಚಿತ್ರಕಲೆಯ ಶ್ರೀಮಂತಿಕೆ ಕುರಿತು ಅರಿವು ಮೂಡಿಸಲು ಅಕಾಡೆಮಿ ಜುಲೈನಲ್ಲಿ ಮೂರು ದಿನಗಳ ಶಿಬಿರ ಏರ್ಪಡಿಸಿದೆ.

ಬಳ್ಳಾರಿಯಲ್ಲಿ ನಡೆಯುವ ಈ ಶಿಬಿರಕ್ಕೆ ಈಗಾಗಲೇ ಪದವಿ ಪಡೆದ ಹಾಗೂ ಬೇರೆ ಬೇರೆ ಮಾಧ್ಯಮದ ಕಲಾಕೃತಿಗಳಲ್ಲಿ ನುರಿತ 20 ಯುವ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಸಾಂಪ್ರದಾಯಿಕ ಮೈಸೂರು ಚಿತ್ರಕಲೆಯ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಮತ್ತು ಆ ಶೈಲಿಯ ಕಲಾಕೃತಿಗಳ ರಚನೆಯಲ್ಲಿ ಪರಿಣಿತರಾದವರ ಮೂಲಕ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು.

ತರಬೇತಿಗೆ ಆಯ್ಕೆ ಸಮಿತಿ ಈಗಾಗಲೇ 20 ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರ ವಿವರಗಳನ್ನು ಮತ್ತು ಖರ್ಚು ವೆಚ್ಚಗಳ ಅಂದಾಜು ಪಟ್ಟಿಯನ್ನು ಅಕಾಡೆಮಿಗೆ ಸಲ್ಲಿಸಬೇಕಿದೆ. ಶಿಬಿರಾರ್ಥಿಗಳಿಗೆ 15 ಸಾವಿರ ರೂ. ಗೌರವ ಸಂಭಾವನೆ ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಮೈಸೂರು ಅರಸರು ಪೋಷಿಸಿದ ಕಲೆ: ಸಾಂಪ್ರದಾಯಿಕ ಮೈಸೂರು ಚಿತ್ರಕಲೆಯು ದಕ್ಷಿಣ ಭಾರತದ ಶಾಸ್ತ್ರೀಯ ಚಿತ್ರಕಲೆಯಲ್ಲಿ ಪ್ರಮುಖವಾದುದು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಹುಟ್ಟಿಕೊಂಡ ಈ ಕಲೆಯನ್ನು ಮೈಸೂರು ರಾಜರು ಪೋಷಿಸಿ ಬೆಳೆಸಿದರು. ಒಡೆಯರ್‌ ಆಡಳಿತ ಕಾಲದಲ್ಲಿ ದೇವಾಲಯಗಳು ಮತ್ತು ಅರಮನೆಗಳಲ್ಲಿ ಪೌರಾಣಿಕ ದೃಶ್ಯಗಳನ್ನು ರಚಿಸಲು ಕಲಾವಿದರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿದರು.

Advertisement

ಮೈಸೂರಿನ ಪ್ರಾಚೀನ ವರ್ಣಚಿತ್ರಕಾರರು ನೈಸರ್ಗಿಕ ಮೂಲಗಳಿಂದ ಅಂದರೆ ಎಲೆಗಳು, ಹೂಗಳು, ಕಲ್ಲುಗಳು ಮತ್ತು ತರಕಾರಿಗಳಿಂದ ಬಣ್ಣಗಳನ್ನು ತಯಾರಿಸುತ್ತಿದ್ದರು. ತರಕಾರಿಗಳಿಂದ ತಯಾರಿಸಿದ ಬಣ್ಣ ದೀರ್ಘ‌ಕಾಲ ಇರುವುದರಿಂದ ಇಂದಿಗೂ ಒಡೆಯರ್‌ ಕಾಲದ ಚಿತ್ರಗಳು ತಮ್ಮ ಹಿಂದಿನ ಹೊಳಪನ್ನು ಇಂದಿಗೂ ಉಳಿಸಿಕೊಂಡಿವೆ.

ಮೈಸೂರು ಚಿತ್ರಕಲೆಯಲ್ಲಿ ಒಡವೆಗಳಿಗೆ ಬಳಸುವ ಬಣ್ಣ ಶುದ್ಧ ಬಂಗಾರದಿಂದ ಕೂಡಿರುತ್ತದೆ. 24 ಕ್ಯಾರೇಟ್‌ ಚಿನ್ನದಿಂದ ತಯಾರಿಸಲಾದ ಬಣ್ಣವನ್ನೇ ಬಳಸಲಾಗುವುದು. ಇದಕ್ಕೆ ಬಂಗಾರದ ರೇಖು ಎಂದು ಕರೆಯಲಾಗುವುದು. ಇದು ಕೋಟ್ಯಾಂತರ ರೂಪಾಯಿಗಳ ಮೌಲ್ಯವನ್ನು ಒಳಗೊಂಡಿರುತ್ತವೆ. ಇದರ ಮಹತ್ವದ ಬಗ್ಗೆ ಉತ್ತರ ಕರ್ನಾಟಕ ಭಾಗದವರಿಗೆ ತಿಳಿಸುವುದು ಒಟ್ಟಾರೆ ಯೋಜನೆಯ ಉದ್ದೇಶವಾಗಿದೆ.

ಮೈಸೂರು ಚಿತ್ರಕಲೆ ವಿಶೇಷತೆಗಳು
* ಎಲೆ, ಹೂವು, ಕಲ್ಲು ಮತ್ತು ತರಕಾರಿಗಳಿಂದ ತಯಾರಿಸಿದ ಬಣ್ಣಗಳ ಬಳಕೆ.
* ನೈಸರ್ಗಿಕ ಬಣ್ಣದ ದೀರ್ಘ‌ಕಾಲದ ಬಾಳಿಕೆ ಬಗ್ಗೆ ಅರಿತಿದ್ದ ವರ್ಣಚಿತ್ರಕಾರರು.
* ಒಡವೆಗಳಿಗೆ 24 ಕ್ಯಾರೇಟ್‌ ಚಿನ್ನದಿಂದ ತಯಾರಿಸಲಾದ ಬಣ್ಣದ ಬಳಕೆ.
* ಚಿನ್ನದ ಬಣ್ಣಕ್ಕೆ ಬಂಗಾರದ ರೇಖು ಎಂದು ಕರೆಯುವ ಕಲಾವಿದರು.
* ಒಂದೊಂದು ಚಿತ್ರ ಆಕೃತಿಯ ಬೆಲೆಯೂ ಕೋಟಿ ಕೋಟಿ.

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next