Advertisement

ಇನ್ನು ಮೈಸೂರು ಹೊರ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ

01:22 PM Oct 25, 2017 | Team Udayavani |

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರಭಾಗ ಹಾಗೂ ವರ್ತುಲ ರಸ್ತೆ ಒಳಭಾಗದ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸುವ ಸಲುವಾಗಿ ಜನಪ್ರತಿನಿಧಿಗಳು ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ಸದನ ಸಮಿತಿ ರಚಿಸಲು ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಮಂಗಳವಾರ ನಡೆದ ನಗರಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಮೇಯರ್‌ ಎಂ.ಜೆ.ರವಿಕುಮಾರ್‌, ನಗರ ಪಾಲಿಕೆ ವ್ಯಾಪ್ತಿಯ ಹೊರಭಾಗದ ಹಾಗೂ ವರ್ತುಲ ರಸ್ತೆ ಒಳಭಾಗದ ಪ್ರದೇಶಗಳನ್ನು ಮುಖ್ಯಮಂತ್ರಿಗಳ ಮೌಖೀಕ ಆದೇಶದ ಮೇರೆಗೆ ವಿವಿಧ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ಎಲ್ಲಾ ವಲಯ ಕಚೇರಿಗಳಿಂದ ಪಡೆಯಲಾಗಿರುವ ಮಾಹಿತಿ ಕುರಿತ ನಿಲುವಳಿಯನ್ನು ಸಭೆಯ ಮುಂದಿಟ್ಟರು.

ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಗರ ಪಾಲಿಕೆ ಹೊರಭಾಗದ ಹಾಗೂ ರಿಂಗ್‌ರಸ್ತೆ ಒಳಭಾಗಕ್ಕೆ ಹಲವು ಗ್ರಾಪಂಗಳು ಒಳಪಟ್ಟಿವೆ. ಇಲ್ಲಿನ ಬಡಾವಣೆಗಳಿಗೆ ಸಂಬಂಧಿಸಿದಂತೆ ಈವರೆಗೂ ಸರಿಯಾದ ನಕ್ಷೆ ರಚಿಸಿಲ್ಲ. ಅಲ್ಲದೆ, ಬಹುತೇಕ ಬಡಾವಣೆಗಳಲ್ಲಿ ಒಳಚರಂಡಿ, ನೀರಿನ ಸಂಪರ್ಕ, ರಸ್ತೆಗಳ ಅಭಿವೃದ್ಧಿಯಾಗಿಲ್ಲ.

ಹೀಗಾಗಿ ಕ್ರಮಬದ್ಧವಾಗಿ ನಿರ್ಮಾಣವಾಗಿರುವ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವಂತೆ ತಿಳಿಸಿದರು. ಪಾಲಿಕೆ ಆಯುಕ್ತ ಜಿ.ಜಗದೀಶ್‌, 62 ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ 45 ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು.

ಅದರಂತೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಿರುವ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಪಡೆಯುವಂತೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿರುವುದಾಗಿ ತಿಳಿಸಿದರು.

Advertisement

ಸದನ ಸಮಿತಿ ರಚನೆ: ಸ್ಥಳೀಯ ಶಾಸಕರು, ಜಿಪಂ ಅಧ್ಯಕ್ಷರು, ಜಿಪಂ ಸಿಇಒ, ನಗರಪಾಲಿಕೆ, ಮುಡಾ, ಗ್ರಾಪಂ ಸದಸ್ಯರು, ಪಿಡಿಒಗಳನ್ನೊಳಗೊಂಡ ಸಲಹಾ ಸಮಿತಿ ಸೇರಿದಂತೆ ಒಂದು ಸದನ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಈ ಬಡಾವಣೆಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಸ್ತೃತ ಯೋಜನಾ ವರದಿ ತಯಾರಿಸಿ ಹಾಗೂ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ಇಲಾಖೆಯಿಂದ ಪಾವತಿಸಿಕೊಳ್ಳಲು ಮತ್ತು ಇದಕ್ಕೆ ಸಂಬಂಧಿಸಿದಂತೆ ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರುವ ಬಗ್ಗೆ ಮೇಯರ್‌ ಎಂ.ಜೆ.ರವಿಕುಮಾರ್‌, ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ಮೂಲ ನಕ್ಷೆ ಉಲ್ಲಂಘನೆ: ಅನೇಕ ಸದಸ್ಯರು, ಗ್ರಾಮಾಂತರ ಬಸ್‌ನಿಲ್ದಾಣ ಸೇರಿದಂತೆ ವಿವಿಧ ಕಡೆ ನಕ್ಷೆ ಉಲ್ಲಂಘನೆಯಾಗಿದೆ ಎಂಬ ವಿಷಯವನ್ನು ಸಭೆಯ ಮುಂದಿಟ್ಟರು. ಪ್ರತಿಕ್ರಿಯಿಸಿದ ಆಯುಕ್ತ ಜಗದೀಶ್‌, ಗ್ರಾಮಾಂತರ ಬಸ್‌ನಿಲ್ದಾಣದ ನಕ್ಷೆಗೆ ಒಪ್ಪಿಗೆ ದೊರೆತಿದೆ. ಅದರಂತೆ ಸಿಆರ್‌ ನೀಡಲಾಗಿದೆ. ಇನ್ನೂ ಸಿಆರ್‌ ಇಲ್ಲದವರಿಗೆ ನೋಟಿಸ್‌ ನೀಡಲಾಗಿದ್ದು, ಮುಂದಿನ ಕ್ರಮ ವಹಿಸುವುದಾಗಿ ತಿಳಿಸಿದರು.

ಆದರೆ ಈಗಾಗಲೇ ನೀಡಲಾಗಿರುವ ಸಿಆರ್‌ ರದ್ದುಗೊಳಿಸಲು ಪಾಲಿಕೆ ಕಾಯ್ದೆಯಲ್ಲಿ ಅಧಿಕಾರವಿಲ್ಲ ಎಂದರು. ನಂತರ ಮೇಯರ್‌ ಎಂ.ಜೆ.ರವಿಕುಮಾರ್‌ ಮಾತನಾಡಿ, ನಕ್ಷೆ ಉಲ್ಲಂಘನೆಯಾಗಿರುವ ಬಗ್ಗೆ ಕಾನೂನು ಕ್ರಮವಹಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಉಪ ಮೇಯರ್‌ ರತ್ನಾ ಲಕ್ಷ್ಮಣ್‌ ಇದ್ದರು.

ನಗರದ ಗ್ರಾಮಾಂತರ ಬಸ್‌ನಿಲ್ದಾಣದಲ್ಲಿ ನಕ್ಷೆಗೆ ವಿರುದ್ಧವಾಗಿ ಮಳಿಗೆ ನಿರ್ಮಿಸಲಾಗಿದ್ದು, ಈ ಸಂಬಂಧ ಪಾಲಿಕೆ ನಗರ ಯೋಜನಾ ಸ್ಥಾಯಿ ಸಮಿತಿ ಪರಿಶೀಲಿಸಿ ವರದಿ ನೀಡಿದ್ದರೂ  ಕ್ರಮಕೈಗೊಂಡಿಲ್ಲ. ಹೀಗಾಗಿ ನಕ್ಷೆ ಉಲ್ಲಂಘನೆ ಹಿಂದೆ ಅಧಿಕಾರಿಗಳು ಅಥವಾ ಪಾಲಿಕೆ ಸದಸ್ಯರು ಹಣಪಡೆದು ಬುಕ್‌ ಆಗಿದ್ದಾರೆಯೇ.
-ಪ್ರಶಾಂತ್‌ಗೌಡ, ಕಾಂಗ್ರೆಸ್‌ ಸದಸ್ಯ 

Advertisement

Udayavani is now on Telegram. Click here to join our channel and stay updated with the latest news.

Next