Advertisement

ಈಗ ಸಣ್ಣ ಸ್ಫೋಟವಾದರೂ ಡ್ಯಾಂ ಬಿರುಕು ಸಾಧ್ಯತೆ

05:34 PM Aug 24, 2019 | Team Udayavani |

ಮೈಸೂರು: ಕೆಆರ್‌ಎಸ್‌ ಅಣೆಕಟ್ಟೆಯ ಹಿತದೃಷ್ಟಿ ಯಿಂದ ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅಣೆಕಟ್ಟೆಯ ಸುತ್ತಮುತ್ತ ಸುಮಾರು 20 ಕಿ.ಮೀ ವರೆಗೆ ಶಾಶ್ವತವಾಗಿ ಎಲ್ಲಾ ರೀತಿಯ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಮೈಸೂರಿನ ಎಂಜಿನಿಯರುಗಳ ಸಂಸ್ಥೆ ಶಿಫಾರಸು ಮಾಡಿದೆ.

Advertisement

ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ನಿವೃತ್ತ ಮೇಜರ್‌ ಜನರಲ್ ಒಂಬತ್ಕೆರೆ ಮತ್ತು ಎಂ.ಲಕ್ಷ್ಮಣ ಅವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಿದ ಎಂಜಿನಿಯರುಗಳು ಹಾಗೂ ರೈತ ಮುಖಂಡರು, ಕೆಆರ್‌ಎಸ್‌ ಅಣೆಕಟ್ಟೆ ಸುತ್ತಮುತ್ತ ಕಲ್ಲು ಗಣಿಗಾರಿಕೆಗಾಗಿ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಅಣೆಕಟ್ಟು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದರ ಬಗ್ಗೆ ಚರ್ಚಿಸಿ, ತಾಂತ್ರಿಕ ವರದಿ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿತು.

ಅಣೆಕಟ್ಟೆ ಸುರಕ್ಷತೆ ವರದಿ ನೀಡಿ: ಕೆಆರ್‌ಎಸ್‌ ಅಣೆಕಟ್ಟೆಯನ್ನು ಭೂಕಂಪನ ವಲಯದಲ್ಲಿ ನಿರ್ಮಿಸಿರುವುದರಿಂದ ಸ್ಫೋಟಕಗಳಿಂದ ಅಣೆಕಟ್ಟೆಯ ಕಟ್ಟಡ ಬಿರುಕು ಬಿಡುವ ಸಾಧ್ಯತೆಗಳಿದ್ದು, ಕೆಆರ್‌ಎಸ್‌ ಸುತ್ತಮುತ್ತ ಎಲ್ಲ ರೀತಿಯ ಸ್ಫೋಟಕಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕೆಆರ್‌ಎಸ್‌ ಅಣೆಕಟ್ಟೆಗೆ 90 ವರ್ಷಗಳಾಗಿರುವುದರಿಂದ ಕೇಂದ್ರ ಭೂವಿಜ್ಞಾನ ಇಲಾಖೆಯಿಂದ ಸರ್ವೆಯಾಗಬೇಕು ಹಾಗೂ ಕೂಡಲೇ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ವರದಿ ನೀಡಬೇಕು. ಅಣೆಕಟ್ಟೆಯ ಕಟ್ಟಡದ ಆಯಸ್ಸಿನ ಬಗ್ಗೆ ತಿಳಿಯಲು ಅಣೆಕಟ್ಟೆಯ ಅನಾಲಿಸಿಸ್‌ ಆಗಬೇಕಿದೆ. ಇದರಿಂದ ಅಣೆಕಟ್ಟೆ ಇನ್ನೂ ಎಷ್ಟರ ಮಟ್ಟಿಗೆ ಗಟ್ಟಿತನ ಉಳಿಸಿಕೊಂಡಿದೆ ಎಂಬುದು ತಿಳಿಯುತ್ತದೆ.

ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕೆಆರ್‌ಎಸ್‌ ಅಣೆಕಟ್ಟೆಯ ಹಿತದೃಷ್ಟಿಯಿಂದಶಾಶ್ವತವಾಗಿ ಅಣೆಕಟ್ಟೆಯ ಸುತ್ತಮುತ್ತ ಸುಮಾರು 20 ಕಿ.ಮೀ ವರೆಗೆ ಎಲ್ಲಾ ರೀತಿಯ ಗಣಿಗಾರಿಕೆಯನ್ನು ನಿಷೇಧಿಸಬೇಕು.

ಸದ್ಯ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿರುವುದರಿಂದ ಮತ್ತು ಅಣೆಕಟ್ಟೆ ನೀರಿನ ಒತ್ತಡಕ್ಕೆ ಒಳಗಾಗಿರುವುದರಿಂದ, ಸಣ್ಣ ಪ್ರಮಾಣದ ಸ್ಫೋಟ ಕೂಡ ಅಣೆಕಟ್ಟೆ ಬಿರುಕು ಬಿಡಲು ಅವಕಾಶ ನೀಡುತ್ತದೆ. ಸಣ್ಣ ಬಿರುಕು ನೀರಿನ ಒತ್ತಡದಿಂದ ಕೆಲವೇ ದಿನಗಳಲ್ಲಿ ದೊಡ್ಡ ಬಿರುಕಾಗಿ ಮಾರ್ಪಡುತ್ತದೆ ಎಂದು ಶಿಫಾರಸು ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ.ವಿಜಯಭಾಸ್ಕರ್‌, ಮಂಡ್ಯ ಜಿಲ್ಲಾಧಿಕಾರಿ ಹಾಗೂ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್‌ಗೆ ಕಳುಹಿಸಲು ತೀರ್ಮಾನಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next