ಮೈಸೂರು: ಇಲ್ಲಿನ ಶ್ರೀರಾಂಪುರದಲ್ಲಿ 12 ವರ್ಷದ ಬಾಲಕನೊಬ್ಬನನ್ನು ಅಪಹರಣಗೈದ ಪ್ರಕರಣ ಇದೀಗ ಸುಖಾಂತ್ಯವಾಗಿದೆ. ಬಾಲಕ ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ.
ಗುರುವಾರ (ಜೂ.23) ಸಂಜೆ ಈ ಅಪಹರಣ ನಡೆದಿದೆ. 12 ವರ್ಷದ ಬಾಲಕ ವೈದ್ಯ ದಂಪತಿಯ ಮಗನಾಗಿದ್ದು, ಗುರುವಾರ ಸಂಜೆ ಏಳು ಗಂಟೆಯ ಸಮಯದಲ್ಲಿ ಹೊರಗೆ ಸೈಕಲ್ ಹೊಡೆಯುವಾಗ ಕಾರೊಂದರಲ್ಲಿ ಬಂದ ಅಪಹರಣಕಾರರು ಬಾಲಕನನ್ನು ಅಪಹರಿಸಿದ್ದಾರೆ.
ಕೊಲೆ ಬೆದರಿಕೆ ಹಾಕಿದರು: ಸುರಕ್ಷಿತವಾಗಿ ಮರಳಿದ ಬಾಲಕ ಈ ಕುರಿತು ಮಾತನಾಡಿದ್ದು, “ಕಿಡ್ನ್ಯಾಪ್ ಮಾಡಿದಾಗ ನನಗೆ ಮೊದಲಿಗೆ ಹೆದರಿಕೆಯಾಯಿತು. ಅವರ ಜೊತೆ ಮಿಂಗಲ್ ಆಗಿ ಮಾತನಾಡಲು ಆರಂಭಿಸಿದೆ. ತದ ನಂತರ ನನಗೆ ಹೆದರಿಕೆಯಾಗಿಲಿಲ್ಲಾ. ನಮ್ಮ ಬಗ್ಗೆ ನಿಮ್ಮ ಅಪ್ಪ ಅಮ್ಮನಿಗೆ ತಿಳಿಸಿದರೆ ಶಾಲೆಯಿಂದ ಎತ್ತಾಕಿಕೊಂಡು ಹೋಗಿ ಕೊಲೆ ಮಾಡುತ್ತೇವೆಂದು ಹೆದರಿಸಿದರು” ಎಂದಿದ್ದಾನೆ.
“ಅವರನ್ನ ನಾನು ಈ ಮೊದಲು ನೋಡಿಯೇ ಇಲ್ಲಾ. ಹಳದಿ ಬಣ್ಣದ ನಂಬರ್ ಪ್ಲೇಟ್ ಕಾರಿನಲ್ಲಿ ನನ್ನನ್ನು ಕಿಡ್ನ್ಯಾಪ್ ಮಾಡಿದ್ದರು. ಕಾರಿನ ಎರಡು ನಂಬರ್ ಮಾತ್ರ ಕಾಣಿಸಿತ್ತು. ಕಾರಿನ ಹಿಂಬಾಗ ಸೀಟ್ ನಲ್ಲಿ ಕೂರಿಸಿದ್ದರು. ರಿಂಗ್ ರೋಡ್ ನ ಸರ್ಕಲ್ ನಾಲ್ಕು ಸುತ್ತು ಹಾಕಿಸಿದ್ದರು. ಮೈಸೂರಿನ 20 ಕಿ.ಮೀ ಅಂತರದಲ್ಲೇ ಸುತ್ತಾಡಿಸುತ್ತಿದ್ದರು. ತಿನ್ನಲು ಬಿಸ್ಕಟ್, ನೀರು ಮತ್ತು ಚಾಕ್ ಲೇಟ್ ನೀಡಿದರು, ಆದರೆ ನಾನು ಬೇಡ ಅಂದೇ. ಕಾರಿನಲ್ಲಿ ಒಬ್ಬ ಕುಂಟ ಇದ್ದ. ಕಾರಿನಲ್ಲಿ ಡೀಸೆಲ್ ಖಾಲಿಯಾಗಿದೆ, ಹೆಚ್ಚೆಂದರೆ 5 ಕಿ.ಮೀ ಹೋಗಬಹುದು ಎನ್ನುತ್ತಿದ್ದರು. ನಾನು ನಿದ್ದೆ ಕಣ್ಣಿನಲ್ಲಿರುವಾಗ ಯಾರೋ ವಿಂಡ್ ಶೀಲ್ಡ್ ನಲ್ಲಿ ಮಾತನಾಡುತ್ತಿದ್ದರು” ಎಂದು ಬಾಲಕ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ:ಗುಜರಾತ್ ಗಲಭೆ; ಪ್ರಧಾನಿ ಮೋದಿಗೆ ಕ್ಲೀನ್ ಚಿಟ್- ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ
ಒಟ್ಟಿನಲ್ಲಿ ಬಾಲಕ ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ. ಆದರೆ ಪ್ರಕರಣದ ಹಿಂದೆ ಹಲವು ಅನುಮಾನಗಳು ಎದ್ದಿದೆ.