Advertisement

ಮೈಸೂರು ಭಾಗಕ್ಕೆ ಬಜೆಟಲ್ಲಿ ಸಿಕ್ಕಿದ್ದು ಸೊನ್ನೆ

07:11 AM Feb 02, 2019 | Team Udayavani |

ಮೈಸೂರು: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿರುವುದರಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ,ಮೈಸೂರು ಮತ್ತು ಕೊಡಗು ಜಿಲ್ಲೆಗಳ  ಪ್ರವಾಸೋದ್ಯಮ ಅಭಿವೃದ್ಧಿ, ಮೈಸೂರು ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗಳ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಮೂಲಕ  ಯುವಜನತೆಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮವು ಘೋಷಣೆಯಾಗಿಲ್ಲ.

Advertisement

ಈ ಭಾಗದ ಪ್ರಮುಖ  ವಾಣಿಜ್ಯ ಬೆಳೆಗಳಾದ ಕಾಫಿ ಮತ್ತು ತಂಬಾಕು ಬೆಳೆಗಾರರ ಹಿತರಕ್ಷಣೆಗೂ ಗಮನಹರಿಸಲಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಪ್ರವಾಸಿತಾಣವಾಗಿರುವ  ಅರಮನೆಗಳ ನಗರಿ ಮೈಸೂರಿನಲ್ಲಿ ಮಹಾರಾಜರ ಕಾಲದ ನೂರಾರು ಹಳೇಯ ಪಾರಂಪರಿಕ ಕಟ್ಟಡಗಳಿರುವುದರಿಂದ ಮೈಸೂರನ್ನು ಪಾರಂಪರಿಕ ನಗರಿ  (ಹೆರಿಟೇಜ್‌ ಸಿಟಿ)ಎಂದು ಘೋಷಿಸುವಂತೆ ಬಹಳ ವರ್ಷಗಳ ಬೇಡಿಕೆ ಇದೆ.

ಈ ಸಾಲಿನ ಬಜೆಟ್‌ನಲ್ಲೂ ಆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ರೈತರ  ಹಿತದೃಷ್ಟಿಯಿಂದ ಸ್ಥಳೀಯವಾಗಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಕೇಂದ್ರಗಳು, ಮಾರುಕಟ್ಟೆ ಸ್ಥಾಪಿಸಬೇಕಾದ ಅಗತ್ಯತೆ ಇದ್ದರೂ ಅದಕ್ಕಾಗಿ ಯಾವುದೇ  ಕಾರ್ಯಕ್ರಮ ಘೋಷಿಸಿಲ್ಲ. ಶಿಕ್ಷಣ, ಉದ್ಯೋಗಕ್ಕಾಗಿ ಮೈಸೂರಿನಿಂದ ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಗೆ ನಿತ್ಯ ಸಾವಿರಾರು ಜನರು  ಪ್ರಯಾಣಿಸುವುದರಿಂದ ಇನ್ನಷ್ಟು ಹೊಸ ರೈಲುಗಳ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಇತ್ತು.

ಅದೂ ಕೂಡ ಹುಸಿಯಾಗಿದೆ. ಸ್ವಾಮಿನಾಥನ್‌ ವರದಿ  ಜಾರಿಯ ಬಗ್ಗೆ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಪ್ರವಾಸೋದ್ಯಮದ ವಿಷಯದಲ್ಲಿ ದಕ್ಷಿಣ ಭಾರತದಲ್ಲಿ ಏಕರೂಪದ ತೆರಿಗೆ ಪದ್ಧತಿ ಜಾರಿಗೆ ಒತ್ತಾಯವಿತ್ತು. ಆ ಬಗ್ಗೆಯೂ ಬಜೆಟ್‌ನಲ್ಲಿ ಯಾವುದೇ ಉಲ್ಲೇಖವಿಲ್ಲ. ಇನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ  ಆದಿವಾಸಿ ಜನರ ಅಭಿವೃದ್ಧಿ, ಅವರ ಮಕ್ಕಳ ಶಿಕ್ಷಣದ ಬಗ್ಗೆಯೂ ಬಜೆಟ್‌ನಲ್ಲಿ ಯಾವುದೇ ಘೋಷಣೆ ಹೊರಬಿದ್ದಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next