Advertisement
ಮೈಸೂರು ವಿಶ್ವವಿದ್ಯಾಲಯ 2020ರ ಜನವರಿಗೆ ನ್ಯಾಕ್‌ಗೆ ಹೊಗಬೇಕಿದೆ. ಸದ್ಯ 3.47 ಅಂಕಗಳೊಂದಿಗೆ ಮೈಸೂರು ವಿವಿ ಗ್ರೇಡ್-2 ಪಟ್ಟಿಯಲ್ಲಿದ್ದು, ಗ್ರೇಡ್-1ಗೆ ತರಲು ಎಲ್ಲರೂ ಸೇರಿ ಶ್ರಮ ಹಾಕೋಣ, ಇದಕ್ಕಾಗಿ ಆಂತರಿಕ ಶಿಸ್ತು, ಶಿಕ್ಷಣದ ಗುಣಮಟ್ಟ ಹೆಚ್ಚಳದ ಸಂಬಂಧ ಪ್ರೊ.ಆಯಿಷಾ ಷರೀಫ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಆ ಸಮಿತಿ ಈ ತಿಂಗಳಾಂತ್ಯದೊಳಗೆ ವರದಿ ಸಲ್ಲಿಸಲಿದ್ದು, ಮುಂದಿನ ಶಿಕ್ಷಣ ಮಂಡಳಿ ಸಭೆಗೆ ವರದಿಯನ್ನು ಮಂಡಿಸುವುದಾಗಿ ಹೇಳಿದರು.
Related Articles
Advertisement
ಲಲಿತ ಕಲೆ ಅಧ್ಯಯನ ಮಂಡಳಿ ಸಭೆ ಶಿಫಾರುಸು ಮಾಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೊರಡಿಸಿರುವ ಅಧಿಸೂಚನೆಗೆ ಸಭೆ ಒಪ್ಪಿಗೆ ನೀಡಿತು. ಈಗಾಗಲೇ ವಿವಿಯ ಹಣಕಾಸು ಸಮಿತಿ ಮತ್ತು ಸಿಂಡಿಕೇಟ್ ಸಭೆಯು ಅನುಮೋದಿಸಿರುವ 2014-15ನೆ ಸಾಲಿನ ಮೈಸೂರು ವಿವಿಯ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಗೆ ಶಿಕ್ಷಣ ಮಂಡಳಿ ಸಭೆ ಒಪ್ಪಿಗೆ ಸೂಚಿಸಿತು.
2018-19ನೇ ಶೈಕ್ಷಣಿಕ ಸಾಲಿಗೆ ಹಾಸನದ ಶ್ರೀರಂಗ ಕಾಲೇಜ್ ಆಫ್ ಎಜುಕೇಷನ್ ಮತ್ತು ಮಳವಳ್ಳಿಯ ಭಗವಾನ್ ಬುದ್ಧ ಕಾಲೇಜ್ ಆಫ್ ಎಜುಕೇಷನ್ ಬಿ.ಇಡಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 50 ರಿಂದ 100ಕ್ಕೆ ಹೆಚ್ಚಿಸಲು ಪುನರ್ ಪರಿಶೀಲನಾ ಸಮಿತಿಯ ಶಿಫಾರಸ್ಸಿಗೆ ಶಿಕ್ಷಣ ಮಂಡಳಿ ಸಭೆ ಒಪ್ಪಿಗೆ ನೀಡಿತು.
ಮೈಸೂರು ವಿವಿಯ ಅಧ್ಯಾಪಕರುಗಳಿಗೆ ಯುಜಿಸಿ-ಕೆರಿಯರ್ ಅಡ್ವಾನ್ಸ್‌ಮೆಂಟ್ ಸ್ಕೀಂನಡಿ ನಿಯಮಾನುಸಾರ ಪದೋನ್ನತಿ ನೀಡುವ ಸಂಬಂಧ ಯುಜಿಸಿ ನಿಯಮಾವಳಿ 2010 ಮತ್ತು ತಿದ್ದುಪಡಿ 2013 ಹಾಗೂ 2016ರನ್ನು ಅನುಸರಿಸಲಾಗುತ್ತಿದ್ದು, ಪ್ರಸ್ತುತ 2013ರ ನಿಯಮಾವಳಿ ತಿದ್ದುಪಡಿಯ ಅನುಸಾರ ಅಭ್ಯರ್ಥಿಯು ಹೊಂದಿರಬೇಕಾದ ಕನಿಷ್ಠ ಇಂಡಿಕೇಟರ್ ಸ್ಕೋರ್ಗಳನ್ನು ನಿರ್ಧರಿಸಲು ಪಿಎಎಸ್ ಪದೋನ್ನತಿಯ ಸಂಯೋಜಕರಾಗಿರುವ ಪ್ರೊ.ಬಿ.ಎಸ್.ವಿಶ್ವನಾಥ್ ಅವರು ಸಲ್ಲಿಸಿರುವ ವಿಷಯಕ್ಕೆ ಸಭೆ ಅನುಮೋದನೆ ನೀಡಿತು.
ಶಿಕ್ಷಣ ಮಂಡಳಿ ಸದಸ್ಯರಾದ ವಿಧಾನಪರಿಷತ್ ಸದಸ್ಯ ಅಪ್ಪಾಜಿ ಗೌಡ, ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಸದಸ್ಯರಾದ ಪ್ರೊ.ಸದಾನಂದ, ಪ್ರೊ.ಶಿವಬಸವಯ್ಯ,ಪ್ರೊ.ಸಿ.ರಾಮಸ್ವಾಮಿ,ಡಾ.ಪಿ.ಸರಸ್ವತಿ, ಚನ್ನಬಸಪ್ಪ, ಶಾಂತಕುಮಾರ್ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.
ಪಿಎಚ್.ಡಿ.ನೋಂದಣಿ ಕಾಲಮಿತಿ ವಿಸ್ತರಣೆ: ಪಿಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪಿಎಚ್.ಡಿ.ನೋಂದಣಿ ಪಡೆಯಲು ಇರುವ ಕಾಲಮಿತಿಯನ್ನು ಒಂದು ವರ್ಷದಿಂದ ಎರಡು ವರ್ಷಗಳಿಗೆ ವಿಸ್ತರಿಸಲು ಸಭೆ ಒಪ್ಪಿಗೆ ನೀಡಿತು. ಮೈಸೂರು ವಿವಿಯಲ್ಲಿ 2017ರ ಅಕ್ಟೋಬರ್ 29ರಂದು ನಡೆದ ಪಿಎಚ್.ಡಿ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ
ಪಿಎಚ್.ಡಿ. ತಾತ್ಕಾಲಿಕ ನೋಂದಣಿ ಪಡೆಯಲು ಪಿಎಚ್.ಡಿ ನಿಯಮಾವಳಿ 2017ರ ಪ್ರಕಾರ ಒಂದು ವರ್ಷದ ಕಾಲಮಿತಿ ನೀಡಲಾಗಿತ್ತು. ಆದರೆ, ಮಾರ್ಗದರ್ಶಕರ ಕೊರತೆ ಇರುವುದರಿಂದ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೋಂದಣಿ ಪಡೆಯಲು ಸಾಧ್ಯವಾಗದಿರುವುದರಿಂದ ಈ ಕಾಲಮಿತಿಯನ್ನು ಎರಡು ವರ್ಷಗಳಿಗೆ ವಿಸ್ತರಿಸುವಂತೆ ಅಭ್ಯರ್ಥಿಗಳು ಕೋರಿರುವ ಹಿನ್ನೆಲೆಯಲ್ಲಿ ಶಿಕ್ಷಣ ಮಂಡಳಿ ಸಭೆ ಒಪ್ಪಿಗೆ ನೀಡಿತು.
ಅನಂತಮೂರ್ತಿ ಪೀಠ ಸ್ಥಾಪನೆ: ಮೈಸೂರು ವಿವಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಸಂಬಂಧ ರಾಜ್ಯ ಸರ್ಕಾರ ಒಂದು ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಪೀಠದ ಉದ್ದೇಶಿತ ಕಾರ್ಯಕ್ರಮವನ್ನು ನಡೆಸಲು ಸಿದ್ಧಪಡಿಸಿರುವ ಕರಡು ಅಧಿನಿಯಮವನ್ನು ಸಭೆ ಅನುಮೋದಿಸಿತು.