Advertisement

ಹುಲಿಗಳ ಆವಾಸ ಸ್ಥಾನ ಹಳೇ ಮೈಸೂರು ಭಾಗ

09:47 PM Dec 30, 2019 | Lakshmi GovindaRaj |

ಮೈಸೂರು: ವ್ಯಾಘ್ರಗಳ ಆವಾಸಕ್ಕೆ ಹಳೇ ಮೈಸೂರು ಭಾಗವು ಅಗತ್ಯ ನೆಲೆಯನ್ನು ಕಲ್ಪಿಸಿಕೊಟ್ಟಿದ್ದು, ಮೈಸೂರು-ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಹುಲಿಗಳು ಹೆಚ್ಚು ಕಂಡು ಬರುತ್ತಿವೆ. ಅದರಲ್ಲೂ ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ಹುಲಿಗಳಿರುವುದು ಗಮನಾರ್ಹ ಸಂಗತಿ.

Advertisement

ಒಂದೇ ಜಿಲ್ಲೆಯಲ್ಲೂ ಎರಡು ರಾಷ್ಟ್ರೀಯ ಉದ್ಯಾನವಿದ್ದು, ಬಂಡೀಪುರ, ಬಿಆರ್‌ಟಿ ಮತ್ತು ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಸೂಕ್ತ ಸಂರಕ್ಷಣೆ ಫ‌ಲವಾಗಿ ಬಲಿ ಪ್ರಾಣಿಗಳು (ಹುಲಿಯ ಆಹಾರ)ಹೆಚ್ಚಿದಂತೆ ಹೆಚ್ಚಿನ ಸಂಖ್ಯೆಯ ಹುಲಿಗಳು ನೆಲೆ ಕಂಡುಕೊಂಡಿವೆ.

ಈ ಬಾರಿ ಗಣತಿಯಲ್ಲಿ ಬಂಡೀಪುರದಲ್ಲಿ ಅಂದಾಜು 170ಕ್ಕಿಂತ ಹೆಚ್ಚು, ಬಿಆರ್‌ಟಿಯಲ್ಲಿ 60ರಷ್ಟು ಮತ್ತು ಮಹದೇಶ್ವರಬೆಟ್ಟದ ವನ್ಯಜೀವಿಧಾಮದಲ್ಲಿ 20 ರಷ್ಟು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಮೈಸೂರು-ಕೊಡಗು ಜಿಲ್ಲೆಯ ವ್ಯಾಪ್ತಿಗೆ ಬರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವದಲ್ಲಿ 110ಕ್ಕೂ ಹೆಚ್ಚು ಹುಲಿಗಳಿವೆ ಎಂದು ಹೇಳಲಾಗಿದ್ದು, ಕಳೆದ ಬಾರಿಗಿಂತ ಈ ವರ್ಷ ಏರಿಕೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

2ನೇ ಸ್ಥಾನ: ಕಳೆದ ಮೂರು ಬಾರಿಯ ಹುಲಿ ಗಣತಿಯಲ್ಲಿ ಅಗ್ರ ಪಂಕ್ತಿ ಕಾಯ್ದುಕೊಂಡಿದ್ದ ಕರ್ನಾಟಕ ಈ ಬಾರಿ 2ನೇ ಸ್ಥಾನಕ್ಕೆ ಬಂದರೂ ರಾಜ್ಯದಲ್ಲಿ ಹುಲಿಗಳ ಸಂತಾನ ವೃದ್ಧಿ ಸಕರಾತ್ಮಕವಾಗಿದೆ. 1973ರಲ್ಲಿ ಹುಲಿ ಯೋಜನೆ ಕೈಗೆತ್ತಿಕೊಂಡ ನಂತರ ರಾಜ್ಯದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿದೆ. ಕರ್ನಾಟಕದಲ್ಲಿ ಇನ್ನು ಹೆಚ್ಚಿನ ಹುಲಿಗಳು ವಾಸಿಸುವಷ್ಟು ಅರಣ್ಯ ಪ್ರದೇಶವಿದ್ದು, ಅವುಗಳನ್ನು ಸಂರಕ್ಷಣೆ ಮಾಡಬೇಕಾದ ತುರ್ತು ಅಗತ್ಯವಿದೆ.

ಕಾರಿಡಾರ್‌: ರಾಜ್ಯದ ಅರಣ್ಯ ಪ್ರದೇಶದಲ್ಲಿ ಇಲಾಖೆ ಕೈಗೊಂಡ ಬಿಗಿ ಕ್ರಮಗಳಿಂದಾಗಿ ಕಳೆದ ಅವಧಿಯಲ್ಲಿ 406 ಇದ್ದ ಹುಲಿಗಳ ಸಂಖ್ಯೆ ಈ ವರ್ಷ 524ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇನ್ನೂ ಸಾವಿರ ಹುಲಿಗಳು ವಾಸಿಸುವಷ್ಟು ಅರಣ್ಯವಿದ್ದು, ನೀಲಗಿರಿ ಜೈವಿಕ ಮಂಡಲದಿಂದ ಉತ್ತರ ಕರ್ನಾಟಕ, ಉತ್ತರ ಭಾರತದ ರಾಷ್ಟ್ರೀಯ ಉದ್ಯಾನ ಮತ್ತು ಅಭಯಾರಣ್ಯಗಳಿಗೆ ಹುಲಿಗಳು ಸಂಚಾರ ಮಾಡಲು ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.

Advertisement

ಜೊತೆಗೆ ಮತ್ತಷ್ಟು ಹುಲಿಗಳ ಹೆಚ್ಚಳಕ್ಕೆ ಬಯೋಲಾಜಿಕಲ್‌ ಕಾರಿಡಾರ್‌ ನಿರ್ಮಾಣ ಮಾಡುವ ಸವಾಲು ಸರ್ಕಾರದ ಮೇಲಿದೆ. ರಾಜ್ಯದಲ್ಲಿ ಅರಣ್ಯ ಇಲಾಖೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ರಕ್ಷಿತಾರಣ್ಯದ ಮೇಲೆ ಮಾನವ ಹಸ್ತಕ್ಷೇಪ, ಅರಣ್ಯ ಒತ್ತುವರಿ, ಅಭಿವೃದ್ಧಿ ಚಟುವಟಿಕೆಗಳು, ಪ್ರವಾಸಿಗರ ಭೇಟಿ, ಕಳ್ಳಬೇಟೆ ಕ್ಷೀಣಿಸಿ, ವನ್ಯ ಜೀವಿಗಳು ನಿರಾತಂಕವಾಗಿ ಬದುಕಲು ಸಾಧ್ಯವಾಗಿದೆ.

ಹುಲಿ ಸರಹದ್ದು: ಜೀವ ವೈವಿಧ್ಯ ತಾಣ, ಹುಲಿ ಸಂರಕ್ಷಿತ ಪ್ರದೇಶ, ವನ್ಯಜೀವಿ ಧಾಮಗಳಲ್ಲಿ ಇಂದಿಗೂ ಆದಿವಾಸಿ ಸಮುದಾಯ ವಾಸಿಸುತ್ತಿರುವುದು ಹುಲಿಗಳ ಸುಗಮ ಜೀವನಕ್ಕೆ ಸಮಸ್ಯೆಯಾಗಿದೆ. ತನ್ನ ಸರಹದ್ದಿನಲ್ಲಿ ಹುಲಿ ಸ್ವತ್ಛಂದವಾಗಿ ಬದುಕಲು ಮಾನವನ ಹಸ್ತಕ್ಷೇಪ ಅಡ್ಡಿಯಾಗಿದೆ.

ಜೊತೆಗೆ ಒತ್ತಡ ಉಂಟಾಗುತ್ತಿರುವುದು ಹುಲಿಗಳ ವಂಶಾಭಿವೃದ್ದಿಗೆ ಮಾರಕವಾಗಿದೆ. ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಕಾಡಿನಲ್ಲಿರುವವರಿಗೆ ಅಗತ್ಯ ಸೌಲಭ್ಯ ನೀಡಿ ಕಾಡಿನಿಂದ ಹೊರಗಿಡುವ ಪ್ರಯತ್ನ ಮಾಡುವ ಮೂಲಕ ವ್ಯಾಘ್ರ ಸಂತತಿ ಹೆಚ್ಚಳಕೆ ಕಾರಣವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next