Advertisement
ಅಲ್ಲದೇ ಜಟ್ಟಿಗಳ ಕಾಳಗದ ಮೆರಗು ಇಲ್ಲದೇ ದಸರಾ ಸಪ್ಪೆ ಎನಿಸುತ್ತದೆ. ದಸರಾ ಕುಸ್ತಿ ಪಂದ್ಯಾವಳಿಗೆ ರಾಜ ಮಹಾರಾಜರ ಕಾಲದ ಇತಿಹಾಸವಿದೆ. ಅಲ್ಲದೇ ಮೈಸೂರು ಅರಸ ಕಾಲದಲ್ಲಿ ಪೈಲ್ವಾನರನ್ನು ಕರೆಸಿ ಪ್ರತೀ ವಾರವೂ ಕುಸ್ತಿ ಪಂದ್ಯಾವಳಿಗಳನ್ನು ನಡೆಸುತ್ತಿದ್ದರು. ದಸರಾ ಹಬ್ಬದ ಸಂದರ್ಭದಲ್ಲಿ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯು ತ್ತಿದ್ದ ವಜ್ರಮುಷ್ಠಿ ಕಾಳಗ ಬಹಳ ಖ್ಯಾತಿ ಪಡೆದಿತ್ತು. ಅಂದು ರಾಜರೇ ಪೈಲಾನರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸುತ್ತಿದ್ದರು.
Related Articles
ಕುಸ್ತಿ ಹಾಗೂ ಗರಡಿ ಮನೆಗೆ ವಿಜಯನಗರದ ಇತಿಹಾಸವಿದ್ದರೂ ಅದಕ್ಕೆ ಹೆಚ್ಚಿನ ಪ್ರೋತ್ಸಾಹ ಲಭಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲಘಟ್ಟದಲ್ಲಿ. ಇವರು ಪ್ರತೀ ವರ್ಷ ದಸರಾ ಮಹೋತ್ಸವದ ಕಾಲದಲ್ಲಿ ಕುಸ್ತಿ ಪಂದ್ಯಾವಳಿ ನಡೆಸಲು ಪ್ರತ್ಯೇಕವಾಗಿ ಹಣ ತೆಗೆದಿರಿಸಿ ವಿವಿಧ ಭಾಗಗಳ ಪೈಲ್ವಾನರನ್ನು ಕರೆಸಿ ಕುಸ್ತಿ ಸ್ಪರ್ಧೆ ನಡೆಸುತ್ತಿದ್ದರು. ಪಂದ್ಯದಲ್ಲಿ ಜಯಶಾಲಿಯಾದವರಿಗೆ ಸೂಕ್ತ ಬಹುಮಾನ, ಬಿರುದುಗಳನ್ನು ನೀಡುತ್ತಿದ್ದರು. ಅಲ್ಲಿಂದ ಕುಸ್ತಿ ಒಂದು ಸಾಂಸ್ಕೃತಿಕ ಕ್ರೀಡೆಯಾಗಿ ಬೆಳೆಯಲಾರಂಭಿಸಿತು.
Advertisement
ಕುಸ್ತಿ ಪಂದ್ಯದಲ್ಲಿ ತಮ್ಮ ಬಲ ಪ್ರದರ್ಶಿಸಿ ಸ್ಪರ್ಧೆಯಲ್ಲಿ ಜಯಗಳಿಸಿದ ಕುಸ್ತಿಪಟುಗಳಿಗೆ ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ ಪ್ರಶಸ್ತಿ ನೀಡಲಾಗುತ್ತಿತ್ತು. ಸುಣದ್ದಕೇರಿ ನಾಲ ಬೀದಿಯ ಗೋಪಾಲಸ್ವಾಮಿ ಗುಡಿ, ಬಸವೇಶ್ವರ ರಸ್ತೆಯ ಮಹಾಲಿಂಗೇಶ್ವರ ಮಠದ ಗರಡಿ, ಕೆ ಜಿ, ಕೊಪ್ಪಲು, ಪಡುವಾರಹಳ್ಳಿಯ ಹತ್ತು ಜನರ ಗರಡಿ, ಹುಲ್ಲಿನ ಬೀದಿಯ ಈಶ್ವರರಾಯನ ಗರಡಿಗಳಲ್ಲದೆ ಇತರ ಹಲವಾರು ಗರಡಿಗಳು ಇವೆ. ಆದರೆ ಕಾಲ ಕಳೆದಂತೆ ಗರಡಿ ಮನೆಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದನ್ನು ನಾವು ಕಾಣಬಹುದು.
ಮೈಸೂರಿನಲ್ಲಿ ಮನೆಗೊಬ್ಬ ಪೈಲ್ವಾನ ಎಂಬ ಮಾತು ಹಿಂದೆ ಬಹಳ ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಈಗ ಮನೆಗೊಬ್ಬ ಪೈಲ್ವಾನ ಹೋಗಿ ಊರಿಗೊಬ್ಬ ಪೈಲ್ವಾನ ಎಂಬಂತಾಗಿದೆ. ಇಂದಿನ ಯುವ ಜನರಿಗೆ ಗರಡಿ ಮನೆಯ ಮಣ್ಣಿನಲ್ಲಿ ಆಸಕ್ತಿ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಜಿಮ್‌ಗಳತ್ತ ಮುಖ ಮಾಡುತ್ತಿದ್ದು, ಗರಡಿ ಮನೆಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಮೈಸೂರು ದಸರಾ ಸಂದರ್ಭದಲ್ಲಿ ಇಂದಿಗೂ ಕುಸ್ತಿಗೆ ಪ್ರಾಧಾನ್ಯತೆಯಿದೆ. ಆದರೆ ಜಿಮ್‌ಗಿಂತಲೂ ಗರಡಿ ಒಂದು ಕೈ ಮೇಲು ಎಂಬುದನ್ನು ಯುವಕರು ಮರೆಯಬಾರದು.
ಐಶ್ವರ್ಯ ಕೆ.ಆರ್., ಫಿಲೋಮಿನಾ ಕಾಲೇಜು, ಮೈಸೂರು