Advertisement

ಮೈಸೂರು ಜಿಲ್ಲೆ ವಿಭಜನೆ ಪ್ರಸ್ತಾಪ ವಿರೋಧಿಸಿ ಪ್ರತಿಭಟನೆ

08:55 PM Oct 15, 2019 | Lakshmi GovindaRaju |

ಮೈಸೂರು: ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವಂತೆ ಪ್ರಸ್ತಾವನೆ ಮಾಡಿರುವ ಮಾಜಿ ಶಾಸಕ ಎಚ್‌.ವಿಶ್ವನಾಥ್‌ ಅವರ ನಡೆ ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಆರು ತಾಲೂಕುಗಳು ಇವೆ. ಹೀಗಿರುವಾಗ 30 ರಿಂದ 35 ಕಿ.ಮೀ.ಗೊಂದು ಜಿಲ್ಲೆ ಮಾಡಲಾಗುತ್ತದೆಯೇ? ಹೀಗೆ ಮೂರು ತಾಲೂಕುಗಳಿಗೆ ಒಂದು ಜಿಲ್ಲೆ ಮಾಡುತ್ತಾ ಹೋದರೆ ರಾಜ್ಯದಲ್ಲಿ ಇನ್ನೂ 20 ರಿಂದ 25 ಹೊಸ ಜಿಲ್ಲೆಗಳನ್ನು ಮಾಡಿ ಎಲ್ಲಾ ಅತೃಪ್ತ ಶಾಸಕರ‌ನ್ನು ಉಸ್ತುವಾರಿಗಳನ್ನಾಗಿ ಮಾಡಿಬಿಡಬಹುದು ಎಂದು ಲೇವಡಿ ಮಾಡಿದರು.

ರಾಜಕೀಯ ಗಿಮಿಕ್‌ಗಾಗಿ ಮೊದಲಿನಿಂದಲೂ ವಿಶ್ವನಾಥ್‌ ಅವರು ಪ್ರಚಾರಕ್ಕಾಗಿ ತಮ್ಮ ಮನಸ್ಸಿಗೆ ಬಂದಂತೆ ಬಹಳಷ್ಟು ಅವೈಜ್ಞಾನಿಕ ಹೇಳಿಕೆಗಳನ್ನು ನೀಡಿ ಈಗಾಗಲೇ ಜನತೆಯಿಂದ ಮುಜುಗರಕ್ಕೀಡಾಗಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಅಧಿಕಾರಕ್ಕಾಗಿ ಈ ರೀತಿಯ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ತನ್ನದೇ ಆದ ಹಿರಿಮೆ ಇದೆ. ಇಡೀ ವಿಶ್ವವೇ ಮೈಸೂರನ್ನು ತಿರುಗಿ ನೋಡುತ್ತದೆ. ದೊಡ್ಡ ರಾಜ್ಯವಾಗಿದ್ದ ಮೈಸೂರು ಸಂಸ್ಥಾನ, ನಮ್ಮ ಮಹಾರಾಜರ ಉದಾತ್ತ ಮನೋಭಾವದಿಂದ ಕರ್ನಾಟಕ ಏಕೀಕರಣವಾದ ಮೇಲೆ ಮೈಸೂರು ಜಿಲ್ಲೆಯಾಗಿದೆ. ಇಂತಹ ಇತಿಹಾಸವುಳ್ಳ ಮೈಸೂರು ಜಿಲ್ಲೆಯನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಇಬ್ಭಾಗ ಮಾಡಲು ಹೊರಟಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ.

ಒಂದು ಹೊಸ ಜಿಲ್ಲೆಯನ್ನು ರಚಿಸಿದರೆ, ಸರ್ಕಾರಕ್ಕೆ ಎಷ್ಟು ಖರ್ಚು ವೆಚ್ಚಗಳಾಗುತ್ತದೆ ಎಂಬ ಪರಿಜ್ಞಾನವಿದೆಯೇ ಇವರಿಗೆ, ಒಂದೆಡೆ ನೆರೆ ಹಾನಿಯಾಗಿ ಜನತೆ ಕಷ್ಟಪಡುತ್ತಿದ್ದರೆ ಇವರಿಗೆ ಹೊಸ ಜಿಲ್ಲೆ ಬೇಕಂತೆ ಎಂದು ಟೀಕಿಸಿದರು. ಮುಖ್ಯಮಂತ್ರಿಯವರು ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆಯನ್ನು ವಿಭಜನೆ ಮಾಡಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ಸೇನಾಪಡೆಯ ಜಿಲ್ಲಾಧ್ಯಕ್ಷ ತೇಜೇಶ್‌ ಲೋಕೇಶ್‌ಗೌಡ, ಶಾಂತಮೂರ್ತಿ, ಆರ್‌.ಪ್ರಭುಶಂಕರ್‌, ಕುಮಾರ್‌ ಗೌಡ, ಬಂಗಾರಪ್ಪ, ದರ್ಶನ್‌ ಗೌಡ, ಅಕ್ಷಯ್‌, ವಂದನ, ವಿಜಯೇಂದ್ರ, ಕೆ.ಸಿ.ಗುರುಮಲ್ಲಪ್ಪ, ರಾಜೇಶ್‌, ಪ್ರದೀಪ್‌, ಬಸವ, ನಂಜುಂಡಸ್ವಾಮಿ, ಶ್ರೀನಿವಾಸ್‌ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next