ಮೈಸೂರು: ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್ 19 ಸೋಂಕಿತರು ಮೃತಪಡುತ್ತಿದ್ದು, ಬುಧವಾರವೂ ಮಹಿಳೆಯೊಬ್ಬರು ಸೋಂಕಿನಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ ಪ್ರತಿದಿನವೂ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಲೇ ಇರುವುದು ಒಂದೆಡೆಯಾದರೆ, ಸೋಂಕಿಗೆ ಮೃತಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬುಧವಾರ ಶೀತ, ಜ್ವರ, ಎದೆನೋವು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ.
ಕಲ್ಯಾಣಗಿರಿ ರಾಜಕುಮಾರ್ ರಸ್ತೆಯ 48 ವರ್ಷದ ಮಹಿಳೆ ಜ್ವರದಿಂದ ಬಳಲುತ್ತಿದ್ದರು. ಜ್ವರ, ಉಸಿರಾಟದ ತೊಂದರೆಯಿಂದ ಜು.6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತ ಸೋಂಕಿತ ಮಹಿಳೆಗೆ ಸಕ್ಕರೆ ಕಾಯಿಲೆ, ಅಸ್ತಮಾ ಸಮಸ್ಯೆ ಇತ್ತು. ಮೃತರ ಅಂತ್ಯಕ್ರಿಯೆಯನ್ನು ಜಿಲ್ಲಾಡಳಿತವೇ ಗೌರವಯುತವಾಗಿ ನೆರವೇರಿಸಿದ್ದು, ಜಿಲ್ಲೆಯಲ್ಲಿ ಸೋಂಕಿಗೆ ಮೃತರ ಸಂಖ್ಯೆ 14ಕ್ಕೇರಿದೆ.
59 ಮಂದಿಗೆ ಸೋಂಕು: ಬುಧವಾರ ಜಿಲ್ಲೆಯ 59 ಮಂದಿಗೆ ಪಾಸಿಟಿವ್ ಆಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದೆ. ಜೊತೆಗೆ ಬುಧವಾರ 18 ಮಂದಿ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 322 ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 253 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಇವರಲ್ಲಿ 12 ಮಂದಿ ಖಾಸಗಿ ಆಸ್ಪತ್ರೆಯಲ್ಲಿ, ಇಬ್ಬರು ವಿವಿ ಪುರಂನ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬುಧವಾರದ ಪ್ರಕರಣಗಳಲ್ಲಿ 23 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ, 15 ಮಂದಿಗೆ ಐಎಲ್‌ಐ, 4 ಎಸ್ ಎಆರ್‌ಐ (ಸಾರಿ) 8 ಮಂದಿ ಅಂತರ ಜಿಲ್ಲಾ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ. ನಾಲ್ವರು ಆರೋಗ್ಯ ಕಾರ್ಯಕರ್ತರು, ಮೂವರು ಪೊಲೀಸರು, ಓರ್ವ ಗರ್ಭಿಣಿ, ಬಾಣಂತಿಗೂ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಎಲ್ಲಾ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಮನೆ, ರಸ್ತೆ, ಗ್ರಾಮ, ಬಡಾವಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಮೈಸೂರಿನ ವಿವಿಧೆಡೆ: ರಾಜೀವ್‌ನಗರ, ಶ್ರೀರಾಂಪುರದ ಸೂರ್ಯ ಲೇಔಟ್, ಕೆ.ಜಿ.ಕೊಪ್ಪಲಿನ ನ್ಯೂ ಕಾಂತರಾಜ ಅರಸ್ ರಸ್ತೆ, ಶಾಂತಿನಗರ, ಆಜಾದ್ ನಗರ, ಮಾರುತಿ ಲೇಔಟ್, ಸಿಹೆಚ್‌ಸಿ ಜಯನಗರ, ಕುವೆಂಪುನಗರ, ಶಾಂತಿನಗರದ ಅಜೀಜ್ ಮುಖ್ಯ ರಸ್ತೆ, ಗಾಯತ್ರಿಪುರಂ, ಜಾಕಿ ಕ್ವಾಟ್ರಸ್, ಜ್ಯೋತಿನಗರ, ರಾಮಕೃಷ್ಣನಗರ, ಕೆಆರ್‌ಎಸ್ ರಸ್ತೆಯ ಜಯದೇವನಗರ, ರಾಘವೇಂದ್ರನಗರ, ಕಲ್ಯಾಣಗಿರಿ, ಹಿನಕಲ್‌ನ ಹೊಸ ರಸ್ತೆ, ಆನಂದನಗರದ ಎಂಎಂಸಿ ಪದವಿಪೂರ್ವ ಹಾಸ್ಟೆಲ್, ವಿವಿ ಮೊಹಲ್ಲಾ, ಬನ್ನಿಮಂಟಪದ ಕೆಎಸ್‌ಆರ್‌ಟಿಸಿ ಡಿಪೋ ಹಾಗೂ ಜಗನ್ ಮೋಹನ ಪ್ಯಾಲೆಸ್ ಹತ್ತಿರದ ರಸ್ತೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೀಲ್‌ಡೌನ್ ಪ್ರದೇಶಗಳು: ಬನ್ನಿಮಂಟಪದ 2ನೇ ಮೇನ್, ರಾಜಕುಮಾರ್ ರಸ್ತೆ, ಬಂಬೂ ಬಜಾರ್, ಜಲಪುರಿ ಪೊಲೀಸ್ ಕ್ವಾಟ್ರಸ್, ದಟ್ಟಗಳ್ಳಿ, ಶಾರದಾದೇವಿನಗರ, ಕುವೆಂಪುನಗರ ಮೊದಲನೇ ಹಂತ, ಬನ್ನಿ ಮಂಟಪ ಸಿ ಲೇಔಟ್, ಲಷ್ಕರ್ ಮೊಹ ಲ್ಲಾದ ಪಾರ್ಕ್ ರಸ್ತೆ, ವಿಜಯನಗರ 2ನೇ ಹಂತದದ ಹೈ ಟೆನ್ಶನ್ ಡಬಲ್ ರೋಡ್, ಸಿದಾಟಛಿರ್ಥ ಲೇಔಟ್, ರಾಮಕೃಷ್ಣನಗರದ ವಾಸು ಲೇಔಟ್ ನಲ್ಲಿನ ನಿವಾಸಿಗೆ ಪಾಸಿಟಿವ್ ಆಗಿದೆ. ಈ ಎಲ್ಲಾಬಡಾವಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.