ಮೈಸೂರು: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 22 ಕೋವಿಡ್ 19 ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 150ರ ಗಡಿ ದಾಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶೂನ್ಯಕ್ಕೆ ಇಳಿಕೆಯಾದ ಬಳಿಕ ಮತ್ತೆ ಒಂದೇ ದಿನ 22 ಪಾಸಿಟಿವ್ ಬಂದಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಬೆಂಗಳೂರಿಗೆ ಕರ್ತವ್ಯದ ಮೇಲೆ ತೆರಳಿ ವಾಪಸಾಗಿದ್ದ 13 ಕೆಎಸ್‌ಆರ್‌ಪಿ ಸಿಬ್ಬಂದಿ ಸೇರಿದಂತೆ 22 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 39ಕ್ಕೆ ಜಿಗಿದಿದೆ. 112 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿತರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರಿಗೂ ಹರಡಿತು: ಬೆಂಗಳೂರಿಗೆ ಕರ್ತವ್ಯದ ಮೇಲೆ 24 ಕೆಎಸ್‌ಆರ್‌ಪಿ ಪೊಲೀಸ್ ಸಿಬ್ಬಂದಿ ತೆರಳಿದ್ದರು. ಕರ್ತವ್ಯ ಮುಗಿದ ಬಳಿಕ ಮೈಸೂರಿಗೆ ಜಾಕಿ ಕ್ವಾರ್ಟಸ್‌ನ ತಮ್ಮ ನಿವಾಸಗಳಿಗೆ ವಾಪಸ್ಸಾಗಿದ್ದರು. ಶನಿವಾರ ಅವರ ಗಂಟಲು ದ್ರವ ಪರೀಕ್ಷೆ ವರದಿ ಬಂದಿದ್ದು, 13 ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಉಳಿದ 11 ಮಂದಿ ವರದಿ ನೆಗೆಟಿವ್ ಆಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸ್ ಆಯುಕ್ತ ಚಂದ್ರಗುಪ್ತ ಸಿಬ್ಬಂದಿಗೆ ಧೈರ್ಯ ತುಂಬಿದರು
13 ಕೆಎಸ್‌ಆರ್‌ಪಿ ಸಿಬ್ಬಂದಿ ಸೇರಿದಂತೆ ಬೆಂಗಳೂರಿನಿಂದ ವಾಪಸಾಗಿದ್ದ 15 ಮಂದಿ,ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದ ವಾಪಸ್ಸಾಗಿದ್ದ ತಲಾ ಇಬ್ಬರು, ಆಂಧ್ರಪ್ರದೇಶ, ದೆಹಲಿಯಿಂದ ಮೈಸೂರಿಗೆ ಬಂದಿದ್ದ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇನ್ನು ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ 19 ವರ್ಷದ ಯುವಕನಿಗೆ ಉಸಿರಾಟದ ಸಮಸ್ಯೆಯಿಂದ ಸೋಂಕು ಕಾಣಿಸಿಕೊಂಡಿದೆ. ಹುಲ್ಲಹಳ್ಳಿಯ ಜೆಎಸ್‌ಎಸ್ ಕಾಲೇಜು ರಸ್ತೆಯಲ್ಲಿರುವ ನೇಹಾ ಟೆಕ್ಸ್‌ಟೈಲ್ಸ್‌ಗೆ ಕಳೆದ 2 ವಾರಗಳಿಂದ ಭೇಟಿ ನೀಡಿರುವವರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.
ಪಿರಿಯಾಪಟ್ಟಣದಲ್ಲೂ ಪಾಸಿಟಿವ್: ತಾಲೂಕು ಬೈಲುಕುಪ್ಪೆ ಟಿಬೇಟಿಯನ್ ಮೊದಲ ಕ್ಯಾಂಪ್‌ನಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಪಿರಿಯಾಪಟ್ಟಣ ಬೈಲುಕುಪ್ಪೆ ಮೊದಲ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಕ್ವಾರಂಟೈನಲ್ಲಿದ್ದ 32 ವರ್ಷ ಟಿಬೇಟಿಯನ್ ಯುವಕನಿಗೆ ಸೋಂಕು ದೃಢಪಟ್ಟಿದೆ. ಜೂ.16ರಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಟ್ಯಾಕ್ಸಿ ಮೂಲಕ ಟಿಬೇಟಿಯನ್ ಶಿಬಿರಕ್ಕೆ ತೆರಳಿದ್ದ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಜೂ.18ರಂದು ಪರೀಕ್ಷಾ ವರದಿ ಬಂದಿದ್ದು, ಸೋಂಕು ಪತ್ತೆಯಾಗಿದೆ. ಶಿಬಿರದ ಸ್ಥಳವನ್ನು ಸೀಲ್‌ಡೌನ್ ಮಾಡಲಾಗಿದೆ.