ಧನಂಜಯ್ ರಂಜನ್ ನಿರ್ದೇಶನದ “ಮೈಸೂರು ಡೈರೀಸ್’ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. “ದೂರದಿಂದ ಸುರಸುಂದರಾಂಗ ಬಂದ ಜಾಣಮರೀನ್ ವೆಲ್ ಕಮ್ ಮಾಡೋಣ..’ ಎಂಬ ಹಾಡಿಗೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಗೊತ್ತೇ ಇದೆ. ಈಗ ಮತ್ತೊಂದು ಲಿರಿಕಲ್ ವಿಡಿಯೋ ಸಾಂಗ್ ಕೂಡ ಕೇಳುಗರ ಮನಗೆದ್ದಿದೆ.
ಹೌದು, ಇತ್ತೀಚೆಗೆ ಬಿಡುಗಡೆಯಾದ “ಮುಂಜಾನೆಯಿಂದ ಕಾದೆ ನಾನು, ಸಂಜೆಯಾಯ್ತು ಸಿಗೊಲ್ವೇನೋ, ಘಾಟಿ ಮಾಡು ಗಂಡು ಗಿಡುಗ..’ ಎಂಬ ಹಾಡಿಗೆ ಎಲ್ಲೆಡೆಯಿಂದಲೂ
ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚರಣ್‌ರಾಜ್ ಸಂಗೀತ ನೀಡಿರುವ ಈ ಹಾಡಿಗೆ ನಿರ್ದೇಶಕ ಧನಂಜಯ ರಂಜನ್ ಅವರ ಸಾಹಿತ್ಯವಿದೆ.
ಸಿದ್ಧಾರ್ಥ್ ಮತ್ತು ಮೇಘನಾ ಭಟ್ ಈ ಹಾಡಿಗೆ ಧ್ವನಿಯಾಗಿದ್ದು, ಪಾವನಾ ಗೌಡ ಹಾಗು ಪ್ರಭು ಮಂಡ್ಕರ್ ಕಾಣಿಸಿಕೊಂಡಿದ್ದಾರೆ. ಸುನಂದ ಕೃಷ್ಣಪ್ಪ ನಿರ್ಮಾಣದ ಈ ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗಲು ತಯಾರಿ ನಡೆಯುತ್ತಿದೆ. ಈ ಹಿಂದೆ ಬಿಡುಗಡೆಯಾದ ಮೊದಲ ಹಾಡು “ದೂರದಿಂದ…’ ಹಾಡಿಗೆ ಸುಚಿತ್ ಹಾಗೂ ಧನ್ಯಶ್ ಧ್ವನಿಯಾಗಿದ್ದರು.
ಅದು ಚಿತ್ರದ ಇಂಟ್ರಡಕ್ಷನ್ ಹಾಡಾಗಿದ್ದು, “ಮೈಸೂರು ಡೈರೀಸ್’ ಶೀರ್ಷಿಕೆಗೆ ತಕ್ಕಂತೆ ಮೊದಲ ಹಾಡಲ್ಲಿ ಇಡೀ ಮೈಸೂರನ್ನು ವಿಶಿಷ್ಟವಾಗಿ ತೋರಿಸುವ ಪ್ರಯತ್ನ ಮಾಡಲಾಗಿತ್ತು. ವಿದೇಶದಲ್ಲಿರುವ ಬಾಲ್ಯದ ಗೆಳೆಯನೊಬ್ಬ ಮೈಸೂರಿಗೆ ಬಂದಾಗ, ಉಳಿದ ಮೂವರು ಗೆಳೆಯರು ಆ ಬಾಲ್ಯದ ಸವಿ ನೆನಪನ್ನು ಮೆಲುಕು ಹಾಕುವಂತಹ ಸನ್ನಿವೇಶ ಈ ಇಂಟ್ರಡಕ್ಷನ್ ಹಾಡಲ್ಲಿದೆ ಎಂಬುದು ಚಿತ್ರತಂಡದ ಮಾತು.
“ಮೈಸೂರು ಡೈರೀಸ್’ ಬಗ್ಗೆ ಹೇಳುವ ನಿರ್ದೇಶಕರು, “ಇದು ಮೈಸೂರಿನ ಭಾಗದಲ್ಲಿ ನಡೆಯೋ ಕಥೆ. ಮೈಸೂರು ಇಲ್ಲೊಂದು ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಬ್ಬರಲ್ಲೂ ಒಂದೊಂದು ನೆನಪಿನ ಡೈರಿ ಇರುತ್ತೆ. ಹಳೆಯ ಮಧುರ ನೆನಪುಗಳ ಗುಚ್ಚದೊಂದಿಗೆ ಈ ಚಿತ್ರ ಮಾಡಿದ್ದು, ಗೆಳೆತನದ ಜೊತೆಗೆ ಭಾವನೆಗಳ ಮಿಶ್ರಣ ಚಿತ್ರದ ಹೂರಣ’ ಎಂಬುದು ಅವರ ಹೇಳಿಕೆ. ಅನೂಪ್ ಸೀಳಿನ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಶಕ್ತಿ ಶೇಖರ್ ಛಾಯಾಗ್ರಹಣ ಮಾಡಿದ್ದಾರೆ. ಸಿ.ಕೆ.ಸಿನಿ ಕ್ರಿಯೇಷನ್ಸ್ ಮತ್ತು ಸಮರ್ಥ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿ ಸುನಂದಾ ಕೃಷ್ಣಪ್ಪ ಚಿತ್ರವನ್ನು ನಿರ್ಮಿಸಿದ್ದಾರೆ.