Advertisement

ಬರೀ 1 ತಾಸಿಗೆ ಸೀಮಿತವಾಗಿದ್ದ ಜಿಲ್ಲಾಧಿಕಾರಿ ನಡೆ

07:51 PM Mar 21, 2021 | Team Udayavani |

ಎಚ್‌.ಡಿ.ಕೋಟೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಕಾರ್ಯಕ್ರಮ ಕೇವಲ ಒಂದು ತಾಸಿಗೆ ಮಾತ್ರ ಸೀಮಿತ ವಾಗಿತ್ತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬರೋಬ್ಬರಿ 6 ತಾಸು ತಡವಾಗಿ ಆಗಮಿಸಿದ್ದರಿಂದ ‌ ಗೊಂದಲದಲ್ಲಿ ಆರಂಭಗೊಂಡ ಸಭೆ ಒಂದೇ ತಾಸಿನಲ್ಲಿ ಗೊಂದಲದಲ್ಲಿಯೇ ತರಾತುರಿಯಲ್ಲಿ ಅಂತ್ಯಗೊಂಡಿತು.

Advertisement

ಇದು ತಾಲೂಕಿನ ಎಲೆಹುಂಡಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಕಾರ್ಯಕ್ರಮದಲ್ಲಿ ಕಂಡು ಬಂದ ಪ್ರಸಂಗ. ಎಲೆಹುಂಡಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕಾರ್ಯಕ್ರಮ ಬೆಳಗಿನ 10 ಗಂಟೆಯಿಂದ ಸಂಜೆ 5 ಗಂಟೆ ತನಕ ನಿಗದಿಪಡಿಸಲಾಗಿತ್ತು. ಜಿಲ್ಲಾಧಿಕಾರಿಗಳು ಆಗಮಿಸು ವುದರಿಂದ ನಮ್ಮೂರಿನ ಸಮಸ್ಯೆ ಪರಿಹಾರದ ಜೊತೆಗೆ ಸರ್ಕಾರಿ ಸಲವತ್ತುಗಳ ವಂಚಿತರಿಗೆ ಸವಲತ್ತುಗಳು ದೊರೆಯುತ್ತವೆ. ಸ್ಥಳದಲ್ಲಿಯೇ ಹಲವು ಸಮಸ್ಯೆಗಳು ಪರಿಹಾರ ಕಾಣುತ್ತವೆ  ಎಂಬ ಮಹದಾಸೆಯಿಂದ ಮುಂಜಾನೆಯಿಂದ ಕಾರ್ಯಕ್ರಮ ಆಯೋಜನೆ ಗೊಂಡಿದ್ದ ಜಾಗದಲ್ಲಿ ಅಪಾರ ಪ್ರಮಾಣದಲ್ಲಿ ಜನರು ಕಾದು ನಿಂತಿದ್ದರು.

6 ತಾಸು ತಡವಾಗಿ ಬಂದ ಡೀಸಿ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮೈಸೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಶಿಷ್ಟಾಚಾರದಂತೆ ಜಿಲ್ಲಾಧಿಕಾರಿಗಳು ನ್ಯಾಯಾ ಧೀಶರನ್ನು ಸ್ವಾಗತಿಸುವ ಸಲುವಾಗಿ ಮೈಸೂ ರಿನಲ್ಲೇ ಉಳಿದುಕೊಂಡಿದ್ದರು. ಹೀಗಾಗಿ 10 ಗಂಟೆಗೆ ಬರಬೇಕಾಗಿದ್ದ ಜಿಲ್ಲಾಲ್ಲಾಧಿಕಾರಿಗಳು 6 ಗಂಟೆ ತಡವಾಗಿ ಎಲೆಹುಂಡಿ ಗ್ರಾಮಕ್ಕೆ ಭೇಟಿ ನೀಡಿದರು.

ವೇದಿಕೆಗೆ ಆಗಮಿಸುವ ವೇಳೆಗೆ 3 ಗಂಟೆಯಾಗಿತ್ತು. ಅಲ್ಲಿಂದ ನೇರ ಭೀಮ ನಹಳ್ಳಿ ಆಶ್ರಮ ಶಾಲೆಗೆ ತೆರಳಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೋಜನ ಮುಗಿಸಿ ಅಹವಾಲು ಆಲಿಸುವ ಸ್ಥಳಕ್ಕೆ ಆಗಮಿಸುವಾಗ ಸಂಜೆ 4 ಗಂಟೆ ಯಾಗಿತ್ತು.

ತರಾತುರಿ‌ ಸಭೆ: ಗೊಂದಲದೊಂದಿಗೆ ಆರಂಭಗೊಂಡ ಸಭೆಯಲ್ಲಿ ಬಹುಸಂಖ್ಯೆಯಲ್ಲಿ ರೈತರ ಜಮೀನುಗಳ ರಸ್ತೆ, ಓಣಿ ಒತ್ತುವರಿ, ಹಲವಾರು ವರ್ಷಗಳಿಂದಲೂ ಕೃಷಿ ನಡೆಸುತ್ತಿರುವ ಭೂಮಿಗೆ ಏಕವ್ಯಕ್ತಿ ದುರಸ್ತಿ ಮಾಡದೇ ಇರುವುದು, ಲಂಚ ನೀಡದೆ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಕೆಲಸ ಕಾರ್ಯಗಳನ್ನು ನೆರವೇರಿಸುತ್ತಿಲ್ಲ. ಹಲವು ಮಂದಿಗೆ ವಾಸಕ್ಕೆ ನಿವೇಶನವೇ ಇಲ್ಲ, ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ತಡೆಗೆ ರೈಲ್ವೆಕಂಬಿಗಳನ್ನು ಅಳವಡಿಬೇಕು ಎಂಬ ದೂರುಗಳು ಸಭೆಯಲ್ಲಿ ಕೇಳಿ ಬಂದವು. ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಸಂಬಂಧ ಪಟ್ಟ ಅಧಿಕಾರಿಗಳೊಟ್ಟಿಗೆ ಚರ್ಚಿಸಿ ತ್ವರಿತಗತಿ ಯಲ್ಲಿ ಸರಿಪಡಿಸುವ ಭರವಸೆ ನೀಡಿದರು.

Advertisement

ಏಕ ವ್ಯಕ್ತಿ ದುರಸ್ತಿ ಕಾರ್ಯ ಮಾಡುವುದು ಕಷ್ಟಕರ, ಇರುವ ಭೂಮಿ ವಿಸ್ತೀರ್ಣಕ್ಕಿಂತ ಹೆಚ್ಚಿನ ಸಾಗುವಳಿ ಪತ್ರ ವಿತರಿಸ ಲಾಗಿದೆ. ಇದರಿಂದ ಗೊಂದಲ ಉಂಟಾಗುವುದರನ್ನು ಸರಿಪಡಿಸಲು ನಿಯಮ ಪಾಲನೆ ಮಾಡಿ ಎಲ್ಲಾ ಭೂಮಿ ಒಟ್ಟಿಗೆ ಸರ್ವೆ ನಡೆಸಿ ದುರಸ್ತಿಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು.

ನಿರಾಸೆ ಜನ: ಜಿಲಾಧಿಕಾರಿ ಆಗಮನದಿಂದ ಸ್ಥಳದಲ್ಲಿಯೇ ಬಹುತೇಕ ಸಮಸ್ಯೆಗಳು ಪರಿಹಾರವಾಗು ತ್ತವೆ ಅನ್ನುವ ಮಹದಾಸೆ ಹೊಂದಿದ್ದ ಜನರಿಗೆ ಸ್ಥಳದಲ್ಲಿ ಒಂದೂ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಜನರು ನಿರಾಸೆ ವ್ಯಕಪಡಿಸಿದರು.

ಅಂಗವಿಕಲನ ದೂರಿಗೆ ಸ್ಪಂದನೆ ಇಲ್ಲ: ಸುಮಾರು ‌ 35 ವರ್ಷಗಳ ಹಿಂದಿನಿಂದಲೂ ಎಲೆಹುಂಡಿ ಗ್ರಾಮದ ರಸ್ತೆಬದಿಯಲ್ಲಿ ವಾಸಿವಾಗಿದ್ದು ಅಂಗವಿಕಲ ರಾಮಯ್ಯ, ಜಿಲ್ಲಾಧಿಕಾರಿಗಳಿಂದ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿಕೊಳ್ಳಲು ವೇದಿಕೆಯತ್ತ ಆಗಮಿಸಿದರು. ಈ ವೇಳೆ ಆತನ ದೂರನ್ನೂ ಆಲಿಸಲಿಲ್ಲ. ಜಿಲ್ಲಾಧಿಕಾರಿ ಮತ್ತು ತಂಡವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರಾಮಯ್ಯ ಅಲ್ಲಿಂದ ನಿರ್ಗಮಿಸಬೇಕಾಯಿತು. ಅವ್ಯವಸ್ಥೆ: ಜಿಲ್ಲಾಧಿಕಾರಿ ಬಳಿ ಸಮಸ್ಯೆ ಹೇಳಿಕೊಳ್ಳಲು ನೂರಾರು ಮಂದಿ ಅದರಲ್ಲೂ ವಿಶೇಷವಾಗಿ ಮಹಿಳೆಯರೇ ಬಹುಸಂಖ್ಯೆಯಲ್ಲಿ ಅಗಮಿಸಿದ್ದರು . ಆದರೆ, ಅಲ್ಲಿ ಶೌಚಾಲಯ ಇರಲಿ, ಕನಿಷ್ಠ ಪಕ್ಷ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಒಂದು ಕಡೆ ಊಟವೂ ಇಲ್ಲದೆ ಕುಡಿಯಲು ನೀರೂ ಇಲ್ಲದೆ, ಕುಳಿತುಕೊಳ್ಳಲು ಸಮರ್ಪಕ ಆಸನಗಳ ವ್ಯವಸ್ಥೆಗಳೂ ಇಲ್ಲದೆ ಜನ ಪರದಾಡಿದರು. ಕಡೆಗೆ ತಾಲೂಕು ಆಡಳಿತಕ್ಕೆ ಹಿಡಿ ಶಾಪಹಾಕಿ ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು.

ಒಟ್ಟಾರೆ ಇಷ್ಟೆಲ್ಲಾ ಬೆಳವಣಿಗೆಗಳು ಕೇವಲ 1 ತಾಸಿನಲ್ಲಿ ನಡೆಯಿತು. ಸ್ಥಳದಲ್ಲಿ ಬೆರಳೆಣಿಯಷ್ಟು ಸಮಸ್ಯೆಗಳು ಪರಿಹಾರವಾಗದೇ ಇದ್ದದ್ದಕ್ಕೆ ನೆರೆದಿದ್ದ ಜನರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿಧವಾ ವೇತನ, ಅಂಗವಿಲವೇತನ ಸೇರಿದಂತೆ ಒಂದೆರಡು ಸರ್ಕಾರಿ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಈ ವೇಳೆ ಜಿಪಂ ಸಿಇಒ ಯೋಗೇಶ್‌, ಉಪವಿಭಾಗಾಧಿಕಾರಿ ವೀಣಾ, ರಾಜಸ್ವ ನಿರೀಕ್ಷ ಮಹೇಶ್‌ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ, ತಾಪಂ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next