Advertisement

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಅದ್ದೂರಿ ತೆರೆ

06:00 AM Oct 20, 2018 | Team Udayavani |

ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿಯ ಅದ್ದೂರಿ ಮೆರವಣಿಗೆಯೊಂದಿಗೆ ಹತ್ತು ದಿನಗಳ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಂಪನ್ನಗೊಂಡಿದೆ. ದಸರೆಯ ವೈಭವವನ್ನು ಕಣ್ತುಂಬಿಕೊಂಡ ಲಕ್ಷೋಪಲಕ್ಷ ಜನ ಮುಂದಿನ ದಸರಾವನ್ನು ಎದುರು ನೋಡುತ್ತಾ ತೆರಳಿದ್ದಾರೆ.

Advertisement

ಅ.10ರಂದು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದರು. ಹತ್ತನೇ ದಿನವಾದ ಶುಕ್ರವಾರ, ಮಧ್ಯಾಹ್ನ 2.30ರಿಂದ 3.16ರವರೆಗೆ ಸಲ್ಲುವ ಕುಂಭ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. 

ಬಳಿಕ, ಮಧ್ಯಾಹ್ನ 4.15ಕ್ಕೆ ಅರಮನೆ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ನಿಂತು, ದಸರಾ ಗಜಪಡೆಯ ಕ್ಯಾಪ್ಟನ್‌ ಅರ್ಜುನ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತು ತರುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ಸಾಥ್‌ ನೀಡಿದರು. 

ಇದಕ್ಕೂ ಮೊದಲು ಮಧ್ಯಾಹ್ನ 2.30ಕ್ಕೆ ಅರಮನೆಯ ಆವರಣದಲ್ಲಿ ಬಿಡಾರ ಹೂಡಿದ್ದ ಗಜಪಡೆಯನ್ನು ಸಿಂಗರಿಸಿ ಕರೆತರಲಾಯಿತು. ಮಧ್ಯಾಹ್ನ 3 ಗಂಟೆ 6 ನಿಮಿಷಕ್ಕೆ ಆರಂಭವಾದ ಜಂಬೂಸವಾರಿ ಮೆರವಣಿಗೆ, ಸಂಜೆ 6.30 ಗಂಟೆಗೆ ಬನ್ನಿಮಂಟಪ ಮೈದಾನ ತಲುಪಿತು.

ಮುಗಿದ ಲಗ್ನ:
ಮಧ್ಯಾಹ್ನ 3.40ರಿಂದ 4.10ರ ಶುಭ ಕುಂಭಲಗ್ನದಲ್ಲಿ ಪುಷ್ಪಾರ್ಚನೆಗೆ ನಿಗದಿ ಮಾಡಲಾಗಿತ್ತು. ಆದರೆ, ಮೆರವಣಿಗೆ ಆರಂಭವಾಗಿದ್ದು ತಡವಾಗಿದ್ದರಿಂದ ಮೆರವಣಿಗೆ ಮಧ್ಯೆಯೇ ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಡಲಾಯಿತು. ಆದರೂ, ಮುಖ್ಯಮಂತ್ರಿ ಸೇರಿ ಗಣ್ಯರು ವೇದಿಕೆ ಏರಿದಾಗ ಕುಂಭ ಲಗ್ನ ಮುಗಿದಿತ್ತು. ಸಂಜೆ 4.13ಕ್ಕೆ ಪುಷ್ಪಾರ್ಚನೆ ಮಾಡಿದರು.

Advertisement

ಅದ್ದೂರಿ ಮೆರವಣಿಗೆ:
ನಾಡಿನ ಕಲೆ, ಸಂಸ್ಕೃತಿ, ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ 50ಕ್ಕೂ ಹೆಚ್ಚು ಕಲಾತಂಡಗಳು, ಕಲೆ, ಸಂಸ್ಕೃತಿ, ಸಾಹಿತ್ಯ, ಪ್ರವಾಸಿ ತಾಣಗಳು, ಸರ್ಕಾರದ ಕಾರ್ಯಕ್ರಮಗಳನ್ನು ಪರಿಚಯಿಸುವ 42 ಸ್ತಬ್ದ ಚಿತ್ರಗಳು, ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ ದಸರಾ ಗಜಪಡೆಯ ಆನೆಗಳು ಅರಮನೆ ಆವರಣದಿಂದ ಬನ್ನಿಮಂಟಪ ಮೈದಾನದವರೆಗೆ 5 ಕಿ.ಮೀ. ದೂರ ಮೆರವಣಿಗೆಯಲ್ಲಿ ಸಾಗಿದವು. ಸತತ ಏಳನೇ ಬಾರಿ ಚಿನ್ನದ ಅಂಬಾರಿ ಹೊತ್ತು ಗಜ ಗಾಂಭೀರ್ಯದಿಂದ ಸಾಗಿದ ಅರ್ಜುನ ಎಲ್ಲರ ಮೆಚ್ಚುಗೆಗೆ ಪಾತ್ರನಾದ.

ವಾಲಿದ ಅಂಬಾರಿ:
ಇತ್ತೀಚಿನ ಕೆಲ ವರ್ಷಗಳಿಂದ ಅಂಬಾರಿ ಆನೆ ಗಂಟೆಗಟ್ಟಲೆ 750 ಕೆ.ಜಿ.ತೂಕದ ಅಂಬಾರಿ ಹೊತ್ತು ನಿಲ್ಲಬೇಕು ಎಂಬ ಕಾರಣಕ್ಕೆ ಮೆರವಣಿಗೆ ಆರಂಭವಾದ ನಂತರ ಅರ್ಜುನನಿಗೆ ಅಂಬಾರಿ ಕಟ್ಟಲಾಗುತ್ತಿತ್ತು. ಮೆರವಣಿಗೆಯ ಕೊನೆಯಲ್ಲಿ ಅಂಬಾರಿ ಆನೆ ಅರ್ಜುನ ಸಾಗುತ್ತಿತ್ತು. ಆದರೆ, ಈ ಬಾರಿ ಪುಷ್ಪಾರ್ಚನೆಗೆ ನಿಗದಿ ಮಾಡಿದ್ದ ಸಮಯ ಮೀರುತ್ತದೆ ಎಂಬ ಕಾರಣಕ್ಕೆ 47 ಕಲಾತಂಡಗಳು ಸಾಗಿದ ನಂತರ ಮಧ್ಯದಲ್ಲಿ ಅಂಬಾರಿಗೆ ಪುಷ್ಪಾರ್ಚನೆ ಮಾಡಲಾಯಿತು. ಅದರ ಹಿಂದೆ ಇನ್ನುಳಿದ ಕಲಾ ತಂಡಗಳು, ಸ್ತಬ್ದಚಿತ್ರಗಳು ಸಾಗಿದವು. ಹೀಗಾಗಿ, ಸಮಯದ ಅಭಾವದಿಂದ ತರಾತುರಿಯಲ್ಲಿ ಅರ್ಜುನನ ಮೇಲೆ ಅಂಬಾರಿ ಕಟ್ಟಿದ್ದರಿಂದ ತಿಲಕ್‌ನಗರ ದಾಟಿ ಮುಂದೆ ಸಾಗಿದಾಗ ಅರ್ಜುನನ ಬೆನ್ನ ಮೇಲಿದ್ದ ಅಂಬಾರಿ ಕೊಂಚ ಬಲಕ್ಕೆ ಜಾರಿತ್ತು.

ಕಾಂಗ್ರೆಸ್ಸಿಗರು ಮತ್ತೆ ಗೈರು:
ದಸರಾ ಆರಂಭದಿಂದಲೂ ದೂರ ಉಳಿದಿರುವ ಸ್ಥಳೀಯ ಕಾಂಗ್ರೆಸ್‌ ಶಾಸಕರು, ಮುಖಂಡರು ಜಂಬೂಸವಾರಿ ದಿನ ಕೂಡ ದೂರ ಉಳಿದಿದ್ದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಬಂದಿದ್ದರೂ ಸ್ಥಳೀಯ ಕಾಂಗ್ರೆಸ್ಸಿಗರ್ಯಾರೂ ಇತ್ತ ಬರಲಿಲ್ಲ. ಆದರೆ, ಬಿಜೆಪಿಯ ಸಂಸದ ಪ್ರತಾಪ್‌ ಸಿಂಹ, ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಬಿ.ಹರ್ಷವರ್ಧನ್‌ ಉಪಸ್ಥಿತರಿದ್ದರು.

ರಾಜವಂಶಸ್ಥರು ಗೈರು
ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಪುಷ್ಪಾರ್ಚನೆ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕಾಗಿತ್ತು. ಆದರೆ, ಪ್ರಮೋದಾದೇವಿ ಒಡೆಯರ್‌ ಅವರ ತಾಯಿ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸಹೋದರಿ ಇಬ್ಬರೂ ನಿಧನರಾದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸೂತಕದ ಛಾಯೆ ಮನೆ ಮಾಡಿತ್ತು. ಹೀಗಾಗಿ, ರಾಜವಂಶಸ್ಥರು ವಿಜಯದಶಮಿಯ ಧಾರ್ಮಿಕ ಆಚರಣೆಗಳನ್ನು ರದ್ದು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next