Advertisement

Mysore Dasara: ದಸರಾ ಚಲನಚಿತ್ರೋತ್ಸವದಲ್ಲಿ ‘ಪ್ರಚಂಡ ಕುಳ್ಳ’ನ ನೆನಪು

03:35 PM Sep 23, 2024 | Team Udayavani |

ಮೈಸೂರು: ಈ ಬಾರಿ ನಾಡಹಬ್ಬ ದಸರೆಯ ಚಲನಚಿತ್ರೋತ್ಸವ ವನ್ನು ಸ್ಯಾಂಡಲ್‌ವುಡ್‌ನ‌ಲ್ಲಿ ಪ್ರಚಂಡ ಕುಳ್ಳ ನೆಂದೆ ಖ್ಯಾತಿಗಳಿಸಿದ್ದ ಹಾಸ್ಯನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್‌ ಅವರ ನೆನಪಿನಲ್ಲಿ ಏರ್ಪಡಿಸಲಾಗುತ್ತಿದೆ.

Advertisement

ಅ.4 ರಿಂದ 10ರವರೆಗೆ ನಗರದ ಮಾಲ್‌ ಆಫ್‌ ಮೈಸೂರು ಆವರಣದಲ್ಲಿ ಇರುವ ಐನಾಕ್ಸ್ ಮಲ್ಟಿಫ್ಲೆಕ್ಸ್‌ ಹಾಗೂ ಬಿಎಂಎಚ್‌ ಆಸ್ಪತ್ರೆ ಸಮೀಪವಿರುವ ಹ್ಯಾಬಿಟೆಟ್‌ ಮಾಲ್‌ನ ಡಿಆರ್‌ಸಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದ್ದೂ ದ್ವಾರಕೀಶ್‌ ಅವರು ನಿರ್ಮಿಸಿ, ಡಾ.ರಾಜಕುಮಾರ್‌ ಅಭಿನಯದ “ಮೇಯರ್‌ ಮುತ್ತಣ್ಣ’ ವಿಷ್ಣುವರ್ಧನ್‌ ನಾಯಕ ನಟನಾಗಿ ಅಭಿನಯಿಸಿರುವ ಹಾಸ್ಯ ಪ್ರಧಾನ ಚಿತ್ರ “ಗುರು ಶಿಷ್ಯರು’ ದ್ವಾರಕೀಶ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ “ಕಳ್ಳಕುಳ್ಳ’, “ಪ್ರಚಂಡ ಕುಳ್ಳ’ ಸೇರಿದಂತೆ ಇನ್ನೂ ಹಲವು ಉತ್ತಮ ಚಿತ್ರಗಳು ಬೆಳ್ಳಿತೆರೆಯ ಮೇಲೆ ಮತ್ತೂಮ್ಮೆ ಸಿನಿ ರಸಿಕರಿಗೆ ರಸದೌತಣ ನೀಡಲಿವೆ. ‌

ಈ ವರ್ಷ ದ್ವಾರಕೀಶ್‌ಗೆ ಗೌರವ: 2022ರಲ್ಲಿ ನಟ ದಿ.ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಸಿನಿಮಾ ಗಳನ್ನು ಹೆಚ್ಚಾಗಿ ಪ್ರದರ್ಶಿಸಲಾಯಿತು. 2023ರಲ್ಲಿ ಹಾಸ್ಯನಟ ನರಸಿಂಹರಾಜು ಅವರ ಜನ್ಮಶತಮಾನೋತ್ಸವ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವದಲ್ಲಿ ಅವರ ಸಿನಿಮಾಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವರ್ಷ ದ್ವಾರಕೀಶ್‌ಗೆ ಗೌರವ ಸಲ್ಲಿಸಲು ಅವರ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಅಲ್ಲದೇ ಕನ್ನಡ ಚಲನಚಿತ್ರ ರಂಗದ ಬೆಳವಣಿಗೆಗೆ ದ್ವಾರಕೀಶ್‌ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಜೊತೆಗೆ ಮೈಸೂರು ಜಿಲ್ಲೆಯ ಹುಣಸೂರಿನವರು. ಈ ಹಿನ್ನೆಲೆಯಲ್ಲಿ ಚಿತ್ರೋತ್ಸವದಲ್ಲಿ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ.

80ಕ್ಕೂ ಹೆಚ್ಚು ಸಿನಿಮಾ ಪ್ರದರ್ಶನ: ಚಲನಚಿತ್ರೋತ್ಸವ ಉದ್ಘಾಟನಾ ದಿನವಾದ 4 ರಂದು ದ್ವಾರಕೀಶ್‌ ಅವರ ಪುತ್ರ, ಚಲನಚಿತ್ರ ನಿರ್ಮಾಪಕ ಯೋಗೇಶ್‌ ಅವರನ್ನು ವೇದಿಕೆಯಲ್ಲಿ ಗೌರವಿಸಲಾಗುತ್ತದೆ. ಚಿತ್ರೋತ್ಸವದಲ್ಲಿ ದ್ವಾರಕೀಶ್‌ ಸಿನಿಮಾಗಳಲ್ಲದೇ ರಾಜ್ಯ, ರಾಷ್ಟ್ರ ಹಾಗೂ ಅಂತಾ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಸಿನಿಮಾಗಳು, ಕಲಾತ್ಮಕ ಹಾಗೂ ಕಮರ್ಷಿಯಲ್‌ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ಅತ್ಯುತ್ತಮ ಕಿರುಚಿತ್ರಗಳು ಕೂಡ ಪ್ರದರ್ಶನ ಕಾಣಲಿವೆ. ಚಿತ್ರೋತ್ಸವಕ್ಕೆ ಐನಾಕ್ಸ್‌ನ ಮೂರು ಸ್ಕ್ರೀನ್‌ ಹಾಗೂ ಡಿಆರ್‌ಸಿಯ ಒಂದು ಸ್ಕ್ರೀನ್‌ ನಿಗದಿಯಾಗಿವೆ. ಸುಮಾರು 80ಕ್ಕೂ ಹೆಚ್ಚು ಸಿನಿಮಾವನ್ನು ಒಂದು ವಾರಕಾಲ ವೀಕ್ಷಣೆ ಮಾಡಬಹುದಾಗಿದೆ. ಚಿತ್ರೋತ್ಸವಕ್ಕೆ ಸಿನಿಮಾಗಳನ್ನು ನೀಡುವಂತೆ ದೇಶದ ಪ್ರತಿಷ್ಠಿತ ಫಿಲ್ಮ್ ಇನ್‌ಸ್ಟಿಟ್ಯೂಟ್‌ ಹಾಗೂ ನಿರ್ಮಾಣ ಸಂಸ್ಥೆಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದ್ದು. ಒಂದೆರಡು ದಿನದಲ್ಲಿ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ. ‌

ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಗೊಂಡಿರುವ ಕಿರುಚಿತ್ರಗಳಲ್ಲಿ ಅತ್ಯುತ್ತಮ ಚಿತ್ರಗಳಿಗೆ ಅ.8 ರಂದು ಬಹುಮಾನ ವಿತರಣಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅ.4 ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಿನಿಮಾ ರಂಗದಿಂದ ಆಹ್ವಾನಿತರನ್ನು ಅಂತಿಮಗೊಳಿಸುವ ಕೆಲಸ ನಡೆಯುತ್ತಿದೆ.

Advertisement

ಚಲನಚಿತ್ರೋತ್ಸವಕ್ಕೆ ಜನ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗು ತ್ತಿದೆ. ಹಿಂದಿನ ವರ್ಷಗಳಲ್ಲಿ ಹಲವಾರು ಫಿಲ್ಮ್ ಗಳು ಹೌಸ್‌ ಫ‌ುಲ್‌ ಪ್ರದರ್ಶನ ಕಂಡಿವೆ. ಈ ವರ್ಷವೂ ಪ್ರೇಕ್ಷಕ ರಿಗೆ ಅತ್ಯುತ್ತಮ ಸಿನಿಮಾಗಳನ್ನು ತೋರಿಸಬೇಕು ಎನ್ನುವ ಉದ್ದೇಶವನ್ನು ಸಮಿತಿ ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. -ಟಿ.ಕೆ.ಹರೀಶ್‌, ಕಾರ್ಯದರ್ಶಿ, ದಸರಾ ಚಲನಚಿತ್ರೋತ್ಸವ ಉಪ ಸಮಿತಿ

– ಆರ್‌.ವೀರೇಂದ್ರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next