ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳ ಪ್ರವಾಸಿಗರಿಂದ ತುಂಬಿ
ಗೌಜು-ಗದ್ದಲಗಳಿಂದ ಕೂಡಿದ್ದ ಮೈಸೂರು ನಗರ ಇದೀಗ ಸಹಜ ಸ್ಥಿತಿಗೆ ಮರಳಿದೆ. ಆದರೆ, ಇನ್ನೂ ಒಂದು ವಾರಗಳ
ಕಾಲ ಮೈಸೂರು ಅರಮನೆ ಸೇರಿ ಇಡೀ ನಗರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ.
ಈ ಮಧ್ಯೆ, ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯ 2 ತಂಡಗಳಲ್ಲಿ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಗಳ ವಿವಿಧ ಆನೆ ಶಿಬಿರಗಳಿಂದ ಕರೆತರಲಾಗಿದ್ದ 15 ಆನೆಗಳು ಭಾನುವಾರ ಸಂಪೂರ್ಣ ವಿಶ್ರಾಂತಿಯಲ್ಲಿದ್ದವು. ಆದರೆ, ಗಜಪಡೆ ಮಾವುತರು ಹಾಗೂ ಕಾವಾಡಿಗಳು ಈಗ ಜ್ವರದಿಂದ ಬಳಲುತ್ತಿದ್ದಾರೆ.
ತುರ್ತು ಭೂಸ್ಪರ್ಶ: ದಸರಾ ಅಂಗವಾಗಿ ನಡೆಯುತ್ತಿರುವ ಹೆಲಿರೈಡ್‌ನ ಹೆಲಿಕಾಪ್ಟರ್‌ಗೆ ಭಾನುವಾರ ಪಕ್ಷಿಯೊಂದು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ನ ವಿಂಡ್‌ಶೀಡ್(ಮುಂದಿನ ಗಾಜು) ಒಡೆದಿದೆ. ಸಮಯಪ್ರಜ್ಞೆ ಮೆರೆದ ಪೈಲಟ್ ಹೆಲಿಕಾಪ್ಟರ್‌ನ್ನು ತುರ್ತಾಗಿ ಭೂಸ್ಪರ್ಶ ಮಾಡಿ, ಹೆಚ್ಚಿನ ಅನಾಹುತ ತಪ್ಪಿಸಿದ. ಖಾಸಗಿ ವಿಮಾನಯಾನ ಸಂಸ್ಥೆ ಪವನ್ ಹನ್ಸ್‌ಗೆ ಸೇರಿದ ಹೆಲಿಕಾಪ್ಟರ್‌ಗಳು ದಸರೆಯ ಅಂಗವಾಗಿ ಲಲಿತಮಹಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಿರುವ ಹೆಲಿರೈಡ್‌ನಲ್ಲಿ ಹಾರಾಟ ನಡೆಸುತ್ತಿವೆ.