Advertisement

Mysore Dasara: ಜನ ಸಾಮಾನ್ಯರಿಗೆ ದುಬಾರಿಯಾದ ದಸರೆ

06:12 PM Sep 26, 2024 | Team Udayavani |

ಮೈಸೂರು: ಈ ಬಾರಿಯ ನಾಡಹಬ್ಬ ಮೈಸೂರು ದಸರಾ ದುಬಾರಿಯಾಗಿದ್ದು, ಸಾಮಾನ್ಯ ಜನರ ಪಾಲಿಗೆ ಮನರಂಜನ ಕಾರ್ಯಕ್ರಮಗಳು ಗಗನ ಕುಸುಮವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಅ.3ರಿಂದ 12ರವರೆಗೆ ನಡೆಯುವ ದಸರಾ ಮಹೋತ್ಸವಕ್ಕೆ ಸರ್ಕಾರ ಇದೇ ಮೊದಲ ಬಾರಿಗೆ ಬಾರಿ ಮೊತ್ತದ ಅನುದಾನ ನೀಡಿದ್ದರೂ, ವಿವಿಧ ದಸರಾ ಉಪ ಸಮಿತಿಗಳು ಆಯೋಜಿಸುತ್ತಿರುವ ಕಾರ್ಯಕ್ರಮಗಳು ಜನ ಸಾಮಾನ್ಯರಿಗೆ ದುಬಾರಿಯಾಗಿದೆ. ಇದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

ದುಬಾರಿಯಾದ ಅಂಬಾರಿ: ಪ್ರತಿವರ್ಷದಂತೆ ದಸರಾ ವೇಳೆ ದೀಪಾಲಂಕಾರ, ಬೆಳಕಿನ ನಗರಿ ಮೈಸೂರನ್ನು ಡಬಲ್‌ ಡೆಕ್ಕರ್‌ (ಅಂಬಾರಿ) ಬಸ್ಸಿನಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ, ಅಂಬಾರಿ ಬಸ್‌ನಲ್ಲಿ ಕುಳಿತು ನಗರದ ಬೆಳಿಕಿನ ಸೌಂದರ್ಯ ಸವಿಯಲು ಇದ್ದ ಟಿಕೆಟ್‌ ದರವನ್ನು 350 ರಿಂದ 500 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಅಂಬಾರಿ ಬಸ್‌ ದುಬಾರಿಯಾಗಿದೆ. ಈ ಹಿಂದೆ ಅಂಬಾರಿ ಬಸ್‌ ಏರಲು 350 ರೂ. ಟಿಕೆಟ್‌ ದರ ನಿಗದಿ ಮಾಡಲಾಗಿತ್ತು. ಟಿಕೆಟ್‌ ಪಡೆದ ವ್ಯಕ್ತಿ ಕಳಗೆ ಅಥವಾ ಚಾವಣಿ ಯಲ್ಲಿ ಕುಳಿತು ದೀಪಾಲಂಕಾರ ವೀಕ್ಷಿಸಬಹುದಿತ್ತು. ಆದರೆ, ಈ ಬಾರಿ ಚಾವಣಿಯಲ್ಲಿ ಕುಳಿತು ನಗರ ವೀಕ್ಷಿಸಲು 500 ರೂ., ಕೆಳಗೆ (ಲೋಯರ್‌ ಡೆಕ್‌) ಕುಳಿತುಕೊಳ್ಳಲು 250 ರೂ. ದರ ನಿಗದಿ ಮಾಡಲಾಗಿದೆ.

ಗಗನ ಕುಸುಮವಾದ ಯುವ ದಸರಾ: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ಯುವ ಸಮುದಾಯವನ್ನು ಸಂಭ್ರಮದ ಅಲೆಯಲ್ಲಿ ತೇಲಿಸುತ್ತಿದ್ದ ಯುವ ದಸರಾ ಕಾರ್ಯಕ್ರಮ ವೀಕ್ಷಣೆಗೂ ಟಿಕೆಟ್‌ ಮಾಡಲಾಗಿದೆ. ಯುವ ದಸರಾ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಟಿಕೆಟ್‌ ಪದ್ಧತಿ ಪರಿಚಯಿಸಲಾಗಿದೆ. ಈ ಹಿಂದೆ ವಿಐಪಿ ಪಾಸ್‌ಗಳನ್ನು ನೀಡುವ ಪದ್ಧತಿ ಇತ್ತು. ಆದರೆ, ಈ ಬಾರಿ ವೇದಿಕೆಯ ಮುಂಭಾಗದ ಗ್ಯಾಲರಿ 1 ಮತ್ತು ಗ್ಯಾಲರಿ 2ಕ್ಕೆ ಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ. ಗ್ಯಾಲರಿ 1ರಲ್ಲಿ ಕುಳಿತು ಯುವ ದಸರಾ ವೀಕ್ಷಿಸಲು 8 ಸಾವಿರ ರೂ., ಗ್ಯಾಲರಿ 2ರಲ್ಲಿ ಕುಳಿತು ವೀಕ್ಷಿಸಲು 5 ಸಾವಿರ ರೂ. ನಿಗದಿ ಪಡಿಸಲಾಗಿದೆ. ಈ ಪ್ರಮಾಣದ ಹಣ ನೀಡಿ ಮನೋರಂಜನೆ ಕಾರ್ಯಕ್ರಮ ವೀಕ್ಷಿಸಬೇಕೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಉಳ್ಳವರಿಗೆ ಸೀಮಿತವಾಯ್ತೆ ದಸರಾ: ರಾಜ್ಯ ಸರ್ಕಾರ ದಸರೆಗೆ 40 ಕೋಟಿ ರೂ. ಅನುದಾನವನ್ನು ಘೋಷಿಸಿದ್ದರೂ ದಸರಾ ಮಹೋತ್ಸವ ಸಮಿತಿ ಅಂಬಾರಿ ಬಸ್‌ ಟಿಕೆಟ್‌ ದರ ಹೆಚ್ಚಳ, ಯುವ ದಸರಾ ವೀಕ್ಷಣೆಗೆ ಟಿಕೆಟ್‌ಗೆ ದುಬಾರಿ ದರ ನಿಗದಿ ಪಡಿಸಿದೆ. ಇದರಿಂದ ಜನ ಸಮಾನ್ಯರು ದಸರೆ ಕಾರ್ಯಕ್ರಮಗಳಿಂದ ದೂರ ಉಳಿಯಲಿದ್ದು, ಉಳ್ಳವರಷ್ಟೇ ಕಾರ್ಯಕ್ರಮ ವೀಕ್ಷಿಸುವಂತಾಗಿದೆ. ಈ ನಡುವೆ ಅರಮನೆ ಅಂಗಳದಲ್ಲಿ ಹೆಚ್ಚುವರಿಯಾಗಿ 10 ಸಾವಿರ ಮಂದಿ ಕುಳಿತು ದಸರಾ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗು ತ್ತಿದೆ. ಇದರಿಂದಲೂ ಟಿಕೆಟ್‌ ಮೂಲಕ ಹಣ ವಸೂಲಿಗೆ ದಸರಾ ಮಹೋತ್ಸವ ಸಮಿತಿ ಇಳಿದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರಾಯೋಜಕತ್ವದ ಮೊರೆ ಹೋದ ಸಮಿತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ಬಾರಿಯ ದಸರಾ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು 40 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು. ದಸರೆ ಇತಿಹಾಸದಲ್ಲಿ ಈ ಪ್ರಮಾಣದ ಅನುದಾನ ಘೋಷಣೆ ಮಾಡಿದ್ದು ಇದೆ ಮೊದಲು. ಈ ಪ್ರಮಾಣದ ಅನುದಾನದಲ್ಲಿ ಅಚ್ಚುಕಟ್ಟಾಗಿ, ಅದ್ದೂರಿಯಾಗಿ ದಸರೆ ಆಚರಿಸಲು ಅವಕಾಶವಿದ್ದರೂ, ದಸರಾ ಮಹೋತ್ಸವ ಸಮಿತಿ ಖಾಸಗಿ ವಲಯದಿಂದ ಪ್ರಯೋಜಕತ್ವ ಪಡೆಯಲು ಹೆಣಗಾಡು ತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡೆ ಸಂಶಯಕ್ಕೆಎಡೆ ಮಾಡಿಕೊಟ್ಟಿದೆ.

Advertisement

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next