Advertisement
ತುಂತುರು ಮಳೆಯ ನಡುವೆಯೂ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮ ಪಂಚಾಯಿತಿಯ ವೀರನಹೊಸಹಳ್ಳಿ ಬಳಿಯಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಗೇಟ್ ಬಳಿ ವಿಶೇಷವಾಗಿ ಅಲಂಕೃತಗೊಂಡು ಸಾಲಾಗಿ ನಿಂತಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಉಮೇಶ್ ಕತ್ತಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ಚಾಲನೆ ನೀಡಿದರು. ಜಾನಪದ ಕಲಾ ತಂಡಗಳು, ಮುತ್ತೈದೆಯರು, ಹಾಡಿಯ ಜನರು ಈ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Related Articles
Advertisement
ಇದನ್ನೂ ಓದಿ:ಚೆಕ್ ಡ್ಯಾಂ ಗೆ ಬಿದ್ದು ಮಹಿಳೆ ನಿರುಪಾಲು : ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ
ಈ ಬಗ್ಗೆ ಮಾತನಾಡಿದ ಹಾಡಿ ಪುರೋಹಿತ ಪ್ರಹ್ಲಾದ್ ರಾವ್, ಕಳೆದ ಹಲವು ವರ್ಷಗಳಿಂದ ಗಜಪಯಣದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದೇನೆ. ಎಂದಿನಂತೆ ಈ ಬಾರಿಯೂ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಲಾಗಿದೆ. ನಾಡಿಗೆ, ದೇಶಕ್ಕೆ ಒಳಿತಾಗಲಿ ಎಂದು ಗಣಪನ ಪ್ರತಿರೂಪವಾದ ಆನೆ, ಚಾಮುಂಡೇಶ್ವರಿ ಹಾಗೂ ವನದೇವತೆಗೆ ಪೂಜೆ ಸಲ್ಲಿಸಲಾಗಿದೆ ಎಂದರು.
ಸಂಭ್ರಮಕ್ಕೆ ಮಳೆ ಅಡ್ಡಿ: ಗಜಪಯಣದ ಹಿನ್ನೆಲೆಯಲ್ಲಿ ವೀರನಹೊಸಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾವಿರಾರು ಜನರನ್ನು ಸೇರಿಸಿ ಆನೆಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಬೆಳಗ್ಗೆಯಿಂದಲೇ ಆರಂಭವಾದ ಮಳೆ ಸಂಭ್ರಮಕ್ಕೆ ಅಡ್ಡಿಯಾಯಿತು. ಮಳೆಯಿಂದಾಗಿ ಹೆಚ್ಚು ಜನರು ಭಾಗವಹಿಸಲಿಲ್ಲ. ಅಧಿಕಾರಿಗಳು ಕೊಡೆಗಳನ್ನು ಹಿಡಿದುಕೊಂಡೇ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಮಳೆಯ ನಡುವೆಯೇ ಡೊಳ್ಳು ಕುಣಿತ, ಸೋಮನ ಕುಣಿತ, ಚಂಡೆ, ವಿವಿಧ ಜಾನಪದ ಕಲಾತಂಡಗಳು, ತಾಳ ಮೇಳ, ವಾದ್ಯಗಳು ಗಜಪಯಣಕ್ಕೆ ಸಾಂಸ್ಕೃತಿಕ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಪಿ.ಮಂಜುನಾಥ್, ಎಂಎಲ್ಸಿ ಸಿ.ಎನ್.ಮಂಜೇಗೌಡ, ಮೇಯರ್ ಸುನಂದ ಪಾಲನೇತ್ರ, ನಿಗಮ ಮಂಡಳಿ ಅಧ್ಯಕ್ಷರಾದ ಶಿವಕುಮಾರ್, ಎಂ.ಶಿವಣ್ಣ, ಜಿಲ್ಲಾಧಿಕಾರಿ ಡಾ.ಬಗಾದ್ ಗೌತಮ್, ಎಸಿಎಫ್ ಗಳಾದ ಕರಿಕಾಳನ್, ಕಮಲಾ ಕರಿಕಾಳನ್, ಜಿ.ಪಂ ಸಿಇಒ ಪೂರ್ಣಿಮಾ.ಬಿ.ಆರ್ ಸೇರಿದಂತೆ ಹಲವರು ಇದ್ದರು.