Advertisement

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

01:05 AM Oct 06, 2022 | Team Udayavani |

ಎರಡು ವರ್ಷಗಳ ಕಾಲ “ಸರಳ ದಸರೆ’ಯ ಬಳಿಕ ಸಾಂಸ್ಕೃತಿಕ ನಗರಿಯು ಈ ಬಾರಿ ಅದ್ದೂರಿ ದಸರಾಕ್ಕೆ ಸಾಕ್ಷಿಯಾಯಿತು. 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿತು. ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಯನ್ನು ಕಂಡು ಭಕ್ತರು ಪುನೀತರಾದರು. ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ನೆರೆದಿದ್ದರು.

Advertisement

ಮೈಸೂರು: ವಿಜಯದಶಮಿಯ ದಿನವಾದ ಬುಧವಾರ ವೈಭವಯುತ ಜಂಬೂ ಸವಾರಿಯ ಮೆರವಣಿಗೆಯೊಂದಿಗೆ ವಿಶ್ವ ವಿಖ್ಯಾತ ಮೈಸೂರು ದಸರಾ ಬುಧವಾರ ಸಂಪನ್ನಗೊಂಡಿತು. ವಿದ್ಯುತ್‌ ದೀಪಾಲಂಕಾರದ ಹೊನ್ನ ಬೆಳಕಿನಲ್ಲಿ ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಅಭಿಮನ್ಯು ಬಲರಾಮ ದ್ವಾರದ ಮೂಲಕ ಅರಮನೆಯಿಂದೀಚೆಗೆ ಮುಂದಡಿಯಿಡುತ್ತಿದ್ದಂತೆಯೇ ಅಂಬಾರಿಯಲ್ಲಿದ್ದ ದೇವಿ ಚಾಮುಂಡೇಶ್ವರಿ ಕಂಡ ಜನಸ್ತೋಮ ಜೈಕಾರ ಕೂಗಿ, ಶಿಳ್ಳೆ ಚಪ್ಪಾಳೆ ತಟ್ಟಿ, ಕೈಮುಗಿದು ನಮಿಸುತ್ತಾ ಭಾವ ಪರವಶರಾದರು.

ನಗರದ ಅರಮನೆ ಆವರಣದಿಂದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇ ಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಹೊತ್ತು ತನ್ನ ಗಜ ಗಾಂಭೀರ್ಯದಿಂದ ಕುಮ್ಕಿ ಆನೆಗಳಾದ ಚೈತ್ರಾ ಮತ್ತು ಕಾವೇರಿಯೊಂದಿಗೆ ಕ್ಯಾಪ್ಟನ್‌ ಅಭಿಮನ್ಯು ಹೆಜ್ಜೆ ಹಾಕಿತು. ಅರ ಮನೆ ಆವರಣದಲ್ಲಿ ಚಿನ್ನದ ಅಂಬಾರಿಯಲ್ಲಿದ್ದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಜೆ 5.37 ಗಂಟೆಗೆ ಪುಷ್ಪಾರ್ಚನೆ ಸಲ್ಲಿಸಿದರು.

ಎರಡು ವರ್ಷಗಳ ಕಾಲ ಕೋವಿಡ್‌ ಕಾರಣದಿಂದ ಜಂಬೂ ಸವಾರಿ ಅರ ಮನೆ ಆವರಣಕ್ಕೆ ಸೀಮಿತವಾಗಿತ್ತು. ಈ ಬಾರಿ ಎಂದಿನಂತೆ ಅರಮನೆ ಆವರಣದಿಂದ ಬನ್ನಿಮಂಟಪಕ್ಕೆ ಸಾಗಿತು.

ಮುಂಜಾನೆ 6ರಿಂದಲೇ ಪೂಜೆ
ವಿಜಯದಶಮಿ ಅಂಗವಾಗಿ ಅರಮನೆಯೊಳಗೆ ಮುಂಜಾನೆ 6ರಿಂದ 11ರ ವರೆಗೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ಬುಧವಾರ ಮುಂಜಾನೆ ನಡೆದ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು, ಪಟ್ಟದ ಆನೆ, ಕುದುರೆ, ಒಂಟೆ, ಹಸುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ವಿವಿಧ ಪೂಜಾ ಕೈಂಕರ್ಯದಲ್ಲಿ ತೊಡಗಿದರು. ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್‌ ಕುಳಿತು ವಿಜಯಯಾತ್ರೆ ಕೈಗೊಂಡು ಅರಮನೆ ಮುಖ್ಯದ್ವಾರದಿಂದಅರಮನೆ ಆವರಣ ಭುವನೇಶ್ವರಿ ದೇಗುಲದ ವರೆಗೂ ಮೆರವಣಿಗೆ ನೆರವೇರಿಸಿದರು ಹಾಗೂ ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ ಅರಮನೆಗೆ ಮರಳಿ ಕಂಕಣ ವಿಸರ್ಜನೆ ಮೂಲಕ ಜಂಬೂ ಸವಾರಿಯ ಧಾರ್ಮಿಕ ಕಾರ್ಯ ಸಂಪನ್ನಗೊಂಡವು.

Advertisement

ಪುಷ್ಪಾರ್ಚನೆ ವಿಳಂಬ
ಚಿನ್ನದ ಅಂಬಾರಿಯಲ್ಲಿದ್ದ ತಾಯಿ ಚಾಮುಂಡೇಶ್ವರಿ ದೇವಿಗೆ ಸಂಜೆ 5.07ರಿಂದ 5.18ರ ವ ರೆಗೆ ಸಲ್ಲುವ ಶುಭ ಲಗ್ನ ದಲ್ಲಿ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಸಲ್ಲಿಸಬೇಕಿತ್ತು. ಆದರೆ ಪುಷ್ಪಾರ್ಚನೆ ಸಲ್ಲಿಸಿದಾಗ ಸಂಜೆ 5.37 ಗಂಟೆ ಆಗಿತ್ತು. ಅರಮನೆ ಬಲರಾಮ ದ್ವಾರದಲ್ಲಿ ಬೊಮ್ಮಾಯಿ ಅವರು ಪತ್ನಿಯೊಂದಿಗೆ ನಂದಿ ಧ್ವಜಕ್ಕೆ ಮಧ್ಯಾಹ್ನ 2.29ಕ್ಕೆ ಪೂಜೆ ಸಲ್ಲಿಸಿದರು. ಮುಹೂರ್ತಕ್ಕಿಂತ ಏಳು ನಿಮಿಷಗಳ ಮುನ್ನವೇ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು.

ಪ್ರಮುಖ ಆಕರ್ಷಣೆಗಳು
ಮೈಸೂರು ಜಿಲ್ಲೆ ವತಿಯಿಂದ ಸಿದ್ಧಪಡಿಸಲಾಗಿದ್ದ ಸ್ತಬ್ಧಚಿತ್ರದಲ್ಲಿ ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆಯನ್ನು ರಚಿಸಲಾಗಿತ್ತು. ಮೈಸೂರು ಪಾಕ್‌, ಮೈಸೂರು ಪೇಟಾ, ಮೈಸೂರು ರೇಷ್ಮೆ ಸೀರೆ, ಹಂಪಿಯ ಕಲ್ಲಿನ ರಥ, ಉಡುಪಿ ಜಿಲ್ಲೆಯ ಕೈಮಗ್ಗ ಸೀರೆ ನೇಯ್ಗೆ, ಯಕ್ಷಗಾನ ಚಿತ್ರಗಳು ಎಲ್ಲರನ್ನು ಮಂತ್ರಮುಗ್ಧಗೊಳಿಸಿದವು. ಮಂಡ್ಯ ಜಿಲ್ಲೆಯ ಭೂವರಾಹನಾಥಸ್ವಾಮಿ ವಿಗ್ರಹ ಹಾಗೂ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಸ್ತಬ್ಧಚಿತ್ರಗಳು ಭಕ್ತಿಭಾವ ಮೂಡಿಸಿದವು. ಮುಧೋಳದ ಶ್ವಾನ, ಇಳಕಲ್‌ ಸೀರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಪಿಲೇಶ್ವರ ದೇವಸ್ಥಾನ, ಬೀದರ್‌ ಜಿಲ್ಲೆಯ ನೂತನ ಅನುಭವ ಮಂಟಪದ ಸ್ತಬ್ಧಚಿತ್ರಗಳೂ ಗಮನ ಸೆಳೆದವು.

ಜಂಬೂಸವಾರಿ ವೀಕ್ಷಿಸಿದ ಜನಸಾಗರ
ಈ ಬಾರಿ ದಸರಾ ಅದ್ದೂರಿಯಾಗಿ ನಡೆದಿದ್ದು, ರಾಜ್ಯದ ಮೂಲೆ ಮೂಲೆಗಳು, ಹೊರ ರಾಜ್ಯಗಳೂ ಸೇರಿ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಮೈಸೂರಿಗೆ ಬಂದಿದ್ದರು. ಅರಮನೆಯಿಂದ ಬನ್ನಿಮಂಟಪದವರೆಗಿನ ಮಾರ್ಗದ ಇಕ್ಕೆಲಗಳಲ್ಲಿ ನಿಂತು ಅಂಬಾರಿಯನ್ನು ಕಣ್ತುಂಬಿಕೊಂಡರು.ಕೆಲವರಂತೂ ರಸ್ತೆ ಬದಿಯ ಕಟ್ಟಡಗಳು, ಮರಗಳನ್ನು ಏರಿ ಮೆರವಣಿಗೆ ವೀಕ್ಷಿಸಿದರು.

ಸಿಂಹಾಸನ ಸಿಂಹ ವಿಸರ್ಜನೆ
ಸಂಜೆ 7ಕ್ಕೆ ಖಾಸಗಿ ದರ್ಬಾರ್‌ ನಡೆದ ಬಳಿಕ ದರ್ಬಾರ್‌ ಹಾಲ್‌ನಲ್ಲಿ ಸಿಂಹಾಸನದಿಂದ ಸಿಂಹದ ತಲೆಯನ್ನು ವಿಸರ್ಜಿಸಲಾಯಿತು. ದೇವರ ಮನೆಯಲ್ಲಿ ಯದುವೀರ್‌ ಹಾಗೂ ವಾಣಿ ವಿಲಾಸ ದೇವರ ಅರಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್‌ ಕಂಕಣ ವಿಸರ್ಜಿಸಿದರು.

ಶೀಘ್ರವೇ ಮೈಸೂರು ಪ್ರವಾಸೋದ್ಯಮ ಸರ್ಕಿಟ್‌
ಸದ್ಯದಲ್ಲೇ ಮೈಸೂರು ಪ್ರವಾಸೋದ್ಯಮ ಸರ್ಕಿಟ್‌ ಕಾರ್ಯಾರಂಭವಾಗಲಿದೆ. ಈ ಟೂರಿಸಂ ಸರ್ಕಿಟ್‌ ಮೈಸೂರು, ಹಳೆಬೀಡು, ಬೇಲೂರು, ಸೋಮನಾಥಪುರ ಸಹಿತ ಹಲವು ಪ್ರಮುಖ ಸ್ಥಳಗಳನ್ನು ಒಳಗೊಂಡಿದೆ. ವೆಬ್‌ಸೈಟ್‌ನಲ್ಲಿ ಬುಕ್‌ ಮಾಡುವ ಸೌಲಭ್ಯವಿರಲಿದೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

 

Advertisement

Udayavani is now on Telegram. Click here to join our channel and stay updated with the latest news.

Next