Advertisement

ರತ್ನ ಖಚಿತ ಸಿಂಹಾಸನ, ಜೋಡಣೆ,

06:33 PM Oct 02, 2021 | Team Udayavani |

ಮೈಸೂರು: ದಸರಾ ಮಹೋತ್ಸವ ಹಿನ್ನೆಲೆ ಮೈಸೂರು ಅರಮನೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಶುಕ್ರವಾರ ಸಂಪ್ರದಾಯಬದ್ಧವಾಗಿ ನೆರವೇರಿದ್ದು, ಇದರ ಮೇಲೆ ಕುಳಿತು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ.
ಭಾದ್ರಪದಮಾಸ ಕೃಷ್ಣಪಕ್ಷ ದಶಮಿ ದಿನವಾದ ಶುಕ್ರವಾರ ಬೆಳಗ್ಗೆ 9.30ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ದರ್ಬಾರ್‌ ಹಾಲ್‌ ನಲ್ಲಿ ಚಿನ್ನದ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಣಾ ಕಾರ್ಯ ಜರುಗಿತು.
ಈ ಸಾಲಿನ ದಸರಾ ಮಹೋತ್ಸವ ಅ.7ರಿಂದ 15ರವರೆಗೆ ನಡೆಯಲಿದ್ದು, ಅರಮನೆಯಲ್ಲಿ 7ರಂದು ಖಾಸಗಿ ದರ್ಬಾರ್‌ ನಡೆಯಲಿದೆ. ಇದಕ್ಕಾಗಿ ಅರಮನೆ ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಅರಮನೆಯ ಸ್ಟ್ರಾಂಗ್‌ರೂಮ್‌ನಲ್ಲಿ
ಬಿಡಿಭಾಗಗಳಾಗಿ ವಿಂಗಡಿಸಿ ಸುರಕ್ಷಿತವಾಗಿ ಇಟ್ಟಿರುವ ಸಿಂಹಾಸನವನ್ನು ತಂದು ಜೋಡಿಸಲಾಯಿತು. ಈ ಹಿನ್ನೆಲೆ ಬೆಳಗ್ಗೆ 7.20ಕ್ಕೆ ರಾಜಪುರೋಹಿತರ ಸಮ್ಮುಖದಲ್ಲಿ ನವಗ್ರಹ, ಶಾಂತಿಹೋಮ ಸೇರಿ ಇನ್ನಿತರ ಪೂಜಾ ಕೈಂಕರ್ಯ ನಡೆಯಿತು.
ಈ ಸಲ ಸಿಂಹಾಸನ ಸಾರ್ವಜನಿಕರ ವೀಕ್ಷಣೆಗೆ ಅಲಭ್ಯ. ಪ್ರತಿ ವರ್ಷ ನವರಾತ್ರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಇದರ ದರ್ಶನ ದೊರೆಯುತ್ತಿತ್ತು. ಈ ಸಲ ಇದಕ್ಕೆ ಅವಕಾಶ ನೀಡಲಿಲ್ಲ. ಇದಕ್ಕೆ ಅಡ್ಡಲಾಗಿ ಪರದೆ ಕಟ್ಟಲಾಗಿದೆ. ಅರಮನೆಗೆ ಸಾರ್ವಜನಿಕರು ಮತ್ತು ಮಾಧ್ಯಮದವರಿಗೆ ಪ್ರವೇಶ ಇರಲಿಲ್ಲ. ವ್ಯಾಪಕ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.
ಈ ವೇಳೆ ಅರಮನೆ ಆಡಳಿತ ಮಂಡಳಿ ಅಧಿಕಾರಿಗಳು, ರಾಜವಂಶಸ್ಥರ ಪ್ರತಿನಿಧಿಗಳು ಮಾತ್ರ ಹಾಜರಿದ್ದರು.

Advertisement

ಮೈಸೂರು ದಸರಾ-2021ರ ವೆಬ್‌ಸೈಟ್‌ಗೆ ಚಾಲನೆ-

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಎಲ್ಲ ಕಾರ್ಯಕ್ರಮ ವರ್ಚುವಲ್‌ ವೇದಿಕೆಯಲ್ಲಿ ಪ್ರಸಾರವಾಗಲಿದ್ದು, ಸಾರ್ವಜನಿಕರು ತಮ್ಮ ಸ್ಥಳದಲ್ಲೇ ಆನ್‌ಲೈನ್‌ನಲ್ಲಿ ವೀಕ್ಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮನವಿ ಮಾಡಿದರು.
ಮೈಸೂರು ಅರಮನೆ ಆಡಳಿತ ಮಂಡಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ-2021ರ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದರು.
ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿಯೂ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ. ದಸರಾ ಕಾರ್ಯಕ್ರಮಗಳು ವರ್ಚುವಲ್‌ ಆಗಿ ಪ್ರಸಾರವಾಗಲಿದೆ. ವೆಬ್‌ಸೈಟ್‌, ಯೂಟ್ಯೂಬ್‌, ಫೇಸ್‌ಬುಕ್‌ನಲ್ಲಿ ಕಾರ್ಯಕ್ರಮಗಳು ನೇರಪ್ರಸಾರವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next