ಮೈಸೂರು: ತುಂಬು ಗರ್ಭಿಣಿಯಾದ ಹೆಂಡತಿ, ಇಬ್ಬರು ಮಕ್ಕಳೊಂದಿಗೆ ತಾಯಿಯನ್ನೂ ಕೊಲೆ ಮಾಡಿದ ಅಪರಾಧಿಗೆ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸರಗೂರು ತಾಲೂಕಿನ ಚಾಮೇಗೌಡನಹುಂಡಿ ಗ್ರಾಮದ ನಿವಾಸಿ ಮಣಿಕಂಠಸ್ವಾಮಿ ಅಲಿಯಾಸ್ ಕುಂಟ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಈತ 2014ರ ಮಾರ್ಚ್ನಲ್ಲಿ ಗಂಗೆ ಎಂಬುವವರನ್ನು ವಿವಾಹವಾಗಿದ್ದ. ದಂಪತಿಗೆ 4 ವರ್ಷದ ಸಾಮ್ರಾಟ್ ಮತ್ತು ಒಂದೂವರೆ ವರ್ಷದ ರೋಹಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದಳು. ಆಕೆಯ ಮೇಲೆ ಅನುಮಾನಪಟ್ಟು ಪದೇಪದೆ ಜಗಳವಾಡುತ್ತಿದ್ದ. ಆತನ ತಾಯಿ ಕೆಂಪಾಜಮ್ಮ ಸಮಾಧಾನಪಡಿಸಿದರೆ ಆಕೆಯೊಂದಿಗೂ ಜಗಳಾಡುತ್ತಿದ್ದ.
2021ರ ಎಪ್ರಿಲ್ 28ರಂದು ಮಣಿಕಂಠಸ್ವಾಮಿಯು ಹೆಂಡತಿಯ ಶೀಲ ಶಂಕಿಸಿ ಆಕೆಯೊಂದಿಗೆ ಮತ್ತು ತಾಯಿ ಜತೆ ಗಲಾಟೆ ಮಾಡಿದ್ದ. ರಾತ್ರಿ 12 ಗಂಟೆಯವರೆಗೆ ಟಿವಿ ನೋಡಿ ಮಲಗಿದ್ದ. ಬೆಳಗಿನ ಜಾವ 4ಕ್ಕೆ ಎಲ್ಲರೂ ಮಲಗಿದ್ದ ಸಮಯದಲ್ಲಿ ಎದ್ದು ತಾನು ನಡೆದಾಡಲು ಉಪಯೋಗಿಸುತ್ತಿದ್ದ ಕಬ್ಬಿಣದ ಊರುಗೋಲಿನಿಂದ ಹೆಂಡತಿ, ತಾಯಿ ಹಾಗೂ ತನ್ನ ನಾಲ್ಕು ವರ್ಷದ ಮಗ ಸಾಮ್ರಾಟ್ ಅವರಿಗೆ ತಲೆಗೆ ಬಲವಾಗಿ ಹೊಡೆದು ಸಾಯಿಸಿ, ಒಂದೂ ವರೆ ವರ್ಷದ ಮಗು ರೋಹಿತ್ನನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸರಗೂರು ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಅಪರಾಧಿ ಮಣಿಕಂಠ ಸ್ವಾಮಿಗೆ ಮರಣದಂಡನೆ ವಿಧಿಸಿ ಆದೇಶ ನೀಡಿ¨ªಾರೆ. ಸರಕಾ ರಿ ಅಭಿಯೋಜಕ ಬಿ.ಇ. ಯೋಗೇಶ್ವರ್ ವಾದ ಮಂಡಿಸಿದ್ದರು.