ಎಚ್.ಡಿ.ಕೋಟೆ: ನಿತ್ರಾಣಗೊಂಡ ಕೋವಿಡ್ ಸೋಂಕಿತ ರೋಗಿಯನ್ನು ಹಾಸಿಗೆ ಇಲ್ಲದ ಕಾರಣ ಚಿಕಿತ್ಸೆಯನ್ನೂ ನೀಡದೇ ಇಡೀ ರಾತ್ರಿ ಆಸ್ಪತ್ರೆಯ ಹೊರಗಡೆ ಇರಿಸಿದ ಅಮಾನವೀಯ ಘಟನೆ ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ಜರುಗಿದೆ.
ಕೋಟೆ ಪಟ್ಟಣದ ನಿವಾಸಿಯಾಗಿರುವ ವ್ಯಕ್ತಿ ಜಯಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ ಕಾನ್ಯನಿರ್ವಹಿಸುತ್ತಿದ್ದು, ಇವರು ಕಳೆದು ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳವಾರ ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ತಾಲೂಕು ಕೇಂದ್ರ ಸ್ಥಾನದ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿಕೊಳ್ಳಲಾಗಿತ್ತು.
ಆರೋಗ್ಯದಲ್ಲಿ ಏರುಪೇರು: ಮಂಗಳವಾರ ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಹೀಗಾಗಿ ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಬೇಕಿತ್ತು. ಈ ವಿಷಯವನ್ನು ಸೋಂಕಿತ ವ್ಯಕ್ತಿಯ ಕುಟುಂಬದ ಸದಸ್ಯರಿಗೂ ತಿಳಿಸಿದೇ ರಾತ್ರಿಯೇ ಸೋಂಕಿತ ವ್ಯಕ್ತಿಯನ್ನು ವೈದ್ಯರ ಸಲಹೆ ಮೇರೆಗೆ ಮೈಸೂರಿನ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರಯತ್ನಿಸಲಾಗಿದೆ.
ಗೋಗರೆದರೂ ಚಿಕಿತ್ಸೆ ಇಲ್ಲ: ಮೈಸೂರು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರಾತ್ರಿ 11.30ಕ್ಕೆ ಸೋಂಕಿತನನ್ನು ಸೇರಿಸಲು ಹೋದಾಗ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಕಾರಣ ನೀಡಿ ಇಡೀ ರಾತ್ರಿ ರೋಗಿಗೆ ಚಿಕಿತ್ಸೆಯನ್ನೂ ನೀಡದೇ ಆಸ್ಪತ್ರೆ ಹೊರಗೆ ಇರಿಸಲಾಗಿದೆ. ಈ ರೋಗಿಯು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಸ್ಥಿತಿ ಕಂಡ ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರು ರೋಗಿಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದ ಸದಸ್ಯರು ರಾತ್ರೋ ರಾತ್ರಿ ಆಸ್ಪತ್ರೆಗೆ ಧಾವಿಸಿದ್ದಾರೆ. ಇಡೀ ರಾತ್ರಿ ಕುಟುಂಬದವರು ಸಾಕಷ್ಟು ಗೋಗರೆದರೂ ಚಿಕಿತ್ಸೆ ಸಿಗಲೇ ಇಲ್ಲ.
ಶಿಫಾರಸು: ಮರುದಿನ ಅಂದರೆ ಬುಧವಾರ ಬೆಳಗ್ಗೆ 8 ಗಂಟೆ ತನಕ ಕುಟುಂಬದ ಸದಸ್ಯರು ಎಲ್ಲಾ ರೀತಿ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕಡೆಗೆ ಮಾಧ್ಯಮದ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಸಹಕಾರದಿಂದ ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ಶಿಫಾರಸು ಮಾಡಿಸಿದಾಗಷ್ಟೇ ಸೋಂಕಿತ ವ್ಯಕ್ತಿಯನ್ನು ದಾಖಲಿಸಿಕೊಳ್ಳಲಾಯಿತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ರೋಗಿ ನಿತ್ರಾಣರಾಗಿದ್ದರೂ ಕುಟುಂಬದವರಿಗೆ ವಿಷಯ ತಿಳಿಸಿಲ್ಲ
ಎಚ್.ಡಿ.ಕೋಟೆ ತಾಲೂಕು ಕೇಂದ್ರದ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿದ್ದ ಸೋಂಕಿತ ವ್ಯಕ್ತಿಗೆ ಆರೋಗ್ಯದಲ್ಲಿ ಏರುಪೇರಾದರೂ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆಯನ್ನು ನೀಡಿಲ್ಲ. ಇಡೀ ರಾತ್ರಿ ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯ ಹೊರಗಡೆ ಮಲಗಿಸಲಾಗಿದೆ. ಅಲ್ಲದೇ ಈ ವಿಷಯವನ್ನು ರೋಗಿಯ ಕುಟುಂಬದ ಸದಸ್ಯರಿಗೂ ತಿಳಿಸಿಲ್ಲ. ರೋಗಿಯನ್ನು ಸ್ಥಳಾಂತರಿಸಿದಾಗ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದೆ ಅವರನ್ನು ಏಕಾಂಗಿಯಾಗಿ ಆಸ್ಪತ್ರೆಯ ಹೊರಗೆ ಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ರೋಗಿ ಚಿಂತಾಜನಕ ಸ್ಥಿತಿ ತಲುಪಿದ್ದರೆ ಏನು ಮಾಡಬೇಕಿತ್ತು? ಎಂದು ಪೋಷಕರು ಹಾಗೂ ನಾಗರಿಕರು ಪ್ರಶ್ನಿಸಿದ್ದಾರೆ.
– ಎಚ್.ಬಿ. ಬಸವರಾಜು