ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಚಾಮುಂಡಿ ಬೆಟ್ಟದ ಮೇಲೆ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಇನ್ನು ಮುಂದೆ ಅವಕಾಶ ನೀಡುವುದಿಲ್ಲ.ಬೆಟ್ಟದ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಚಿಂತನೆಯಿದೆ. ನಾಲ್ಕೈದು ಎಕರೆ ಸರ್ಕಾರಿ ಜಾಗ ಗುರ್ತಿಸಿ, ಬೆಟ್ಟದ ಮೇಲಿನ ನಿವಾಸಿಗಳು ಅಲ್ಲಿ ವಾಸಿಸಲು ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ರೋಪ್ ವೇ ಯೋಜನೆ ಕೈ ಬಿಟ್ಟ ಜಿಲ್ಲಾಡಳಿತ
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆಗೆ ಜನರಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ನಡೆದ ಸಭೆ ಬಳಿಕ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದು, ಚಾಮುಂಡಿ ಬೆಟ್ಟ ಪ್ರವಾಸಿ ಸ್ಥಳವಾಗುವುದಕ್ಕಿಂತ, ಒಂದು ಪವಿತ್ರ ಧಾರ್ಮಿಕ ಸ್ಥಳವಾಗಬೇಕು. ಪ್ರವಾಸಿಗರು ಬೆಟ್ಟಕ್ಕೆ ಧಾರ್ಮಿಕ ಭಾವನೆಗಳಿಂದ ಬರುತ್ತಾರೆ. ಈ ಸ್ಥಳವನ್ನೂ ಮತ್ತೊಂದು ಪ್ರವಾಸಿ ಸ್ಥಳವನ್ನಾಗಿ ನೋಡುವುದು ಬೇಡ ಎನ್ನುವುದು ಸರ್ವರ ಅಭಿಪ್ರಾಯವಾಗಿದೆ. ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ರೋಪ್ ವೇ ಅಳವಡಿಕೆ ಕೈ ಬಿಟ್ಟಿದ್ದೇವೆ.ಸರ್ಕಾರಕ್ಕೆ ಈ ಬಗ್ಗೆ ಜಿಲ್ಲಾಡಳಿತ ಪತ್ರದ ಮೂಲಕ ವಿವರಣೆ ನೀಡುತ್ತದೆ ಎಂದರು.
ಬೆಟ್ಟಕ್ಕೆ ಹೋಗಲು ರಸ್ತೆ ಮಾರ್ಗವಿದೆ, ಮೆಟ್ಟಿಲುಗಳಿವೆ ಇಷ್ಟೇ ಸಾಕು, ರೋಪ್ ವೇ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಹೀಗಾಗಿ ಉದ್ದೇಶಿತ ಯೋಜನೆಯನ್ನು ಕೈಬಿಟ್ಟಿದ್ದೇವೆ ಎಂದು ಹೇಳಿಕೆ ನೀಡಿದರು.