Advertisement

Mysore; ಈ ಬಾರಿ ಮತದಾರರು ಕೈ ಹಿಡಿಯದೇ ಹೋದರೆ ನಾನು ಸತ್ತಂಗೆ: ಎಂ.ಲಕ್ಷ್ಮಣ್

12:52 PM Mar 22, 2024 | Team Udayavani |

ಮೈಸೂರು: ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡಿ. ಈ ಬಾರಿ ಮತದಾರರು ನನ್ನ ಕೈ ಹಿಡಿಯದೇ ಹೋದರೆ ನಾನು ಸತ್ತಂಗೆ ಎಂದು ಮೈಸೂರು – ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಭಾವನಾತ್ಮಕವಾಗಿ ಹೇಳಿದರು.

Advertisement

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನನ್ನ ಹೆಸರಿನ ಮುಂದೆ ರಾಜ ಒಡೆಯರ್ ಏನು ಇಲ್ಲಾ. ನಾನೊಬ್ಬ ಒಕ್ಕಲಿಗ ಸಮುದಾಯಕ್ಕೆ ಸೇರಿದವನು. ಕೆಲವರು ಲಕ್ಷ್ಮಣ್ ಗೌಡ ಎಂದು ಬದಲಾವಣೆ ಮಾಡಿಕೊಳ್ಳಿ ಎಂದರು. ಚುನಾವಣೆಗೋಸ್ಕರ ಹೆಸರು ಬದಲಾವಣೆ ಮಾಡುವುದು ಸರಿಯಲ್ಲ. ನಮ್ಮ ತಂದೆ ತಾಯಿ ಇಟ್ಟಿರುವ ಹೆಸರು ಎಂ ಲಕ್ಷ್ಮಣ್. ದಿನದ 24 ಗಂಟೆ ಕೆಲಸ ಮಾಡುತ್ತೇನೆ. ಮೈಸೂರು ಕೊಡಗು ಕ್ಷೇತ್ರ ಸೇರಿದಂತೆ 22 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು.

ಪ್ರತಾಪ್ ಸಿಂಹ ಹಿಟ್‌ ವಿಕೆಟ್ ಆದರು ಎಂದು ವ್ಯಂಗ್ಯವಾಡಿದ ಅವರು, ಪ್ರತಾಪ್ ಸಿಂಹ 10 ವರ್ಷ ಸಂಸದರಾಗಿದ್ದರು. ಅವರಿಗೆ ಟಿಕೆಟ್ ಸಿಗುತ್ತದೆಂದು ನಾನೂ ಅಂದುಕೊಂಡಿದ್ದೆ. ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆ ಮಾಡಬೇಕೆಂದು ಪಟ್ಟು ಹಿಡಿದು ಟಿಕೆಟ್ ತೆಗೆದುಕೊಂಡು ಬಂದೆ. ಆದರೆ ಪ್ರತಾಪ್ ಸಿಂಹ ಅವರಿಗೆ ಅವರೇ ಔಟ್ ಆಗಿಬಿಟ್ರು. ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿದ್ದು ಯಾಕೆ? ಕಾರಣ ಏನು ಅಂತ ಬಿಜೆಪಿಯವರು ಹೇಳಬೇಕು. ಪ್ರತಾಪ್ ಸಿಂಹ ವಿರುದ್ಧ ಆಡಿಯೋ, ವಿಡಿಯೋ ಇತ್ತೆ? ಏನಾದರೂ ದಾಖಲೆಗಳಿದ್ದವೇ ಅಥವಾ ವರಿಷ್ಠರು ಕರೆದು ಹೇಳಿದ್ದರೇ? ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಲು ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ ಎಂದರು.

ಈಗ ರಾಜಮನೆತನದ ಯದುವೀರ್ ಮತ್ತು ನನ್ನ ನಡುವೆ ಸ್ಪರ್ಧೆ ಏರ್ಪಟ್ಟಿದೆ. ರಾಜ ಮನೆತನದ ಬಗ್ಗೆ ನಮಗೆ ಅಪಾರ ಗೌರವವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತಂದವರು. ಮೀಸಲಾತಿ ವಿರುದ್ಧವಿರುವ ಬಿಜೆಪಿ ಪಕ್ಷದಿಂದ ಯದುವೀರ್ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದರೆ ನಾವು ಟಿಕೆಟ್ ಕೊಡಿಸುತ್ತಿದ್ದೆವು. ಯದುವೀರ್ ಮೇಲೆ ಒತ್ತಡ ಹಾಕಿ ಚುನಾವಣೆಗೆ ಕರೆ ತಂದಿದ್ದು ಯಾರೆಂದು ಪ್ರತಾಪ್ ಸಿಂಹ ತಿಳಿಸಲಿ ಎಂದರು.

ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದರೆ ನಮ್ಮ ಗೆಲುವಿಗೆ ಪೂರಕವಾದ ವಾತಾವರಣವಿದೆ. ಪ್ರತಾಪ್ ಸಿಂಹ ನಮ್ಮ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಮೈಸೂರು ನಗರಕ್ಕೆ ಸಿದ್ದರಾಮಯ್ಯ ಕೊಟ್ಟ ಕೊಡುಗೆಗಳು ನಮ್ಮ ಕಣ್ಣ ಮುಂದಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎಂಟು ತಿಂಗಳಾಗಿದೆ. 1500 ಕೋಟಿ ಅನುದಾನ ಕೊಟ್ಟಿದ್ದಾರೆ. ಮೈಸೂರು ಕೊಡಗು ಕ್ಷೇತ್ರದ ಜನತೆಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಿದ್ದರಾಮಯ್ಯನವರಿಗೆ ಅವಮಾನ ಮಾಡಬೇಡಿ. ಇಷ್ಟೆಲ್ಲಾ ಅಭಿವೃದ್ಧಿ ಮಾಡಿದ್ದರೂ ಭಾವನಾತ್ಮಕ ವಿಚಾರದಿಂದ ನಮಗೆ ಸೋಲಾಗುತ್ತಿದೆ ಎಂದಿದ್ದಾರೆ.  ಏರ್ ಪೋರ್ಟ್ ವಿಸ್ತರಣೆ ಬಗ್ಗೆ ಸುಮ್ಮನೆ ಹೇಳುತ್ತಿದ್ದಾರೆ. ಎಷ್ಟು ವಿಮಾನಗಳು ಓಡಾಟ ಮಾಡುತ್ತಿವೆ ಎಂದು ನೀವೇ ನೋಡಿ ಎಂದರು.

Advertisement

1977 ರ ನಂತರ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಈ ಬಾರಿ ಟಿಕೆಟ್ ಸಿಕ್ಕಿದೆ. ಸಿದ್ದರಾಮಯ್ಯರನ್ನ ಒಕ್ಕಲಿಗರ ವಿರೋಧ ಎನ್ನುವರಿಗೆ ಇದು ತಕ್ಕ ಉತ್ತರ. ನನ್ನ ಮತ್ತು ವಿಜಯ್ ಕುಮಾರ್ ಹೆಸರು ಹೈಕಮಾಂಡ್ ಗೆ ತಲುಪಿತ್ತು. ಇಬ್ಬರಲ್ಲಿ ನನಗೆ ಅವಕಾಶ ಸಿಕ್ಕಿದೆ. ನಾನು ಒಬ್ಬ ಬಡ ರೈತ ಕುಟುಂಬದಿಂದ ಬಂದವನು. ನನಗೆ ಯಾವುದೇ ರಾಜಕೀಯ ಹಿನ್ನಲೆ ಇಲ್ಲಾ. ಕೆಪಿಸಿಸಿ ವಕ್ತಾರನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ನನ್ನದು ಅಳಿಲು ಸೇವೆಯಿದೆ. ಮೈಸೂರು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಒಕ್ಕಲಿಗ ಸಮುದಾಯದ ಮತ ಹೆಚ್ಚಿವೆ. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡಿದ್ದೇನೆ ಎಂದು ಎಂ.ಲಕ್ಷ್ಮಣ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next