ಮೈಸೂರು: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2ಕ್ಕೆ ಇಳಿಕೆಗಿರುವುದು ಹಾಗೂ ಕಳೆದ 15 ದಿನಗಳಿಂದ ಯಾವುದೇ ಹೊಸ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ನಗರದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ, ವಹಿವಾಟಿಗೆ ಅನುಮತಿ ನೀಡಿದ್ದು, ವ್ಯಾಪಾರ, ವಹಿವಾಟು ಗರಿಗೆದರಿಸಿದೆ. ಮೇ 4ರಿಂದಲೇ ನಗರದ ಪ್ರಮುಖ 91 ರಸ್ತೆಗಳನ್ನು ಹೊರತುಪಡಿಸಿ ಉಳಿದ ಕಡೆ ವ್ಯಾಪಾರ ವಹಿವಾಟಿಗೆ ಅನು ಮತಿ ನೀಡಲಾಗಿತ್ತು.
ಆದರೆ, ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಅನುಮತಿ ಇರಲಿಲ್ಲ. ಗುರವಾರದಿಂದ ಎಲ್ಲಾ ವ್ಯಾಪಾರ, ವಾಣಿಜ್ಯ ವಹಿವಾಟಿಗೆ ಅನುಮತಿ ನೀಡಿದ ಹಿನ್ನೆಲೆ ನಗರದ ದೇವರಾಜ ಅರಸು ರಸ್ತೆ, ಸಯ್ನಾಜಿರಾವ್ ರಸ್ತೆ, ಅಶೋಕರಸ್ತೆ, ತ್ಯಾಗರಾಜ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟುಗಳು ಬಹುತೇಕ ತೆರೆದಿದ್ದವು. ಇದರಿಂದಾಗಿ ಮೈಸೂರು ಸಹಜ ಸ್ಥಿತಿಗೆ ಮರಳಿದಂತೆ ಕಂಡುಬಂತು.
ವ್ಯಾಪಾರಿಗಳಿಗೆ ಸಂಭ್ರಮ: ಮಾಲ್, ಸಿನಿಮಾ ಥಿಯೇಟರ್, ಸಲ್ಯೂನ್, ದೇವಸ್ಥಾನ ಹೊರತುಪಡಿಸಿ ಉಳಿದಂತೆ ಎಲ್ಲಾ ಮಾದರಿಯ ಅಂಗಡಿಗೆ ಅವಕಾಶ ಕಲ್ಪಿಸಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಸಂಭ್ರಮದಿಂದ ತಮ್ಮ ಅಂಗಡಿ ನೌಕರರೊಡನೆ ಅಂಗಡಿ ಸ್ವತ್ಛಗೊಳಿಸಿ, ಪೂಜೆ ಸಲ್ಲಿಸಿ, ಅಂಗಡಿಯ ಎದುರು ರಂಗೋಲೆ ಹಾಕಿ ವ್ಯಾಪಾರ ಆರಂಭಿಸಿದರು.
ಸುಮಾರು 50 ದಿನಗಳಿಂದ ಲಾಕ್‌ಡೌನ್‌ನಲ್ಲಿ ಸಿಲುಕಿ ಬಾಗಿಲು ತೆರೆಯಲಾರದೆ ಸಂಕಷ್ಟಕ್ಕೆ ಸಿಲುಕಿದ್ದರು. ವ್ಯಾಪಾರ, ವಹಿವಾಟು ಇಲ್ಲದೆ ಸಾವಿರಾರು ಮಂದಿ ಉದ್ಯೋ ಗವಿಲ್ಲದೆ ಮನೆಯಲ್ಲಿದ್ದರು. ಬಿಕೋ ಎನ್ನುತ್ತಿದ್ದ ವಿವಿಧ ರಸ್ತೆಗಳಲ್ಲಿ ಜನದಟ್ಟಣೆ ಕಂಡುಬಂತು. ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಾಕ್ಸ್ ನಿರ್ಮಿಸಲಾಗಿದ್ದು, ಅಂಗಡಿ ಒಳಗೆ ಬರುವವರಿಗೆ ಸ್ಯಾನಿಟೈಸರ್ ನೀಡಿದ ಬಳಿಕ ಒಳಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ. ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಬೈಕ್, ಕಾರುಗಳದ್ದೇ ಕಾರಾಬಾರಾಗಿತ್ತು. ಪಾರ್ಕಿಂಗ್ ಸ್ಥಳಗಳು ತುಂಬಿದ್ದವು. ಕಳೆದೆರಡು ತಿಂಗಳಿಂದ ಬಟ್ಟೆ, ಮೊಬೈಲ್, ಚಿನ್ನ ಮತ್ತಿತರ ವಸ್ತು ಖರೀದಿಸಲು ಮುಗಿಬಿದ್ದರು.
ರಿಪೇರಿಗೆ ಮುಗಿಬಿದ್ದ ಜನ: ಕಳೆದ 50 ದಿನಗಳಿಂದ ಲಾಕ್ ಡೌನ್‌ನಿಂದ ಮನೆಯಲ್ಲೆ ಇದ್ದ ಜನತೆ, ಮಿಕ್ಸಿ, ಬೈಕ್, ಕಾರು, ಮೊಬೈಲ್ ಇತರೆ ವಸ್ತುಗಳನ್ನು ರಿಪೇರಿ ಮಾಡಿ ಸಲು ಮೆಕ್ಯಾನಿಕ್ ಶಾಪ್‌ಗ್ಳ ಮುಂದೆ ನಿಂತಿದ್ದರು.
ನಿರ್ಬಂಧ ತೆರವು : ವಾಹನಗಳ ಸಂಚಾರ ನಿರ್ಬಂಧಕ್ಕೆ ಅಳ ವಡಿಸಲಾಗಿದ್ದ ಬ್ಯಾರಿಕೇಡ್ ತೆರವುಗೊಳಿಸಲಾಗಿದ್ದು, ನಗರದ ಎಲ್ಲೆಡೆ ವಾಹನ ಸಂಚಾರ ಎಂದಿನಂತೆಯೇ ಇತ್ತು. ಆಟೋ, ಟ್ಯಾಕ್ಸಿಗಳು ರಸ್ತೆಗೆ ಇಳಿಯದಂತೆ ನಿರ್ಬಂಧವಿದ್ದರೂ ಹಲವು ಕಡೆಗಳಲ್ಲಿ ಆಟೋಗಳು ಸಂಚರಿಸುತ್ತಿದ್ದವು. ಆಟೋ ನಿಲ್ದಾಣ ಗಳಲ್ಲಿ ಅಲ್ಲೊಂದು, ಇಲ್ಲೊಂದು ಆಟಗಳು ನಿಂತಿದ್ದವು. ನಗರ ದಲ್ಲಿ ಸಾರಿಗೆ ಸೌಲಭ್ಯ ಇಲ್ಲ ಎಂಬುದನ್ನು ಹೊರತುಪಡಿಸಿದರೆ, ಉಳಿದಂತೆ ಯಾವುದೇ ನಿರ್ಬಂಧ ಇರಲಿಲ್ಲ. ಬೆಳಗ್ಗೆ 7 ಗಂಟೆ ಯಿಂದ ಸಂಜೆ 7 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿರು ವುದರಿಂದ ಸಾರ್ವಜನಿಕರು ಯಾವುದೇ ಅಡ್ಡಿ ಆತಂಕವಿಲ್ಲದೆ ಓಡಾಡಿದರು.