Advertisement

ಮೈಸೂರು ಅಸೋಸಿಯೇಶನ್‌ನಲ್ಲಿ ಬಂಗಾರ ಹಬ್ಬದ ದತ್ತಿ ಉಪನ್ಯಾಸ

02:24 PM Feb 08, 2017 | |

ಮುಂಬಯಿ: ಮೌಲ್ಯಗಳು ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಗಾಂಧೀಜಿಯ ವಿಚಾರಧಾರೆಗಳು ಹೆಚ್ಚು ಪ್ರಸ್ತುತವಾಗಿವೆ. ಗಾಂಧೀಜಿಯವರ ಪ್ರಕಾರ ನಾವು ಮೊದಲು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಚಿಂತನೆಯಲ್ಲಿ ಕೊಡುಕೊಳ್ಳುವಿಕೆ ಇರಬೇಕು. ಹೊಸ ಹೊಸ ಚಿಂತನೆಗಳನ್ನು ಸ್ವೀಕರಿಸಬೇಕು. ಆದರೆ ಅದರಲ್ಲಿಯೇ ಲೀನವಾಗಿ ಬಿಡಬಾರದು. ಗಾಂಧೀಜಿಯವರು ವೈಯಕ್ತಿಕವಾಗಿ ಆಚರಿಸಿಕೊಂಡು ಬಂದಂತಹ ಬ್ರಹ್ಮಚರ್ಯ, ಮದ್ಯನಿಷೇಧ ಇತ್ಯಾದಿ ಕೆಲವೊಂದು ಧೋರಣೆಗಳನ್ನು ಸಾಮೂಹಿಕವಾಗಿ ಸಮಾಜದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಅವುಗಳು ಇಂದಿಗೂ ಅಪ್ರಸ್ತುತವಾಗಿವೆ. ಇದನ್ನು ಹೊರತುಪಡಿಸಿದರೆ ಗಾಂಧೀಜಿಯ ಉಳಿದೆಲ್ಲ ವಿಚಾರಗಳು ಉನ್ನತಮಟ್ಟದ್ದಾಗಿವೆ. ಅವರ ವಿಚಾರ ಧಾರೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾದವುಗಳು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಸ್ಟೀಸ್‌ ಬಿ. ಎನ್‌. ಶ್ರೀಕೃಷ್ಣ ಅವರು  ನುಡಿದರು.

Advertisement

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್‌ ಮುಂಬಯಿ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ನಡೆದ ಮೈಸೂರು ಅಸೋಸಿಯೇಶನ್‌ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ,  ಗಾಂಧೀಜಿ¿ ವ್ಯಕ್ತಿತ್ವ ಬಹಳ ದೊಡ್ಡದು. ಅಹಿಂಸೆ ಅನ್ನೋದು ನಮ್ಮ ವೇದ ಉಪನಿಷತ್‌ನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂತಹ ಅಹಿಂಸೆಯನ್ನು ಗಾಂಧೀಜಿಯವರು ತಮ್ಮ ಜನಜೀವನದ ಧ್ಯೇಯವಾಗಿಟ್ಟುಕೊಂಡರು. ಅವರ ಚಿಂತನೆಯಲ್ಲಿ ಸಾಮಾಜಿಕ ವಿಚಾರದಲ್ಲಿ ಮನುಷ್ಯನ ಆಚಾರ ವಿಚಾರದಲ್ಲಿ ಪರಸ್ಪರ ನಿರ್ಭರತೆಯಿದೆ. ಅವರ ಅಪರಿಗ್ರಹ ಚಿಂತನೆ ಇವತ್ತಿನ ಸಂದರ್ಭದಲ್ಲಿ ಅತಿ ಅಗತ್ಯ. ಅಂದು ಗಾಂಧೀಜಿಯವರು ಹೇಳಿದ ಮಾತುಗಳು ಇವತ್ತಿಗೂ ಪ್ರಸ್ತುತವಾಗಿದ್ದು, ಅವರ ಎಲ್ಲಾ ವಿಚಾರಧಾರೆಗಳನ್ನು ಇಂದಿನ ಯುವ ಪೀಳಿಗೆ ವಿಚಾರಮಂಥನ ಮಾಡಬೇಕು ಎಂದರು.

ಕಾರ್ಯಕ್ರಮವು ಶೈಲಜಾ ಮಧುಸೂದನ್‌ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮೈಸೂರು ಅಸೋಸಿಯೇಶನ್‌ನ ಟ್ರಸ್ಟಿ ಮಂಜುನಾಥಯ್ಯ ಅವರು ಅತಿಥಿಗಳನ್ನು ಸ್ವಾಗತಿಸಿದರು. ವಿಭಾಗದ ವಿದ್ಯಾರ್ಥಿ ಜಯ ಸಾಲ್ಯಾನ್‌ ಅವರು ರಚಿಸಿರುವ ಶ್ರೀಕೃಷ್ಣ ಅವರ   ವರ್ಣಚಿತ್ರವನ್ನು ಶ್ರೀಕೃಷ್ಣ ಅವರಿಗೆ ಪ್ರಧಾನಿಸಿದರು.

ವಿಭಾಗದ ಮುಖ್ಯಸ್ಥ  ಡಾ| ಜಿ. ಎನ್‌. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಈ ದತ್ತಿ ಉಪನ್ಯಾಸ ಮಾಲಿಕೆ ಕಳೆದ ಮೂವತ್ತನಾಲ್ಕು ವರ್ಷದಿಂದ ತಪ್ಪದೆ ನಡೆದುಕೊಂಡು ಬರುತ್ತಿದೆ. ಸಮಾಜಮುಖೀಯಾಗಿರುವ ಮೈಸೂರು ಅಸೋಸಿಯೇಶನ್‌ ಕನ್ನಡ ವಿಭಾಗದ ಅಕಾಡೆಮಿಕ್‌ ಪಾರ್ಟ್‌
ನರ್‌ ಎಂದುಕೊಂಡಿದ್ದೇನೆ. ವಿಶ್ವವಿದ್ಯಾಲಯ ಇಂದು ದ್ವೀಪವಾಗಿ ಉಳಿದಿಲ್ಲ. ಮುಂಬಯಿಯ ಅನೇಕ ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.

ಮೈಸೂರು ಅಸೋಸಿಯೇಶನ್‌ ಅಧ್ಯಕ್ಷೆ  ಕೆ. ಕಮಲಾ ಅವರು ಮಾತನಾಡಿ,  ನಾವು ಮಾಡುವ ಕಾರ್ಯ ನಮ್ಮ ಸುತ್ತಮುತ್ತಲಿರುವ ಎಲ್ಲರಿಗೂ ಒಳ್ಳೆದಾಗುವಂತಿರಬೇಕು. ಗಾಂಧೀಜಿಯವರ ತತ್ವಗಳನ್ನು ಇವತ್ತಿನ ಪೀಳಿಗೆಗೆ ಯಾವ ರೀತಿಯಲ್ಲಿ ಮುಟ್ಟಿಸಬೇಕು ಎನ್ನುವುದರ ಬಗ್ಗೆ ಚಿಂತಿಸಬೇಕು ಎಂದರು. ಕಾರ್ಯಕ್ರಮವನ್ನು ನೇಸರು ಸಂಪಾದಕಿ ಡಾ| ಜ್ಯೋತಿ ಸತೀಶ್‌ ಅವರು ನಿರೂಪಿಸಿದರು. ಕಾರ್ಯದರ್ಶಿ ಡಾ| ಜಿ. ಎಸ್‌. ಶಂಕರಲಿಂಗ ಅವರು ವಂದಿಸಿದರು.   ಸಾಹಿತ್ಯಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

ಎರಡನೆ ದಿನದ ಕಾರ್ಯಕ್ರಮದಲ್ಲಿ ಬಿ. ಎನ್‌. ಶ್ರೀಕೃಷ್ಣ ಅವರು ‘ಉಪನಿಷತ್ತಿನಲ್ಲಿ ಮಾನವೀಯತೆ’ ವಿಷಯದ ಮೇಲೆ ಮಾತನಾಡಿ, ದಾನಮಾಡುವಾಗ ನಾವು ಯಾವುದನ್ನು ದಾನ ಮಾಡುತ್ತೇವೋ ಅದು ದಾನ ಮಾಡಲಿಕ್ಕೆ ಯೋಗ್ಯವಾಗಿರಬೇಕು. ದಯೆ ಧರ್ಮದ ಮೂಲವಾಗಿರಬೇಕು. ತನು ಮನ ಶುದ್ಧವಾಗಿರಬೇಕು. ನಿನ್ನ ಕೆಲಸ ಮಾಡು, ಪ್ರತಿಫಲದ ಅಪೇಕ್ಷೆ ಇಟ್ಟುಕೊಳ್ಳಬೇಡ. ನಿನ್ನ ಸ್ವಾಧ್ಯಾಯ ನಿನ್ನ ಆಜೀವ ಪರ್ಯಂತ ನಡೆಯಬೇಕು. ‘ಅತಿಥಿ ದೇವೋಭವ’ ಎಂಬ ವ್ರತವನ್ನು ಪರಿಪಾಲಿಸಬೇಕು. ಅನ್ನವನ್ನು ಹಾಳುಮಾಡಬಾರದು. ಅಗತ್ಯವಿದ್ದವರಿಗೆ ಅದನ್ನು ದಾನಮಾಡಿ. ಎಲ್ಲ ಇಂದ್ರಿಯಗಳಿಂತ ಪ್ರಾಣ ಶ್ರೇಷ್ಠವಾದುದು. ಸತ್ಯಮಾರ್ಗದ ಮೂಲಕ ಹೆಜ್ಜೆ ಇಡಬೇಕು. ಹೀಗೆ  ಉಪನಿಷತ್‌ನಲ್ಲಿ ಅಡಕವಾಗಿರುವ ಜೀವನ ಸಂದೇಶವನ್ನು ವಿಸ್ತಾರವಾಗಿ  ವಿವರಿಸಿದರು. ಇದೇ ಸಂದರ್ಭದಲ್ಲಿ ಕಳೆದ 34 ವರ್ಷದಿಂದ ನಡೆದು ಬಂದ ದತ್ತಿ ಉಪನ್ಯಾಸ ಮಾಲಿಕೆಯ ಕುರಿತ ನೇಸರು ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮವನ್ನು ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಶೆಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next