Advertisement

ಮ್ಯಾನ್ಮಾರ್‌ ಬೆಳವಣಿಗೆ, ಎಚ್ಚರಿಕೆಯ ಹೆಜ್ಜೆ ಇಡಲಿ ಭಾರತ

01:49 AM Feb 04, 2021 | Team Udayavani |

ನೆರೆ ರಾಷ್ಟ್ರ ಮ್ಯಾನ್ಮಾರ್‌ನಲ್ಲಿ ನಡೆದಿರುವ ಬೆಳವಣಿಗೆಯನ್ನು ಭಾರತ ಆತಂಕದಿಂದ ಗಮನಿಸುತ್ತಿದೆ. ಕಳೆದ ವರ್ಷ ಮ್ಯಾನ್ಮಾರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್‌ ಸಾನ್‌ ಸೂಕಿ ಅವರ ಪಕ್ಷ ಅಕ್ರಮ ನಡೆಸಿದೆ ಎಂದು ಆರೋಪಿಸಿ ಅಲ್ಲಿನ ಮಿಲಿಟರಿಯು ಆಡಳಿತವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು, ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ವಿದ್ಯಮಾನದಲ್ಲಿ ಚೀನದ ಕೈವಾಡವೂ ಇದೆಯೇ ಎನ್ನುವ ಪ್ರಶ್ನೆಯೂ ಏಳಲಾರಂಭಿಸಿದೆ.

Advertisement

ಭಾರತದ ವಿಚಾರಕ್ಕೆ ಬಂದರೆ, ಮ್ಯಾನ್ಮಾರ್‌ ಕೇವಲ ಭೂ ಹಾಗೂ ಸಾಮಾಜಿಕ ಸಂಪರ್ಕದ ದೃಷ್ಟಿಯಿಂದಷ್ಟೇ ಅಲ್ಲದೇ, ಆರ್ಥಿಕವಾಗಿ ಹಾಗೂ ವ್ಯೂಹಾತ್ಮಕವಾಗಿಯೂ ಮುಖ್ಯವಾದ ರಾಷ್ಟ್ರ. ಸೂಕಿಯವರು ಅಧಿಕಾರಕ್ಕೆ ಬಂದ ಅನಂತರ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬರಲಾರಂಭಿಸಿದವು.

2020ರ ಚುನಾವಣೆಗೂ ಮುನ್ನ ಭಾರತದ ಸೇನಾ ಮುಖ್ಯಸ್ಥ ಜ| ಎಂ.ಎ.ನರವಣೆ ಹಾಗೂ ವಿದೇಶಾಂಗ ಕಾರ್ಯದರ್ಶಿಗಳು ಮ್ಯಾನ್ಮಾರ್‌ಗೆ ಭೇಟಿ ಕೊಟ್ಟದ್ದು ಎರಡೂ ದೇಶಗಳ ನಡುವಿನ ಸಂಬಂಧ ವೃದ್ಧಿಯಲ್ಲಿ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಅಲ್ಲದೇ ಬಹುಸಮಯದಿಂದ ಬಾಕಿ ಉಳಿದಿದ್ದ ಅನೇಕ ಯೋಜನೆಗಳಿಗೂ ಮರುಚಾಲನೆ ನೀಡುವ ಪ್ರಯತ್ನವೂ ಆರಂಭವಾಗಿತ್ತು. ಇನ್ನು ಈಶಾನ್ಯ ರಾಜ್ಯವಾದ ಮಿಜೋರಾಮ್‌ ಮತ್ತು ಮ್ಯಾನ್ಮಾರ್‌ನ ನಡುವಿನ ಆರ್ಥಿಕ ಸಂಪರ್ಕಕ್ಕೆ ವೇಗ ನೀಡುವುದಕ್ಕಾಗಿ ಬ್ಯುನ್ಯು-ಸಾರ್ಸಿಚೌಕ್‌ ಪ್ರದೇಶದಲ್ಲಿ ಸೇತುವೆ ನಿರ್ಮಾಣಕ್ಕೂ ಭಾರತ 2 ದಶಲಕ್ಷ ಡಾಲರ್‌ಗಳಷ್ಟು ಹಣ ನೀಡಿದೆ. ಸೂಕಿ ಅವಧಿಯಲ್ಲಿಂದಷ್ಟೇ ಅಲ್ಲ, ಮ್ಯಾನ್ಮಾರ್‌ನಲ್ಲಿ 5 ದಶಕಗಳ ಮಿಲಿಟರಿ ಆಡಳಿತವಿದ್ದಾಗಲೂ ಭಾರತವು ಅಲ್ಲಿನ ಸೇನೆಯೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿತ್ತು.

ಕಳೆದ ವರ್ಷವಷ್ಟೇ ಭಾರತವು ಮ್ಯಾನ್ಮಾರ್‌ ನೌಕಾಪಡೆಗೆ ಐಎನ್‌ಎಸ್‌ ಸಿಂಧುವೀರ್‌ ಅನ್ನು ಹಸ್ತಾಂತರಿಸಿತ್ತು. ಈ ಹಿಂದೆ ಮ್ಯಾನ್ಮಾರ್‌ ಮಿಲಿಟರಿಯೂ ತನ್ನ ಪ್ರದೇಶದಲ್ಲಿದ್ದ ಭಾರತ ವಿರೋಧಿ ಶಕ್ತಿಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಲು ಭಾರತೀಯ ಸೇನೆಗೆ ಸಹಕರಿಸಿತ್ತು. ಆದರೆ ಮುಂದೆಯೂ ಮ್ಯಾನ್ಮಾರ್‌ ಸೇನೆ ಭಾರತದ ಪರ ಇರಲಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ಏಕೆಂದರೆ ಅತ್ತ ತನ್ನ ಸ್ಟ್ರಿಂಗ್‌ ಆಫ್ ಪರ್ಲ್ಸ್ ತಂತ್ರದ ಮೂಲಕ ಭಾರತದ ಸುತ್ತಲಿನ ದೇಶಗಳಲ್ಲಿ ಮಿಲಿಟರಿ ಬೇಸ್‌ಗಳನ್ನು ಸ್ಥಾಪಿಸಬೇಕು ಎಂಬ ಗುರಿ ಹೊಂದಿರುವ ಚೀನ ಮ್ಯಾನ್ಮಾರ್‌ ಅನ್ನು ತನ್ನ ಮತ್ತೂಂದು ನೆಲೆ ಆಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ಬಳಸಿಕೊಳ್ಳುತ್ತಿರುವುದು ಸಾಲದ ತಂತ್ರವನ್ನು. ಅಂದರೆ, ಚೀನ ಮ್ಯಾನ್ಮಾರ್‌ಗೆ ವಿಪರೀತ ಎನ್ನುವಷ್ಟು ಸಾಲ ನೀಡಿ, ಅದನ್ನು ಕಟ್ಟಿಹಾಕುತ್ತಿದೆ.

Advertisement

ಕಳೆದೆರಡು ದಶಕಗಳಲ್ಲಿ ಮ್ಯಾನ್ಮಾರ್‌ನಲ್ಲಿ ಆದ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಚೀನದ ಪಾಲೇ 25 ಪ್ರತಿಶತದಷ್ಟಿದೆ! ಅಲ್ಲದೇ ಈಗ ಮ್ಯಾನ್ಮಾರ್‌ ಆಡಳಿತವನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಸೇನಾ ಮುಖ್ಯಸ್ಥ ಮಿನ್‌ ಆಂಗ್ ‌ಹ್ಲ್ಯಾಂಗ್‌ ಕೆಲವು ವರ್ಷಗಳಿಂದ ಚೀನಕ್ಕೆ ಬಹಳ ಹತ್ತಿರವಾಗುತ್ತಾ ಬಂದಿದ್ದರು(ಕಳೆದ ತಿಂಗಳಷ್ಟೇ ಚೀನದ ವಿದೇಶಾಂಗ ಸಚಿವರೊಂದಿಗೆ ಮಾತನಾಡಿ ಬಂದಿದ್ದರು). ಈ ವಿಷಯದಲ್ಲಿ ಎಚ್ಚೆತ್ತಿದ್ದ ಸೂಕಿ ಭಾರತದೊಂದಿಗೆ ಒಡನಾಟ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಈಗ ಅಲ್ಲಿನ ರಾಜಕೀಯ ಪರಿದೃಶ್ಯ ಬದಲಾಗಿದೆ. ಭಾರತ ಈ ವಿಷಯವನ್ನು ಅತ್ಯಂತ ಜಾಗರೂಕವಾಗಿ ನಿರ್ವಹಿಸಬೇಕಾದ ಅಗತ್ಯವಂತೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next