ನ್ಯಾಪಿತಾ/ವಿಶ್ವಸಂಸ್ಥೆ: “ಮ್ಯಾನ್ಮಾರ್ ಪಶ್ಚಿಮ ಭಾಗದಲ್ಲಿರುವ ರೊಖೀನೆ ಪ್ರಾಂತ್ಯಕ್ಕೆ ಅಂತಾರಾಷ್ಟ್ರೀಯ ಸಮುದಾಯ ಬರಲಿ. ಅಲ್ಲಿ ಏನಾಗಿದೆ ಎನ್ನುವುದನ್ನು ಪರಿಶೀಲಿಸಲಿ. ಅದಕ್ಕೆ ಯಾವುದೇ ರೀತಿಯಲ್ಲಿ ಅಂಜಿಕೊಂಡಿಲ್ಲ. ದೇಶ ಬಿಟ್ಟು ಪಲಾಯನ ಮಾಡಿರುವ ರೊಹಿಂಗ್ಯಾಗಳು ಮತ್ತೆ ಸ್ವದೇಶಕ್ಕೆ ಬರುವುದಿದ್ದರೆ ಅವರನ್ನು ಪರಿಶೀಲಿಸುವ ಕಾರ್ಯ ಶೀಘ್ರವೇ ಆರಂಭಿಸುತ್ತೇವೆ’
ಹೀಗೆಂದು ಮ್ಯಾನ್ಮಾರ್‌ನ ನಾಯಕಿ ಆಂಗ್ ಸಾನ್ ಸೂಕಿ ಹೇಳಿದ್ದಾರೆ. ಮ್ಯಾನ್ಮಾರ್ ಸೇನೆ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಸಿದ ಕಾರ್ಯಾಚರಣೆ ಬಗ್ಗೆ ಮೌನ ವಹಿಸಿ ರುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಿ ರುವ ನೊಬೆಲ್ ಪುರಸ್ಕೃತೆ ಮಂಗಳವಾರ ಅಲ್ಲಿನ ಸರ್ಕಾರಿ ಸ್ವಾಮ್ಯದ ಚಾನೆಲ್‌ನಲ್ಲಿ ಪರಿಸ್ಥಿತಿ ಬಗ್ಗೆ ಮೌನ ಮುರಿದಿದ್ದಾರೆ.
ಆ.25ರಂದು ಸೇನಾ ಕಾರ್ಯಾಚರಣೆ ನಡೆದು 4,12,000 ಮಂದಿ ರೊಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರೂ, ಶೇ.50ಕ್ಕಿಂತ ಹೆಚ್ಚು ಮಂದಿ ರೊಖೀನೆಯಲ್ಲೇ ವಾಸಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆ ಪ್ರದೇಶದಲ್ಲಿ ಸಹಜ ಸ್ಥಿತಿ ನೆಲೆಸುವಂತೆ ಮಾಡಲು ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಒಂದು ವೇಳೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿನ ನಿಯೋಗ ಅಲ್ಲಿಗೆ ಭೇಟಿ ನೀಡುವು ದಿದ್ದರೆ, ಅಲ್ಲಿಗೆ ತೆರಳಿ ಪರಿಶೀಲಿಸಲಿ. ಅದಕ್ಕೆ ಅಂಜುವುದಿಲ್ಲ ಎಂದು ಹೇಳಿದ್ದಾರೆ. ಹೆದರಿಕೆ ಮತ್ತು ದ್ವೇಷ ಆಧುನಿಕ ಜಗತ್ತಿನ ಶಾಪಗಳು ಎಂದು ಅವರು ಹೇಳಿಕೊಂಡಿದ್ದಾರೆ.
ವಿಭಜನೆ ಬಯಸುವುದಿಲ್ಲ: ಯಾವುದೇ ರೀತಿಯ ಹಿಂಸಾ ಚಾರವನ್ನು ಖಂಡಿಸುವುದಾಗಿ ಹೇಳಿದ ಸೂಕಿ, ಸೇನಾ ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಶಾಂತಿ, ಸುವ್ಯವಸ್ಥೆ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಈ ಘಟನೆಗೆ ಕಾರಣವೇನು, ಮುಸ್ಲಿಮರು ಬಾಂಗ್ಲಾದತ್ತ ಏಕೆ ತೆರಳುತ್ತಿದ್ದಾರೆ ಎನ್ನುವುದನ್ನು ಅಧ್ಯಯನ ನಡೆಸಲಿದ್ದೇವೆ. ಜತೆಗೆ ಹಿಂಸಾತ್ಮಕ ಕೃತ್ಯಗಳ ಹೊರತಾಗಿಯೂ ಪ್ರಾಂತ್ಯದಲ್ಲಿ ಉಳಿದುಕೊಂಡಿರುವವರ ಜತೆಗೂ ಮಾತುಕತೆ ನಡೆಸುತ್ತೇವೆ ಎಂದು ಸೂಕಿ ಹೇಳಿದ್ದಾರೆ. ಧಾರ್ಮಿಕ ನಂಬಿಕೆ ಅಥವಾ ಜನಾಂಗೀಯ ವ್ಯವಸ್ಥೆ ಆಧಾರದಲ್ಲಿ ಮ್ಯಾನ್ಮಾರ್ ವಿಭಜನೆಗೊಳ್ಳುವುದನ್ನು ಬಯಸುವುದಿಲ್ಲ ಎಂದು ಸೂಕಿ ಹೇಳಿಕೊಂಡಿದ್ದಾರೆ.
ಸುಳ್ಳುಗಾತಿ: ಈ ನಡುವೆ ಮ್ಯಾನ್ಮಾರ್‌ನ ಕುಟುಪಲಾಂಗ್‌ನಲ್ಲಿರುವ ನಿರಾಶ್ರಿತರ ಶಿಬಿರದಲ್ಲಿ ಸೂಕಿ ಭಾಷಣಕ್ಕೆ ಆಕ್ರೋಶ ವ್ಯಕ್ತವಾಗಿದೆ. ಒಂದು ಹಂತದಲ್ಲಿ ರೊಹಿಂಗ್ಯಾಗಳು ಅವರನ್ನು ನಂಬಿಕೊಂಡಿದ್ದರು. ಈಗ ಅವರು ಸುಳ್ಳುಗಾತಿಯಾಗಿ ಬದಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಪತ್ರಕರ್ತರಿಗೆ ರೊಖೀನೆ ಪ್ರಾಂತ್ಯಕ್ಕೆ ಭೇಟಿ ನೀಡುವುದಕ್ಕೆ ಅವಕಾಶ ನೀಡಬೇಕು ಎಂದು ನಿರಾಶ್ರಿತರ ಶಿಬಿರದ ಮುಖ್ಯಸ್ಥ ಅಬ್ದುಲ್ ಹಫೀಜ್ ತಿಳಿಸಿದ್ದಾರೆ. ಒಂದು ವೇಳೆ ರೊಹಿಂಗ್ಯಾ ಸಮುದಾಯದ ಗ್ರಾಮಗಳು ನಾಶವಾಗಿಲ್ಲ ಎಂದು ಸಾಬೀತಾದರೆ ವಿಶ್ವ ಸಮುದಾಯ ನಮ್ಮನ್ನು ಸಮುದ್ರಕ್ಕೆ ತಳ್ಳಿ ಕೊಂದರೂ ಆಕ್ಷೇಪವಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ತಡೆಯಿಲ್ಲದ ಪ್ರವೇಶಕ್ಕೆ ಅವಕಾಶ ಬೇಕು
ಈ ನಡುವೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಲ್ಲಂಘನೆಯ ತನಿಖಾ ಸಮಿತಿ ಸದಸ್ಯರು ಮ್ಯಾನ್ಮಾರ್‌ಗೆ ತಡೆಯಿಲ್ಲದ ಪ್ರವೇಶಕ್ಕೆ ಅವಕಾಶ ಬೇಕು ಎಂದು ಒತ್ತಾಯಿಸಿದ್ದಾರೆ. ಸಮಿತಿಯ ಸದಸ್ಯರು ಎಲ್ಲ ಸ್ಥಳಗಳಿಗೆ ಭೇಟಿ ನೀಡಿ, ಏನಾಗಿದೆ ಎನ್ನುವುದನ್ನು ಪರಿಶೀಲಿಸಲು ಮುಕ್ತ ಅವಕಾಶ ಬೇಕು. ಆ ದೇಶದಲ್ಲಿ ವ್ಯಾಪಕವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿಶ್ವಸಂಸ್ಥೆ ಬೆಂಬಲಿತ ಮಾನವ ಹಕ್ಕುಗಳ ಸಮಿತಿಯ ಮುಖ್ಯಸ್ಥ ಮಾರ್ಜುಕಿ ದರುಸ್ಮಾನ್ ಹೇಳಿದ್ದಾರೆ.
ರೊಹಿಂಗ್ಯಾಗಳ ಮೇಲೆ ನಿರ್ಬಂಧ
ಮ್ಯಾನ್ಮಾರ್‌ನಿಂದ ತಂಡೋಪ ತಂಡವಾಗಿ ಬಾಂಗ್ಲಾಗೆ ರೊಹಿಂಗ್ಯಾಗಳು ಬರುತ್ತಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಅವರನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಬಾಂಗ್ಲಾ ಪ್ರಧಾನಿಯ ರಾಜಕೀಯ ಕಾರ್ಯದರ್ಶಿ ಎಚ್.ಟಿ.ಇಮಾಮ್ ಹೇಳಿದ್ದಾರೆ. ಕೋಲ್ಕತಾದಲ್ಲಿ
ಮಾತನಾಡಿದ ಅವರು, ಈ ಮೂಲಕ ಉಗ್ರರು ದೇಶ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಶನಿವಾರವೇ ಪೊಲೀಸರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಈಗಾಗಲೇ 4 ಲಕ್ಷ ಮಂದಿ ಅಲ್ಲಿಗೆ ಪ್ರವೇಶಿಸಿದ್ದಾರೆ. ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಪ್ರವಾಸ ಮಾಡಬಾರದು. ರಸ್ತೆ, ನೀರು ಮತ್ತು ವಾಯು ಮಾರ್ಗಗಳನ್ನು ಅವಲಂಬಿಸುವಂತಿಲ್ಲ ಎಂದು ತಾಕೀತು ಮಾಡಲಾಗಿದೆ.
ಮಿಜೋರಾಂ ಗಡಿಯಲ್ಲಿ ಬಿಗಿ ಬಂದೋಬಸ್ತ್
ಈಶಾನ್ಯ ರಾಜ್ಯ ಮಿಜೋರಾಂ ಮ್ಯಾನ್ಮಾರ್ ಜತೆ ಹೊಂದಿರುವ ಗಡಿಗುಂಟ ಬಿಗಿ ಬಂದೋಬಸ್ತ್ ಮಾಡಲಾಗಿದೆ. ವಿಶೇಷ ವಾಗಿ ಲ್ವಾಂಗಾrಲಿ ಜಿಲ್ಲೆಯಲ್ಲಿ ರೊಹಿಂಗ್ಯಾ ವಲಸಿಗರು ಮತ್ತು ಉಗ್ರರು ಪ್ರವೇಶಿಸದಂತೆ ತಪಾಸಣೆ, ಭದ್ರತೆ ಕೈಗೊಳ್ಳಲಾಗಿದೆ. ಮ್ಯಾನ್ಮಾರ್ ಜತೆ 404 ಕಿಮೀ ಅಂತಾರಾಷ್ಟ್ರೀಯ ಗಡಿಯನ್ನು ಮಿಜೋರಾಂ ಹೊಂದಿದೆ.