Advertisement

UV Fusion: ನನ್ನ ನಡೆ “ಸರಸ್ವತಿ’ಯ ಕಡೆ

10:49 AM Oct 03, 2023 | Team Udayavani |

ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದಂತಹ ಅನುಭವಗಳಿರುತ್ತವೆ. ಜೀವನದಲ್ಲಿ ಇನ್ನಷ್ಟು ಪಕ್ವವಾಗಲು, ಪರಿಪೂರ್ಣರಾಗಲು ಇಂತಹ ಅನುಭವಗಳು ಸಹಾಯಕವಾಗುತ್ತದೆ. ಬೇಸಗೆ ರಜೆ ಕಳೆದು ಮಳೆಯೇನೋ ಇಳೆಗೆ ಕಾಲಿಟ್ಟಿತ್ತು. ಬೇಸಗೆಯೋ ಮಳೆಗಾಲವೋ ಎಂದು ನಿರ್ಧರಿಸಲಾಗದ ಒಂದು ದಿನ ಯುದ್ಧಕ್ಕೆ ಹೋಗುವ ಯೋಧನಂತೆ ನನ್ನ ನಡೆ ಸರಸ್ವತಿಯ ಕಡೆಗೆ ಸಾಗಿತು.

Advertisement

ಪುತ್ತೂರಿನ ನರಿಮೊಗರು ಗ್ರಾಮದ ಪುರುಷರಕಟ್ಟೆಯ ಶಾಲೆಯೊಂದರಲ್ಲಿ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ನನ್ನನ್ನು ನೋಡಿದಂತಹ ಉಳಿದ ಅಧ್ಯಾಪಕರ ಮನದಲ್ಲಿ ಯಾರಿವಳು? ಎಲ್ಲಿಯವಳು? ಎಂಬ ಪ್ರಶ್ನೆ ಬರುವುದು ಸಹಜ. ಎಲ್ಲರಂತೆ ನಾನೂ ಒಬ್ಬಳಾಗಿ ಬಲಗಾ

ಲಿಟ್ಟು ಶಾಲಾ ಕಾರ್ಯಾಲಯಕ್ಕೆ ಪ್ರವೇಶಿಸಿದೆ. ಯಾವುದೇ ಒಂದು ಒಳ್ಳೆಯ ಕೆಲಸದ ಆರಂಭದಲ್ಲಿ ದೇವರಿಗೆ ವಂದಿಸಿ ಆರಂಭಿಸುವುದು ನಮ್ಮ ಪರಂಪರೆ. ಮಹಾಲಿಂಗೇಶ್ವರನನ್ನು ಸದಾ ಮನದಲ್ಲಿ ನೆನೆಯುತ್ತಿದ್ದೆ.

ಸರಸ್ವತಿ ವಂದನೆಯೊಂದಿಗೆ ಎಲ್ಲ ಮಕ್ಕಳ ಧ್ವನಿಗಳು ಶಾಲಾ ದೇಗುಲದ ಗೋಡೆಗಳಲ್ಲಿ ಪ್ರತಿದ್ವನಿಸಿತು. ಜ್ಞಾನ ದೇಗುಲ ಲಭಿಸಿದೆ. ಕೈ ಮುಗಿದು ಕಾರ್ಯನಿರತಳಾದೆ. ಹೊಸ ಹೊಸ ಮುಖಗಳು, ಆ ಮುಖಗಳಲ್ಲಿ ಕಾಣುವ ಕುತೂಹಲದ ಮುಗುಳ್ನಗೆ.

ಇದರ ನಡುವೆ ನಾನು ಕಳೆದು ಹೋದೆ. ಹೊಸ ಜನ, ಹೊಸ ಸ್ಥಳ ಎನ್ನುವಾಗ ಏನೋ ಒಂದು ರೀತಿಯ ರೋಮಾಂಚನ, ಗೊಂದಲ. ಅದು ದೂರವಾಗಲು ಅಲ್ಲಿರುವ ನಗು ಮುಖಗಳು ಕಾರಣವಾದವು. ಮನೆಗೆ ಬಂದ ಅತಿಥಿಗೆ ಆತಿಥ್ಯ ಮುಖ್ಯವಾಗಿರುತ್ತದೆ. ಅಂತಹ ಆತಿಥ್ಯ ನನಗೂ ದೊರಕಿತು. ಇನ್ನೇಕೆ ಉಸಿರು ಬಿಗಿ ಹಿಡಿಯಬೇಕು ಎಂದು ಮನಸ್ಸನ್ನು ಹಗುರಗೊಳಿಸಿದೆ.

Advertisement

ಪುತ್ತೂರಿನ ಶಾಲೆ ಅನ್ನುವುದಕ್ಕಿಂತ ನಮ್ಮ ಶಾಲೆ, ನನ್ನ ಶಾಲೆ ಅನ್ನುವ ಹೊಸ ಭಾವನೆ ಹುಟ್ಟಿಕೊಂಡಿತು. ಮಕ್ಕಳ ಜತೆ ಮಕ್ಕಳಾಗುವ ಭಾಗ್ಯ ಶಿಕ್ಷಕರಿಗೆ ಮಾತ್ರ ಸಿಗಲು ಸಾಧ್ಯ. ಮನಸ್ಸಿನಲ್ಲಿರುವ ಎಷ್ಟೋ ದುಃಖಗಳು ಮಕ್ಕಳೊಂದಿಗಿನ ಒಡನಾಟದಿಂದ ಮರೆತುಬಿಡುತ್ತೇವೆ. ಮಕ್ಕಳ ಕರೆಯಿಂದ ದೊರಕುವ ಸಂತೋಷ ಇನ್ನಾವುದರಿಂದಲೂ ದೊರಕದು. ನನಗೂ ನಮ್ಮೂರ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಳ್ಳುವ ಆಸೆ ಹುಟ್ಟಿತು.

ಹೌದು… ಜೀವನದಲ್ಲಿ ಒಂದು ಹಂತಕ್ಕೆ ಬಂದಾಗ ಮನುಷ್ಯ ತನ್ನ ಭಾವನೆಗಳಿಗೆ ಬೆಲೆಕಟ್ಟಲು ತೊಡಗುತ್ತಾನೆ. ಅಗತ್ಯಕ್ಕೆ ತಕ್ಕಂತೆ ಆತನ ಭಾವನೆಗಳು ಬದಲಾಗುತ್ತದೆ. ಆದರೆ ಮಕ್ಕಳದು ನಿಷ್ಕಲ್ಮಶ ಭಾವನೆಗಳು. ಅದರಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ. ವಿದ್ಯಾರ್ಥಿಗಳ ಪ್ರೀತಿ, ಶಿಸ್ತು, ತನ್ನವರೆನ್ನುವ ಮನೋಭಾವ, ವಿಶಾಲವಾದ ಆಟದ ಮೈದಾನ, ಹಚ್ಚಹಸುರಿನ ಮರಗಳು, ಕಲಿಕೆಗೆ ಪೂರಕವಾದ ಚಾರ್ಟ್‌ಗಳಿಂದ ಕಂಗೊಳಿಸುವ ತರಗತಿ ಕೊಠಡಿಗಳು, ಎಲ್ಲದರಲ್ಲೂ ನಾನೇ ಮೊದಲು ಎನ್ನುವ ವಿದ್ಯಾರ್ಥಿಗಳ ಉತ್ಸಾಹ, ಎಲ್ಲವನ್ನೂ ಕಂಡ ನನಗೆ ಮೆಚ್ಚುಗೆ ಮೂಡಿತು.

ನಗುನಗುತ್ತಾ ನಿಸ್ವಾರ್ಥ ಸಹಿತರಾಗಿ ಮಾಡುವ ಕೆಲಸ ಯಶಸ್ಸು ಸಾಧಿಸುವುದು ಎನ್ನುವ ಹಾಗೆ ಇಲ್ಲಿನ ಎಲ್ಲ ಯಶಸ್ಸಿಗೂ ಇಲ್ಲಿನ ಶಿಕ್ಷಕರ ನಗು ಮುಖವೇ ಕಾರಣ ಎಂದುಕೊಂಡೆ. ಅವರೊಂದಿಗೆ ನಾನು ಬೆರೆತು ಒಂದೇ ಕುಟುಂಬದಂತೆ ವಿಧ್ಯೆಯನ್ನು ಧಾರೆಯೆರೆಯುವಲ್ಲಿ ನಿರತಳಾಗಿರುವೆ. ಈ ಸಂದರ್ಭದಲ್ಲಿ ನನ್ನ ಜೀವನದ ಮೊದಲ ಗುರುಗಳಾದ ತಂದೆ ತಾಯಿ , ವಿದ್ಯೆಯನ್ನು ಕಲಿಸಿ ಇಲ್ಲಿಯ ತನಕ ನನ್ನ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ಎಲ್ಲ ಗುರುಗಳನ್ನು ನೆನೆಯುತ್ತಿರುವೆ. ಅವರಿಗೆ ಚಿರ ಋಣಿಯಾಗಿರುವೆ.

-ಪವಿತ್ರಾ ಅವಿನಾಶ್‌

ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next