Advertisement

ದೇವರೇ ಮಕ್ಕಳನ್ನು ಕೊಡೋವಾಗ ಬೇಡ ಅನ್ನೋಕೆ ನಾವ್ಯಾರು!

11:15 AM Jun 11, 2017 | |

ಲಾಹೋರ್‌: “ದೇವರೇ ಮಕ್ಕಳನ್ನು ಕರುಣಿಸುತ್ತಿದ್ದಾನೆ. ಅವರನ್ನು ಹುಟ್ಟಿಸುವವನೂ ಅವನೇ. ಅವರಿಗೆ ಅನ್ನ ನೀರು ನೀಡುವವನು ಕೂಡ ಅವನೇ. ಎಲ್ಲವನ್ನೂ ಭಗವಂತನೇ ಮಾಡುತ್ತಿರುವಾಗ ಮಕ್ಕಳನ್ನು ಹುಟ್ಟಿಸುವುದಿಲ್ಲ ಎನ್ನಲು ನಾವ್ಯಾರು?’ 

Advertisement

ಇದು 36 ಮಕ್ಕಳ ತಂದೆ, 57ರ ಹರೆಯದ ಗುಲ್ಜಾರ್‌ ಖಾನ್‌ ಅವರ ಮಾತು. “ದೇವರು ಕೊಡುತ್ತಿದ್ದಾನೆ’ ಎಂದು ಬಿಡುವಿಲ್ಲದಂತೆ ಮಕ್ಕಳ ಹುಟ್ಟಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಖಾನ್‌ ಸಾಹೇಬರಿಗೆ ಮೂವರು ಪತ್ನಿಯರಿದ್ದಾರೆ. ಗುಲ್ಜಾರ್‌ ಖಾನ್‌ರನ್ನು ಕಂಡು ಪ್ರೇರಿತರಾದ ಅವರ ಸೋದರ ಮಸ್ತಾನ್‌ ಖಾನ್‌ ವಾಜಿರ್‌ ಕೂಡ 22 ಮಕ್ಕಳ ತಂದೆಯಾಗಿದ್ದಾರೆ. ಅಣ್ಣನಂತೆಯೇ ನಾನ್‌ಸ್ಟಾಪ್‌ ಮಕ್ಕಳ ಉತ್ಪಾದನೆಯಲ್ಲಿ ತೊಡಗಿ ವಂಶೋದ್ಧಾರ ಮಾಡುವ ಗುರಿ ಹೊಂದಿದ್ದಾರೆ.

ಪಾಕಿಸ್ಥಾನದ ಬನ್ನು ಎಂಬ ಬುಡಕಟ್ಟು ಜಿಲ್ಲೆಯಲ್ಲಿ ವಾಸವಿರುವ ಗುಲ್ಜಾರ್‌ ಖಾನ್‌, ಮಕ್ಕಳನ್ನು ಹುಟ್ಟಿಸುವ ವಿಚಾರದಲ್ಲಿ ಇಡೀ ಪ್ರಾಂತ್ಯಕ್ಕೇ ಪ್ರೇರಣೆಯಾಗಿದ್ದಾರೆ. ಇವರನ್ನು ಕಂಡ ಜಿಲ್ಲೆಯ ಹಲವು ಗಂಡಸರು ಮೂರು, ನಾಲ್ಕು ಮದುವೆ ಮಾಡಿಕೊಂಡು, ಈಗಾಗಲೇ 15ರಿಂದ 20 ಮಕ್ಕಳನ್ನು ಹುಟ್ಟಿಸಿರುವ ಸಾಧನೆ ಮಾಡಿದ್ದಾರೆ. ಇನ್ನು ಉತ್ತರ ವಾಝಿರಿಸ್ಥಾನ್‌ ಬುಡಕಟ್ಟು ಜಿಲ್ಲೆಯ ಜಾನ್‌ ಮೊಹಮ್ಮದ್‌ ಎಂಬವರಿಗೆ 38 ಮಕ್ಕಳಿದ್ದಾರೆ. ಈ ಸಾಧನೆಯಿಂದಾಗಿ ಇಡೀ ಜಿಲ್ಲೆಯಲ್ಲಿ ಇವರಿಗೆ ಸೆಲೆಬ್ರಿಟಿ ಸ್ಥಾನಮಾನ ಲಭ್ಯವಾಗಿದೆ.

ಇವರಿಗೆ 100 ಮಕ್ಕಳ ತಂದೆಯಾಗುವ ಗುರಿ ಇದೆ. ಆದರೆ ಈ ಉದ್ದೇಶ ಈಡೇರಿಸಲು ನಾಲ್ಕನೇ ಪತ್ನಿಯಾಗಿ ಇವರನ್ನು ವರಿಸಲು ಯಾವ ಮಹಿಳೆಯೂ ಮುಂದೆ ಬರುತ್ತಿಲ್ಲ. ಅಂದಹಾಗೆ ಜಾನ್‌ ಅವರ ವಯಸ್ಸು ಬರೀ 70 ವರ್ಷ!

ಈ ಎಲ್ಲರೂ ಎಲೆಮರೆ ಕಾಯಿಗಳಂತೆ ಇಷ್ಟೊಂದು ದೊಡ್ಡ ಮಟ್ಟದ ಸಾಧನೆ ಮಾಡಿ, ಪಾಕಿಸ್ಥಾನದ ಜನಸಂಖ್ಯೆ ಹೆಚ್ಚಿಸುವಲ್ಲಿ ಮಹೋನ್ನತ ಕೊಡುಗೆ ನೀಡುತ್ತಿದ್ದರು. ಆದರೆ 19 ವರ್ಷಗಳ ನಂತರ ಪಾಕಿಸ್ಥಾನದಲ್ಲಿ ನಡೆದ ಜನಗಣತಿ ವೇಳೆ ಇವರೆಲ್ಲರ ಸಾಧನೆ ಬೆಳಕಿಗೆ ಬಂದಿದೆ. 1998ರ ಗಣತಿ ವೇಳೆ 135 ದಶಲಕ್ಷವಿದ್ದ ಜನಸಂಖ್ಯೆ ಈಗ 200 ದಶಲಕ್ಷಕ್ಕೇರಿರಬಹುದು ಎಂದು ಅಂದಾಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next