Advertisement

ರೈತರ ಜೀವನಾಡಿ ಮೈಶುಗರ್‌ಗೆ ಮತ್ತೇ ಚಾಲನೆ?

12:35 PM Sep 09, 2019 | Suhan S |

ಮಂಡ್ಯ: ಜಿಲ್ಲೆಯ ರೈತರ ಆರ್ಥಿಕ ಜೀವನಾಡಿಗಳಾದ ಮೈಶುಗರ್‌ ಮತ್ತು ಪಿಎಸ್‌ಎಸ್‌ಕೆ ಕಾರ್ಖಾನೆಗಳ ಪುನಶ್ಚೇತನದ ಮಾತುಗಳು ಮತ್ತೂಮ್ಮೆ ಆರಂಭಗೊಂಡಿವೆ. ರಾಜಕೀಯವಾಗಿ ಬಿಜೆಪಿಗೆ ನೆಲೆ ಇಲ್ಲದ ಮಂಡ್ಯ ಜಿಲ್ಲೆಯಲ್ಲಿ 2 ಪ್ರಮುಖ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಿ ಜನಮೆಚ್ಚುಗೆಗೆ ಪಾತ್ರವಾಗಲು ಬಿ.ಎಸ್‌.ಯಡಿಯೂರಪ್ಪ ನಾಯಕತ್ವದ ಸರ್ಕಾರ ಮತ್ತೂಂದು ಪ್ರಯತ್ನಕ್ಕೆ ಮುಂದಾಗಿದೆ.

Advertisement

ಬಹುದಿನಗಳಿಂದ ರೈತರ ಪ್ರಮುಖ ಬೇಡಿಕೆಯಾಗಿದ್ದ ಮೈಶುಗರ್‌ ಮತ್ತು ಪಿಎಸ್‌ಎಸ್‌ಕೆ ಪುನಶ್ಚೇತನದ ಕೂಗು ಈಗ ಸರ್ಕಾರವನ್ನು ಮುಟ್ಟಿದಂತಾಗಿದೆ. ಜರೂರಾಗಿ ಕಾರ್ಖಾನೆಗಳ ಪುನಶ್ಚೇತನವಾಗದಿದ್ದರೂ ನಿಗಧಿತ ಅವಧಿಯಲ್ಲಿ ಕಾರ್ಖಾನೆಗಳನ್ನು ಪುನರಾರಂಭಿಸಿ ಆ ಮೂಲಕ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡುವ ಉದ್ದೇಶವನ್ನು ಸರ್ಕಾರ ವ್ಯಕ್ತಪಡಿಸಿದೆ.

ಕಾರ್ಖಾಣೆ ಪುನಶ್ಚೇತನಕ್ಕೆ ಸಿಎಂ ಸಭೆ: ಇತ್ತೀಚೆಗೆ ಬೆಂಗಳೂರಿನಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಈ ಹಿಂದಿನ ಸರ್ಕಾರದ ನಿರ್ಧಾರದಂತೆ ಖಾಸಗೀಯವರಿಗೆ ಗುತ್ತಿಗೆ ನೀಡುವ ಮತ್ತು ಮೈಶುಗರ್‌ ಕಾರ್ಖಾನೆಯ ಸಕ್ಕರೆ ಉತ್ಪಾದನೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಖಾಸಗಿಯವರಿಗೆ ವಹಿಸಿ ಫಲಿತಾಂಶವನ್ನು ನೋಡಿ ನಂತರ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಒಳಸಂಘರ್ಷ, ಭ್ರಷ್ಟಾಚಾರದಿಂದ ರೋಗಗ್ರಸ್ಥ: ಮೈಷುಗರ್‌ ಕಾರ್ಖಾನೆ ಉಳಿವಿಗೆ ಜಿಲ್ಲೆಯಲ್ಲಿ ನಿರಂತರ ಹೋರಾಟಗಳು ನಡೆಯುತ್ತಲೇ ಇದ್ದರೂ, ಹಲವು ಕಾರಣಗಳಿಂದಾಗಿ ಮೈಶುಗರ್‌ ಸುಲಲಿತವಾಗಿ ನಡೆಯಲು ಸಾಧ್ಯವಾಗದೆ. ನಿಗದಿತ ಸಮಯಕ್ಕೆ ಆರಂಭಗೊಳ್ಳದೆ. ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ನೀಡಲಾಗದೆ. ಬಹು ಮುಖ್ಯವಾಗಿ ಆಡಳಿತ ಮತ್ತು ನೌಕರ ವರ್ಗದ ನಡುವಿನ ಸಂಘರ್ಷ ಹಾಗೂ ಭ್ರಷ್ಟಾಚಾರದಿಂದಾಗಿ ರೋಗಗ್ರಸ್ಥವಾಗಿರುವ ಮೈಶುಗರ್‌ ಪುನಶ್ಚೇತನವೇ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಹಿಂದಿನ ಸರ್ಕಾರಗಳು ಮಂಡ್ಯ ಜಿಲ್ಲೆಗೆ ಆದ್ಯತೆ ನೀಡುವುದೆಂದರೆ, ಅದು ಮೈಶುಗರ್‌ ಕಾರ್ಖಾನೆಗೆ ಒಂದಷ್ಟು ಹಣವನ್ನು ನೀಡುವುದಕ್ಕೆ ಸೀಮಿತವಾಗಿತ್ತು. ನಂತರದ ದಿನಗಳಲ್ಲಿ ಮೈಶುಗರ್‌ಗೆ ಕೊಟ್ಟ ಹಣ ಎಷ್ಟರ ಮಟ್ಟಿಗೆ ಬಳಕೆಯಾಗಿದೆ ಮತ್ತು ಅದರಿಂದಾದ ಅನುಕೂಲಗಳೇನು ಎಂದು ನೋಡುತ್ತಾ ಹೋದರೆ, ಯಾವುದೇ ಸಂದರ್ಭದಲ್ಲೂ ನಿರೀಕ್ಷಿತ ಫಲ ಸಿಗಲಿಲ್ಲ. ಕಬ್ಬು ಬೆಳೆಗಾರರಿಗೆ ಮೈಶುಗರ್‌ ಸಕ್ಕರೆ ಸಿಹಿಯಾಗಲೇ ಇಲ್ಲ.

Advertisement

ಅನುದಾನ ನೀಡಿದರೂ ಪ್ರಯೋಜನವಾಗಲಿಲ್ಲ: ನಿರಂತರ ಸವಾಲುಗಳ ನಡುವೆ ಜೀವನ್ಮರಣ ಹೋರಾಟ ನಡೆಸುತ್ತಿರುವ ಮೈಶುಗರ್‌ ಕಾರ್ಖಾನೆ ಅಭಿವೃದ್ಧಿಗೆ ಈ ಹಿಂದೆ ಕೂಡ 2008ರಲ್ಲಿ ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನೂರಾರು ಕೋಟಿ ಅನುದಾನವನ್ನು ನೀಡಿದ್ದರಾದರೂ, ಮೈಶುಗರ್‌ನ ಪ್ರಗತಿ ಸಾಧ್ಯವಾಗಲೇ ಇಲ್ಲ. ಬದಲಾಗಿ ಮೈಶುಗರ್‌ ಹೆಸರೇಳಿಕೊಂಡು ಓಡಾಡುತ್ತಿದ್ದ ಗಂಟುಕಳ್ಳರಿಗೆ ಅದರ ಫಲ ದೊರೆತಿತ್ತು.

ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೈಶುಗರ್‌ ಪುನಶ್ಚೇತನದ ಬಗ್ಗೆ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಕೂಡ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯವರೇ ಆದ ಯಡಿಯೂರಪ್ಪ ಜಿಲ್ಲೆಯ ಎರಡು ಕಣ್ಣುಗಳಂತಿರುವ ಮೈಷುಗರ್‌ ಮತ್ತು ಪಿಎಸ್‌ಎಸ್‌ಕೆ ಅಭಿವೃದ್ಧಿಯ ಮೂಲಕ ತಮ್ಮ ಜನಪರತೆಯನ್ನು ಪ್ರದರ್ಶಿಸಲಿ ಎಂಬುದು ಜಿಲ್ಲೆಯ ರೈತರ ಅಭಿಪ್ರಾಯವಾಗಿದೆ.

ಮೈಶುಗರ್‌ ಪುನಶ್ಚೇತನದ ಹಾದಿ : ಅವನತಿಯ ಅಂಚಿನಲ್ಲಿರುವ ಮೈಶುಗರ್‌ ಕಾರ್ಖಾನೆಯ ಪುನಶ್ಚೇತನ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿಯವರು ಕೂಡ ಮೈಶುಗರ್‌ ಅಭಿವೃದ್ಧಿಗಾಗಿ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದರು. ಮೈಶುಗರ್‌ ಖಾಸಗೀಕರಣದ ವದಂತಿಯ ನಡುವೆಯೂ ಮಂಡ್ಯದಲ್ಲಿ ಹೊಸದಾಗಿಯೇ ಮತ್ತೂಂದು ಮೈಶುಗರ್‌ ಕಾರ್ಖಾನೆಯನ್ನು ಸ್ಥಾಪಿಸುವ ಭರವಸೆಯನ್ನು ನೀಡಿದ್ದರು. ಈ ನಡುವೆ ನಿಖೀಲ್ಕುಮಾರಸ್ವಾಮಿಯ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 8500 ಕೋಟಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ, ಜೆಡಿಎಸ್‌ ನಾಯಕತ್ವದ ಸರ್ಕಾರದ ಪತನದ ನಂತರ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಾಬಲ್ಯ ಕುಸಿಯುವುದರ ಜೊತೆಗೆ ಅಭಿವೃದ್ಧಿಯ ಕನಸುಗಳು ಮರೀಚಿಕೆಯಾಗಿದ್ದವು. ಈಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮೈಶುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳ ಕುರಿತು ಮೊದಲ ಸುತ್ತಿನ ಸಭೆ ನಡೆಸುವುದರ ಮೂಲಕ ಅಭಿವೃದ್ಧಿ ಕನಸುಗಳನ್ನು ಚಿಗುರಿಸಿದ್ದಾರೆ ಎಂದೇ ಹೇಳಲಾಗುತ್ತಿದೆ.

ಸರ್ಕಾರದ ಸದ್ಯದ ಆಲೋಚನೆ ಪ್ರಕಾರ, ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯದ ಮೇರೆಗೆ ಮೈಶುಗರ್‌ ಕಾರ್ಖಾನೆಯನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ವಹಿಸದಿರುವ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಆದರೆ, ಮೈಶುಗರ್‌ ಕಾರ್ಖಾನೆಯ ಭವಿಷ್ಯದ ದೃಷ್ಟಿಯಿಂದ 3 ವರ್ಷಗಳ ಕಾಲ ಉತ್ಪಾದನೆ ಮತ್ತು ನಿರ್ವಹಣಾ ಜವಾಬ್ದಾರಿಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗುವುದು. ಮೈಶುಗರ್‌ನ ಸಂಪೂರ್ಣ ಒಡೆತನದ ಹಕ್ಕು ಸರ್ಕಾರಕ್ಕೇ ಇದ್ದು, ಮೂರು ವರ್ಷಗಳಲ್ಲಿ ಖಾಸಗಿಯವರ ಕಾರ್ಯನಿರ್ವಹಣೆಯನ್ನು ಗಮನಿಸಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಮೈಶುಗರ್‌ನ ದಿವಾಳಿತನಕ್ಕೆ ಪ್ರಮುಖ ಕಾರಣವಾಗಿರುವ ಆಡಳಿತ ಮಂಡಳಿ ಮತ್ತು ನೌಕರ ವರ್ಗದ ನಡುವಿನ ಸಂಘರ್ಷವನ್ನು ನಿವಾರಿಸುವ ಸಲುವಾಗಿ ಪ್ರಸ್ತುತ ಮೈಶುಗರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 300ಕ್ಕೂ ಹೆಚ್ಚು ನೌಕರರಿಗೆ ಸ್ವಯಂ ನಿವೃತ್ತಿ ಘೋಷಣೆ ಮಾಡಿ ಅವರಿಗೆ ಸಲ್ಲಬೇಕಾದ ನಿವೃತ್ತಿ ಭತ್ಯೆಯನ್ನು ಸಂಪೂರ್ಣವಾಗಿ ಪಾವತಿಸಿ, ಅವರನ್ನು ಬಿಡುಗಡೆಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಮೈಶುಗರ್‌ನ ಉತ್ಪಾದನೆ ಮತ್ತು ನಿರ್ವಹಣೆಗೆ ಖಾಸಗಿಯವರಿಗೆ ವಹಿಸಿದ ಸಂದರ್ಭದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಂದ ತೊಂದರೆಯಾಗಬಾರದು ಎಂಬ ಕಾರಣದಿಂದ ಈ ತೀರ್ಮಾನವನ್ನು ತೆಗೆದುಕೊಂಡಿರುವ ಸರ್ಕಾರ, ಮುಂದಿನ ದಿನಗಳಲ್ಲಿ ನೌಕರರಿಂದ ಕಾನೂನಿನ ಅಡ್ಡಿಗಳಾಗದಂತೆ ನೋಡಿಕೊಳ್ಳುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿದೆ.

ಏಕಕಾಲದಲ್ಲಿ ನಿವೃತ್ತಿ ಭತ್ಯೆಯನ್ನು ಇತ್ಯರ್ಥಪಡಿಸುವ ಉದ್ದೇಶವನ್ನು ಹೊಂದಿರುವ ಸರ್ಕಾರ, ಅದಕ್ಕಾಗಿ 27 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ಪ್ರಕ್ರಿಯೆ ಮುಗಿದ ನಂತರ ಜನಪ್ರತಿನಿಧಿಗಳು ಮತ್ತು ಮುಖಂಡರೊಂದಿಗೆ ಮತ್ತೂಂದು ಸುತ್ತಿನ ಸಭೆ ನಡೆಸಿ, ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ.

ಮೈಶುಗರ್‌ ಪುನರಾರಂಭದ ಸರ್ಕಾರದ ಉದ್ದೇಶ ಈಡೇರಲು ಕೆಲವು ತಿಂಗಳುಗಳ ಸಮಯಾವಕಾಶ ಬೇಕಿರುವುದರಿಂದ ಸಧ್ಯದ ಪರಿಸ್ಥಿತಿಯಲ್ಲಿ ಬೆಳೆದು ನಿಂತಿರುವ ಕಬ್ಬು ಸಾಗಾಣಿಕೆಗೆ ಕೂಡ ಕ್ರಮ ಕೈಗೊಂಡಿದ್ದು, ಕಬ್ಬು ಬೆಳೆಗಾರರು ತಮ್ಮ ಹತ್ತಿರದ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಲು ಅವಕಾಶ ಮಾಡಿಕೊಡುವ ಉದ್ದೇಶವನ್ನು ಸಹ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next