Advertisement

ಈ ಪ್ರೌಢಶಾಲೆ ತೆರೆಯದಿದ್ದರೆ ನನ್ನ ಓದು 7ನೇ ತರಗತಿಗೇ ನಿಲ್ಲುತ್ತಿತ್ತು: ಆರಗ ಜ್ಞಾನೇಂದ್ರ

09:00 PM Jun 26, 2023 | Team Udayavani |

ತೀರ್ಥಹಳ್ಳಿ : ”ಇಂದು ನನಗೆ ಅತ್ಯಂತ ಸಂಭ್ರಮದ ದಿನ, ಈ ಕಟ್ಟಡ ನನ್ನ ಕನಸನ್ನು ನಿರ್ಮಾಣ ಮಾಡಿದ ಜಾಗ. ನನ್ನಂತಹ ಎಷ್ಟೋ ಜನರ ಕನಸು ನನಸು ಮಾಡಿದ ಸಂಸ್ಥೆ. ಈ ಜಾಗ ನನ್ನ ಪಾಲಿನ ದೇವಸ್ಥಾನ” ಎಂದು ಸೋಮವಾರ ಕೋಣಂದೂರಿನಲ್ಲಿ ಪ್ರೌಢಶಾಲಾ ವಿಭಾಗದ ನೂತನ ಕಟ್ಟಡದ ಉದ್ಘಾಟನೆ ಮಾಡಿ ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ನಿರ್ಮಿಸಲಾದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕೋಣಂದೂರಿನಲ್ಲಿ ಪ್ರೌಢಶಾಲೆ ತೆರೆಯದಿದ್ದರೆ ನನ್ನ ಓದು 7 ನೇ ತರಗತಿಗೆ ನಿಲ್ಲುತ್ತಿತ್ತು. ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಿಂದಲೇ ನನ್ನ ಶಿಕ್ಷಣ ಪೂರೈಸಿದ್ದು.ಕೋಣಂದೂರು ಭಾಗದಲ್ಲಿ ಎಲ್ಲೂ ಪ್ರೌಢಶಾಲೆ ಇರಲಿಲ್ಲ ತೀರ್ಥಹಳ್ಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಹಳ್ಳಿ ಹಳ್ಳಿಯಲ್ಲೂ ವಿದ್ಯಾರ್ಥಿಗಳಿಗೆ ಓದಲು ರಾಷ್ಟ್ರ್ರೀಯ ಶಿಕ್ಷಣ ಸಂಸ್ಥೆ ತನ್ನ ಕೆಲಸ ಮಾಡುತ್ತಿದೆ ಎಂದರು.

ಎಲ್ಲೋ ದೂರದಲ್ಲಿ ಇರುವ ಖಾಸಗಿ ಇನ್ಸ್ಟಿಟ್ಯೂಟ್ ನಲ್ಲಿ ಓದಲು ಅವಕಾಶ ಇದ್ದರೂ ಕೆಲವರ ಬಳಿ ಹಣವಿರುವುದಿಲ್ಲ. ಹಾಗಾಗಿ ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಶಾಲೆ ಕಾಲೇಜು ತೆರೆದರೆ ಮಕ್ಕಳಿಗೂ ಹಾಗೂ ಪೋಷಕರಿಗೂ ಬಾರಿ ಅನುಕೂಲವಾಗಲಿದೆ ಎಂದರು. ಈಗ ತೀರ್ಥಹಳ್ಳಿಯ ಇನ್ಸ್ಟಿಟ್ಯೂಟ್ ಗಳಿಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ ಎಂದರೆ ಅದಕ್ಕಿಂತ ಸಂತೋಷದ ವಿಚಾರ ಮತ್ತೊಂದಿಲ್ಲ ಎಂದರು.

ಇವತ್ತು ಶಿಕ್ಷಣ ಹೊಟ್ಟೆಪಾಡಿಗಾಗಿ ಮಾಡುವ ಶಿಕ್ಷಣ ಆಗಬಾರದು, ನೂರಾರು ಜನರಿಗೆ ಉಪಯೋಗ ಆಗುವಂತಹ ಶಿಕ್ಷಣ ಆಗಬೇಕು. ಅನ್ನ ಮಾಡುವ ಕುಕ್ಕರ್ ನಲ್ಲಿ ಬಾಂಬ್ ಕೂಡ ಇಡುವುದನ್ನು ಶಿಕ್ಷಣ ಕಲಿತವರೇ ಮಾಡುತ್ತಿದ್ದಾರೆ. ಅದಕ್ಕಿಂತ ದುರದೃಷ್ಟ ಮತ್ತೊಂದಿಲ್ಲ. ಮೊಬೈಲ್ ನಲ್ಲಿ ಕಲಿಯುವಂತಹ ಎಷ್ಟೋ ಸಂಗತಿಗಳಿದ್ದರೂ ಬೇಡದ ಕೆಲಸಕ್ಕೆ ಉಪಯೋಗ ಮಾಡುತ್ತಿರುವುದು ವಿಷಾದನೀಯ ಎಂದರು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಜಿ ಎಸ್ ನಾರಾಯಣ ರಾವ್ ಅವರು ಒಳ್ಳೆಯ ಕೆಲಸ ನಿರ್ವಹಿಸುತ್ತಿದ್ದಾರೆ. ಗುಡ್ಡೆಕೊಪ್ಪದವರಿಗೆ ಅಧಿಕಾರ ಕೊಟ್ಟರೆ ಉತ್ತಮ ಕೆಲಸ ಆಗುತ್ತದೆ ಎಂದು ಹೇಳುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

Advertisement

ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಈ ಶಾಲೆ ಕಟ್ಟಡ ನೋಡಿ ಬಹಳ ಸಂತೋಷವಾಯಿತು. ನಾನು ಸಚಿವನಾಗಿದ್ದಾಗ ಎಲ್ಲಾ ಜಿಲ್ಲೆಗಳಳಿಗೂ ಭೇಟಿ ನೀಡಿದ್ದೆ ಆದರೆ ಎಲ್ಲೂ ಈ ರೀತಿಯಾದ ಕಟ್ಟಡ ನೋಡಿಲ್ಲ. ಹೊಸ ಆವಿಷ್ಕಾರದಿಂದ ಕಟ್ಟಡ ತಯಾರಿಸಿದ್ದಾರೆ ಎಂದರು.

ಶಿಕ್ಷಣದಲ್ಲಿ ಬದಲಾವಣೆ ತರಬೇಕು ಆದರೆ ಅದರ ಜೊತೆ ವಿವೇಕ ಕೂಡ ಕಲಿಯಬೇಕು. ಒಂದರಿಂದ ಪಿಯುಸಿ ಓದುವವರೆಗೂ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲೇ ಓದಬೇಕು . ಈಗ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಹಾಗಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದು ಶಾಲೆ ಇದ್ದರೆ ಸಾಕು. ಆದರೆ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದರು.

ಇನ್ನು ಶಾಲೆ, ಆಸ್ಪತ್ರೆ ಅಥವಾ ಸಮುದಾಯಭವನ ಕಟ್ಟಡ ಮಂಜೂರು ಮಾಡಿಸುವುದಕ್ಕಿಂತ ಅದರಲ್ಲಿ ಅನುಕೂಲ ಆಗುವ ರೀತಿ ಮಾಡಬೇಕು. ಉದಾಹರಣೆಗೆ ಆಸ್ಪತ್ರೆ ಕಟ್ಟಡ ಮಂಜೂರು ಮಾಡಿಸುವುದಲ್ಲ ಅಲ್ಲಿ ವೈದ್ಯರು ಇರುವ ಹಾಗೆ ಮಾಡಬೇಕು ಎಂದರು ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯ ಇಲ್ಲದಿದ್ದರೆ ಯಾವ ಕಾರಣಕ್ಕೆ ಆಸ್ಪತ್ರೆ ಬೇಕು ಎಂದರು.

ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಸಂಸತ್ ಭವನದಲ್ಲಿ ಒಂದು ವಿಷಯ ಹೇಳಿದರು. ನಮ್ಮ ದೇಶದಲ್ಲಿ 22 ಅಧಿಕೃತ ಭಾಷೆ ಇದೆ.2000 ಭಾಷೆಗಳು ಮಾತನಾಡುತ್ತಾರೆ 3000 ಕ್ಕೂ ಅಧಿಕ ಜಾತಿಗಳಿವೆ. ಆದರೆ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಮ್ಮ ಏಕತೆಗೆ ಯಾರು ಭಂಗ ತರಬಾರದು ಎಂದರು ಆ ವಿಷಯ ನನಗೆ ಸಂತೋಷ ತರಿಸಿತು ಎಂದರು.

ಈ ಸಂದರ್ಭದಲ್ಲಿ ಜಿ ಎಸ್ ನಾರಾಯಣರಾವ್, ಸಿ ಆರ್ ನಾಗರಾಜ್, ಎಸ್ ಎನ್ ನಾಗರಾಜ್, ಪಿ ನಾರಾಯಣ,ಡಿ ಜಿ ರಮೇಶ್, ಎಚ್ ಆರ್ ಶಾಂತಮ್ಮ ಗಿರಿರಾಜ್, ಲಕ್ಷ್ಮಣ್, ಚಂದ್ರಶೇಖರ್ ಸೇರಿ ನೂರಾರು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next