Advertisement

ಚಿಂಚೋಳಿಯಲ್ಲಿ ನನ್ನ ಮಗನ ಗೆಲುವು ನಿಶ್ಚಿತ

11:20 PM Apr 27, 2019 | Lakshmi GovindaRaj |

ಕಲಬುರಗಿ: ಬಂಜಾರಾ ಸಮುದಾಯದ ಮತಗಳು ವಿಭಜನೆಯಾಗುವುದಿಲ್ಲ ಎಂದು ಚಿಂಚೋಳಿ ಕ್ಷೇತ್ರದ ಮಾಜಿ ಶಾಸಕ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಗನಿಗೆ ಟಿಕೆಟ್‌ ಕೊಟ್ಟರೆ ತಮ್ಮಂತೆ ಗೆಲ್ಲಿಸುವುದಾಗಿ ಚಿಂಚೋಳಿ ಮತಕ್ಷೇತ್ರದ ಜನರು ಹೇಳಿರುವುದರಿಂದ ಬಿಜೆಪಿ ಟಿಕೆಟ್‌ ನೀಡಿದೆ. ಅಣ್ಣನಿಗೆ ಆರೋಗ್ಯ ಸರಿಯಾಗಿಲ್ಲದ ಕಾರಣ ಹಾಗೂ ಕ್ಷೇತ್ರದ ಜನಾಭಿಪ್ರಾಯದ ಮೇರೆಗೆ ಪಕ್ಷದ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಮಗನಿಗೆ ರಾಜಕೀಯಕ್ಕೆ ತರಲು ಮನಸ್ಸಿಲ್ಲವಾದರೂ ಪಕ್ಷದವರ ಅಭಿಲಾಷೆ ಹಾಗೂ ಕ್ಷೇತ್ರದ ಜನರ ಅಪೇಕ್ಷೆ ಮೇರೆಗೆ ಟಿಕೆಟ್‌ ದೊರಕಿದೆ ಎಂದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಗೆ ನಿಲ್ಲುವ ಮೂಲಕ ರಿಸ್ಕ್ ತೆಗೆದುಕೊಂಡಿದ್ದರೆ, ಈಗ ಮಗನನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಮತ್ತೂಂದು ರಿಸ್ಕ್ ತೆಗೆದುಕೊಂಡಿದ್ದೇನೆ. ಪುತ್ರನನ್ನು ವೈದ್ಯಕೀಯ ಕ್ಷೇತ್ರದಿಂದ ಬಿಡಿಸಿ ರಾಜಕೀಯಕ್ಕೆ ತರುವ ಉದ್ದೇಶವಿರಲಿಲ್ಲ. ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದೆ. ಈಗ ಎಂಡಿ ಮುಗಿಸಬೇಕಾಗಿದ್ದರೂ ರಾಜಕೀಯಕ್ಕೆ ಅನಿವಾರ್ಯ ಹಾಗೂ ಆಕಸ್ಮಿಕವಾಗಿ ತರಲಾಗಿದೆ.

ತಮ್ಮಂತೆ ಸಾಮಾಜಿಕ ಸೇವೆ ಮುಂದುವರಿಸಬೇಕಿದ್ದರಿಂದ ಈ ದೃಢ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನರ ಆಶೀರ್ವಾದ-ವಿಶ್ವಾಸ ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ಜನರ ಬೆಂಬಲ ಇಲ್ಲವೆಂದಾದಾಗ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದರು.

ಶಾಸಕನಾಗಿ ತಾವು ಮಾಡಿದ ಕೆಲಸಗಳು ಹಾಗೂ ಜನರ ಕಷ್ಟ-ನೋವುಗಳಿಗೆ ಸದಾ ಸ್ಪಂದಿಸಿರುವುದರಿಂದ, ಜತೆಗೆ ತಮ್ಮ ಕುಟುಂಬ ರಾಜಕೀಯ ಉದ್ದೇಶಕ್ಕಾಗಿ ಕೆಲಸ ಮಾಡದೆ, ಸಮಾಜ ಸೇವಾ ಮನೋಭಾವ ಹೊಂದಿದ್ದರಿಂದ ಯಾವುದೇ ಕಾರಣಕ್ಕೂ ಮತಗಳು ವಿಭಜನೆಯಾಗಲ್ಲ. ಕಾಂಗ್ರೆಸ್‌ ಅಭ್ಯರ್ಥಿಯೇ ಹೊರಗಿನವರಾಗಿದ್ದರಿಂದ ತಮಗೆ ಜನ ಬೆಂಬಲದ ಕೊರತೆಯಾಗದು. ಚುನಾವಣೆಯಲ್ಲಿ ತಮ್ಮ ಮಗ ಗೆಲ್ಲುವ ದೃಢ ವಿಶ್ವಾಸವಿದೆ ಎಂದು ಹೇಳಿದರು.

Advertisement

ಪುತ್ರ ವ್ಯಾಮೋಹ ಟೀಕಿಸಿಲ್ಲ: ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪುತ್ರ ವ್ಯಾಮೋಹ ಕುರಿತಾಗಿ ಟೀಕಿಸಿಲ್ಲ. ಆದರೆ, ಹಿರಿಯರನ್ನು ಕಡೆಗಣಿಸಿ ಸಚಿವರನ್ನಾಗಿ ಮಾಡಲಾಗಿದೆ ಎಂದು ಟೀಕಿಸಿದ್ದೇನೆ. ಪ್ರಮುಖ ಖಾತೆಯ ಸಚಿವ ಸ್ಥಾನವಲ್ಲದೆ 371ನೇ (ಜೆ) ಕಾರ್ಯಾನುಷ್ಠಾನದ ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷ ಸ್ಥಾನ, ಜಿಲ್ಲಾ ಉಸ್ತುವಾರಿ ಸೇರಿ ಒಂದೆಡೆ ಮಾತ್ರ ಅಧಿಕಾರ ಕೇಂದ್ರೀಕೃತವಾಗಿದ್ದರ ಬಗ್ಗೆ ಟೀಕಿಸಿದ್ದೇನೆ.

ಸಿದ್ದರಾಮಯ್ಯ ಅವರು ತಮ್ಮ ಮಗನನ್ನು ಹಾಗೂ ಪ್ರಕಾಶ ಹುಕ್ಕೇರಿ ತಮ್ಮ ಪುತ್ರನನ್ನು ರಾಜಕೀಯಕ್ಕೆ ತಂದಿರುವ ಬಗ್ಗೆ ಎಲ್ಲೂ ಚಕಾರವೆತ್ತಿಲ್ಲ. ಆದರೆ, ಇಲ್ಲಿ ಖರ್ಗೆ ಅವರು ತಮ್ಮ ಬಳಿಯೇ ಅಧಿಕಾರ ಇಟ್ಟುಕೊಳ್ಳುವಂತೆ ನೋಡಿಕೊಂಡಿದ್ದನ್ನು ಟೀಕಿಸಿದ್ದೇನೆ. ಅದನ್ನು ಬಿಟ್ಟರೆ ಪುತ್ರ ವ್ಯಾಮೋಹ ಬಗ್ಗೆ ಚಕಾರವೆತ್ತಿಲ್ಲ ಎಂದು ಉಮೇಶ ಜಾಧವ ಹೇಳಿದರು.

ಟಿಕೆಟ್‌ ತಪ್ಪಿದ್ದಕ್ಕೆ ಬೇಸರವಿಲ್ಲ: ಡಾ| ಜಾಧವ ಸಹೋದರ ರಾಮವಂದ್ರ ಜಾಧವ ಮಾತನಾಡಿ, ಟಿಕೆಟ್‌ ಕೈ ತಪ್ಪಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ತಾನೇ ಸಂತೋಷದಿಂದ ಟಿಕೆಟ್‌ ಬೇಡ ಎಂದು ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದೆ. ಹೀಗಾಗಿ, ಸಹೋದರನ ಮಗನಿಗೆ ಟಿಕೆಟ್‌ ದೊರಕಿದೆ. ಇದಕ್ಕೆ ತಮಗೆ ಎಳ್ಳಷ್ಟು ಬೇಸರವಿಲ್ಲ. ಸಹೋದರನಿಗೆ ಬೆಂಬಲ ನೀಡಿದಂತೆ ಮಗನಿಗೂ ಬೆಂಬಲ ನೀಡುತ್ತೇನೆ ಎಂದರು.

ಹೊಸ ಪರೀಕ್ಷೆಗೆ ತಯಾರಿ: ಚಿಂಚೋಳಿ ಬಿಜೆಪಿ ಅಭ್ಯರ್ಥಿ ಡಾ| ಅವಿನಾಶ ಉಮೇಶ ಜಾಧವ ಮಾತನಾಡಿ, ಇದೇ ಮೇ 8ರಂದು ಎಂಡಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದರೆ, ಅನಿವಾರ್ಯವಾಗಿ ಹಾಗೂ ಆಕಸ್ಮಿಕವಾಗಿ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ. ಈಗ ಹೊಸ ಪರೀಕ್ಷೆಗೆ ತಯಾರಾಗುತ್ತೇನೆ. ನಾನು ರಾಜಕೀಯ ಮಾಡಿದವನಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ತಂದೆ ಪರ ಕೆಲಸ ಮಾಡಿದ ಅನುಭವ ಇದೆ ಎಂದರು.

ಚಿಂಚೋಳಿ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಈ ಹಿಂದೆ ಹೇಳಿದ್ದರು. ಬಾಯಿ ಮಾತಲ್ಲಿ ಹೇಳಿದ್ದನ್ನು ಕೃತಿಯಲ್ಲಿ ಮಾಡಿ ತೋರಿಸಲು ದತ್ತು ತೆಗೆದುಕೊಳ್ಳುವ ನಿಟ್ಟಿನಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ. ನಾವಂತೂ ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಒಂದು ವರ್ಷದ ಅವಧಿಯಲ್ಲಿ ಒಂದೇ ಸಲ ಕೆಡಿಪಿ ಸಭೆ ನಡೆಸಿದ್ದನ್ನು ನೋಡಿದರೆ ಇವರಿಗೆ ಅಭಿವೃದ್ಧಿ ಪರ ಕಾಳಜಿ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ.
-ಡಾ| ಉಮೇಶ ಜಾಧವ, ಮಾಜಿ ಶಾಸಕರು, ಚಿಂಚೋಳಿ

ವೈದ್ಯಕೀಯ ಕ್ಷೇತ್ರದಲ್ಲೇ ಮುಂದುವರಿಯಬೇಕೆಂದು ನಿರ್ಧರಿಸಿದ್ದೆ. ಆದರೆ, ಮನೆಯವರೆಲ್ಲರ ಅದರಲ್ಲೂ, ಚಿಂಚೋಳಿ ಕ್ಷೇತ್ರದ ಜನರು ತಾವು ಸಾಮಾಜಿಕ ಸೇವಾ ಮನೋಭಾವ ಹೊಂದಿದ್ದರಿಂದ ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸಿದ್ದರಿಂದ ಚುನಾವಣೆಗೆ ಧುಮುಕಿದ್ದೇನೆ. ವೈದ್ಯಕೀಯ ಕ್ಷೇತ್ರದಂತೆ ರಾಜಕೀಯ ಕ್ಷೇತ್ರದಲ್ಲೂ ಹಗಲಿರುಳು ಸಮಾಜ ಸೇವೆ ಮೈಗೂಡಿಸಿಕೊಳ್ಳುವೆ.
-ಡಾ| ಅವಿನಾಶ ಯು. ಜಾಧವ, ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.

ಟಿಕೆಟ್‌ ವಿಷಯದಲ್ಲಿ ನಮ್ಮ ಕುಟುಂಬದಲ್ಲಿ ಯಾವುದೇ ಗೊಂದಲ-ಅಸಮಾಧಾನ ಇಲ್ಲವೇ ಇಲ್ಲ. ನನಗೆ ಅನಾರೋಗ್ಯ ಇರುವ ಹಿನ್ನೆಲೆಯಲ್ಲಿ ಖುಷಿಯಿಂದ ಹಿಂದೆ ಸರಿದಿರುವೆ. ಸಹೋದರನಿಗೆ ರಾಜಕೀಯದಲ್ಲಿ ಕೈಗೂಡಿಸಿರುವಂತೆ ಈಗ ಮಗನಿಗೂ ಸಹಾಯ ಮಾಡುವೆ.
-ರಾಮಚಂದ್ರ ಜಾಧವ (ಡಾ| ಉಮೇಶ ಜಾಧವ ಸಹೋದರ).

Advertisement

Udayavani is now on Telegram. Click here to join our channel and stay updated with the latest news.

Next