Advertisement

ಮಗನನ್ನು ಟೀಕಿಸಲಿ ಅಭ್ಯಂತರ ಇಲ್ಲ ಎಂದ ನೊಬೆಲ್‌ ಪುರಸ್ಕೃತ ಅಭಿಜಿತ್‌ ತಾಯಿ

09:55 AM Oct 22, 2019 | Team Udayavani |

ಕೊಲ್ಕೊತ್ತಾ: ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪುರಸ್ಕಾರ ಪಡೆದ ಅಭಿಜಿತ್‌ ಬ್ಯಾನರ್ಜಿ ಅವರನ್ನು ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಸೇರಿದಂತೆ ಬಿಜೆಪಿ ಹಲವು ನಾಯಕರು ಟೀಕಿಸಿದ್ದಾರೆ. ಆದರೆ ಬಹುತೇಕ ಗಣ್ಯರು ಭಾರತಕ್ಕೆ ಮತ್ತೊಂದು ನೊಬೆಲ್‌ ಪುರಸ್ಕಾರವನ್ನು ತಂದ ಅಭಿಜಿತ್‌ ಅವರನ್ನು ಅಭಿನಂಧಿಸಿದ್ದಾರೆ. ಈಗ ಅಭಿಜಿತ್‌ ಅವರ ಪರ ವಿರೋಧಗಳು ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ.

Advertisement

ತಮ್ಮ ಮಗನ ಸಾಧನೆಯನ್ನು ಅಭಿನಂದಿಸುವ ಬದಲು ಟೀಕಿಸುತ್ತಿರುವ ಹಲವು ನಾಯಕರ ಕುರಿತು ಅಭಿಜಿತ್‌ ತಾಯಿ ನಿರ್ಮಲಾ ಬ್ಯಾನರ್ಜಿ ಅವರು ಮಾತನಾಡಿದ್ದಾರೆ. ನನ್ನ ಮಗ ನೊಬೆಲ್‌ ಪುರಸ್ಕಾರ ಪಡೆದುಕೊಂಡ ಮಾತ್ರಕ್ಕೆ ಅವನನ್ನು ಯಾರೂ ಟೀಕಿಸಬಾರದು ಎಂದು ನಾನು ಅಪೇಕ್ಷಿಸುವುದಿಲ್ಲ. ಟೀಕಾಕಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ ಕುಟುಂಬ ಅಡ್ಡಿ ಬರುವುದಿಲ್ಲ. ಆದರೆ ಟೀಕೆ ಮಾಡುವ ಜತೆಗೆ ಅವನು ಮಾಡಿರುವ ಸಾಧನೆಯನ್ನು ಅಭಿನಂದಿಸಲು ಅವರು ಕಲಿಯಬೇಕು ಎಂದು ಹೇಳಿದ್ದಾರೆ.

ಯಾರ ಹೆಸರನ್ನೂ ಉಲ್ಲೇಖೀಸದೇ ಮಾತನಾಡಿರುವ ಅವರು, ‘ನಾನು ಯಾರ ಟೀಕೆಗೂ ಉತ್ತರಿಸಲು ಇಚ್ಚಿಸುವುದಿಲ್ಲ. ಅವರ ಟೀಕೆಗಳು ನೊಬೆಲ್‌ ಪುರಸ್ಕಾರ ಪಡೆದ ಅಭಿಜಿತ್‌ ಅವರ ಸಾಧನೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಟೀಕಾಕಾರರು ಅಭಿಜಿತ್‌ ಅವರ ಖಾಸಗಿ ಬದುಕು ಮೇಲೆ ಮಾತನಾಡುತ್ತಿದ್ದಾರೆ, ಮಾತನಾಡಲಿ ಅವರಿಗೆ ಹಕ್ಕು ಇದೆ’ ಎಂದಿದ್ದಾರೆ.

ಇತ್ತೀಚೆಗೆ ಮಾತನಾಡಿರುವ ಕೇಂದ್ರ ಸಚಿವ ಪಿಯೂಶ್‌ ಗೋಯಲ್‌ ಅಭಿಜಿತ್‌ ಬ್ಯಾನರ್ಜಿ ಅವರೊಬ್ಬ ಎಡಪಂಥೀಯ ಚಿಂತನೆಯಳ್ಳ ವ್ಯಕ್ತಿ. ಅವರ ನ್ಯಾಯ್‌ ಯೋಜನೆಯನ್ನು ಜನ ತಿರಸ್ಕರಿಸಿದ್ದಾರೆ. ಅವರ ಚಿಂತನೆಗಳು ಮತ್ತು ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರದ ಕೆಲವು ವಿತ್ತೀಯ ಸುಧಾರಣೆಗಳು ಫ‌ಲಕೊಡುವುದು ಅನುಮಾನ ಎಂದು ಅಭಿಜಿತ್‌ ಅವರು ನೋಟ್‌ ಬ್ಯಾನ್‌ ಬಳಿಕ ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next