Advertisement

ಸಾಯಲು ಯೋಚಿಸಿದ್ದನಂತೆ ನನ್ನ ಮಗ!

10:37 AM Nov 18, 2017 | |

ಕೆಲವೊಮ್ಮೆ ಮಕ್ಕಳು ಬಹಳ ಕ್ರೂರಿಗಳಾಗಿ ಬಿಡಬಲ್ಲರು. ಇನ್ನೊಬ್ಬರಿಗೆ ತಾವು ಯಾವ ಮಟ್ಟದಲ್ಲಿ ನೋವು ಕೊಡಬಲ್ಲೆವು ಎನ್ನುವುದು ಬಹುಶಃ ಅವರಿಗೂ ಗೊತ್ತಿರುವುದಿಲ್ಲ. ಆದರೆ ದೊಡ್ಡವರು ಇದನ್ನೆಲ್ಲ ನೋಡಿಕೊಂಡು ಸುಮ್ಮನೇ ಕೂರಲಿಕ್ಕಾಗುವುದಿಲ್ಲವಲ್ಲ?

Advertisement

“ನಾನು 6ನೇ ಕ್ಲಾಸಲ್ಲಿದ್ದಾಗ ಸೂಸೈಡ್‌ ಮಾಡ್ಕೊಬೇಕು ಅಂದೊಡಿದ್ದೆ’ ರಾತ್ರಿ ಡಿನ್ನರ್‌ ಟೇಬಲ್‌ ಮೇಲೆ ನನ್ನ 15 ವರ್ಷದ ಮಗ ಆಡಿದ ಈ ಮಾತು ಕೇಳಿ ಜಗತ್ತೇ ನಿಂತುಹೋದಂತಾಯಿತು.  ನಾನು “ಯಾಕೋ? ಏನಾಯ್ತು?’ ಎಂದು ಗಾಬರಿಯಿಂದ ಪ್ರತಿಕ್ರಿಯಿಸದೇ ಭಾವನೆಗಳನ್ನು ಹಿಡಿತಕ್ಕೆ ತಂದುಕೊಂಡು ಶಾಂತವಾಗಿ ಕೇಳಿದೆ: “”ಹೌದಾ, ಯಾಕೆ?” “”ಅರೆ ಅಮ್ಮ, ನಿನಗೆ ನೆನಪಿದೇನಾ? ಆಗ ನಾನು ತುಂಬಾ ಕುಳ್ಳಗಿದ್ದೆ, ತೆಳ್ಳಗಿದ್ದೆ. ಕ್ಲಾಸ್‌ಮೇಟ್ಸ್‌ ಎಲ್ಲ ನನ್ನನ್ನ ಹೀಯಾಳಿಸ್ತಿದ್ರಲ್ಲ. ಅದಕ್ಕೇ ಬೇಜಾರಾಗ್ತಿತ್ತು. ಸತ್ತುಹೋಗಬೇಕು ಅನ್ಕೊಂಡಿದ್ದೆ”. ಕೂಡಲೇ ನನಗೆ ಆ ದಿನಗಳು ತಟಕ್ಕನೆ ನೆನಪಿಗೆ ಬಂದವು. ನಾವು ಅದನ್ನೆಲ್ಲ ಮರೆತೇಬಿಟ್ಟಿದ್ದೆವು. ಆದರೆ ನೋವನುಭವಿಸಿದವರಿಗೆ ನೆನಪು ಅಷ್ಟು ಸುಲಭವಾಗಿ ಮಾಸದಲ್ಲ? 

ಈಗ ನನ್ನ ಮಗ ಎತ್ತರಕ್ಕೆ ಬೆಳೆದಿದ್ದಾನೆ, ಶಾಲೆಯಲ್ಲಿ ಫೇಮಸ್ಸೂ ಆಗಿದ್ದಾನೆ. ಹೀಗಾಗಿ ಅನೇಕ ಗೆಳೆಯರು ಅವನಿಗಿದ್ದಾರೆ. ಆದರೆ ಮೊದಲು ಅವನು ಹಾಗಿರಲೇ ಇಲ್ಲ. ಅವನು ತನ್ನ ವಯಸ್ಸಿಗೆ ತಕ್ಕಂತೆ ಬೆಳವಣಿಗೆಯಾಗಲು ಹಲವು ವರ್ಷಗಳೇ ಹಿಡಿದಿದ್ದವು. ಅವನ ಕ್ಲಾಸ್‌ಮೇಟ್‌ಗಳೆಲ್ಲ ವಯಸ್ಸಿಗೆ ತಕ್ಕಂತೆ ಬೆಳೆದರೆ, ಇವನು ಮಾತ್ರ ಕುಳ್ಳಗೆ, ತೆಳ್ಳಗೆ ಇದ್ದ. 

ಇದರ ಪರಿಣಾಮವಾಗಿ, ಹದಿಹರೆಯಕ್ಕೆ ಕಾಲಿಡುವವರೆಗೂ ನಿರಂತರವಾಗಿ ಅವನು ಸಹಪಾಠಿಗಳಿಂದ ಕಾಟ ಅನುಭವಿಸ ಬೇಕಾಯಿತು. ಅವನನ್ನು ಕೆಳಕ್ಕೆ ತಳ್ಳುತ್ತಿದ್ದರು, ಹೊಡೆಯುತ್ತಿದ್ದರು, ಪಿಡ್ಡಿ(ದುರ್ಬಲ) ಎಂದು ಹಂಗಿಸುತ್ತಿದ್ದರು ಮತ್ತು ಎಲ್ಲಾ ಗ್ರೂಪ್‌ಗ್ಳಿಂದಲೂ ಹೊರಗಿಡಲಾಗಿತ್ತು. ಇದಕ್ಕೆಲ್ಲ ಬೇರೇನೂ ಕಾರಣವಿರ ಲಿಲ್ಲ, ಕಾರಣವಾಗಿದ್ದು ಒಂದೇ ಒಂದು ಅಂಶ, ಅವನು ನೋಡು ವುದಕ್ಕೆ ಎಲ್ಲರಿಗಿಂತ ಭಿನ್ನವಾಗಿದ್ದ. 

ಇದೆಲ್ಲದರಿಂದಾಗಿ ಅವನು ಅಂತರ್ಮುಖೀಯಾದ. ಒಬ್ಬನೇ ಇರಲಾರಂಭಿಸಿದ, ಸ್ಕೂಲ್‌ ಟ್ರಿಪ್‌ಗ್ಳು ಮತ್ತು ಪಾರ್ಟಿಗಳಿಂದ ದೂರವೇ ಉಳಿಯತೊಡಗಿದ. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ, ಅವನು ಚಿಕ್ಕ ಮಗುವಿನಂತೆ ವರ್ತಿಸಲಾರಂಭಿಸಿದ. ಬಹುಶಃ ಎಲ್ಲರೂ ಸಮನಾಗಿದ್ದ ಆ ಚಿಕ್ಕ ವಯಸ್ಸಿಗೆ ಹಿಂದಿರುಗಲು ಅವನು ಬಯಸಿದ್ದನೇನೋ? 

Advertisement

ಮೊದ ಮೊದಲಿಗೆ ನಾವೆಲ್ಲ ಇದೊಂದು ಹಂತವಷ್ಟೇ; ಬೇಗ ಮುಗಿದುಹೋಗುತ್ತದೆ ಎಂದು ಭಾವಿಸಿದ್ದೆವು. ಪರಿಣತರ ಬಳಿ ಕರೆದೊಯ್ದು, ಅವನಿಗೆ ಏನಾದರೂ ತೊಂದರೆಯಿದೆಯೇ  ಎಂದು ಪರೀಕ್ಷಿಸಿದೆವು. ದೇವರ ದಯೆಯಿಂದ ನಮಗೆ ಒಳ್ಳೆಯ ಡಾಕ್ಟರ್‌ಗಳು ಮತ್ತು ಆಪ್ತಸಮಾಲೋಚಕರು ಸಿಕ್ಕರು. ಎಲ್ಲರೂ ಹೇಳಿದ್ದು ಒಂದೇ ಮಾತು -“”ತಲೆ ಕೆಡಿಸಿಕೊಳ್ಳಬೇಡಿ. ಎಲ್ಲವೂ ಸರಿಯಾಗುತ್ತೆ. ಜಸ್ಟ್‌ ಅವನ ಮೇಲೆ ಒಂದು ಕಣ್ಣಿಟ್ಟಿರಿ ಮತ್ತು ಸಪೋರ್ಟಿವ್‌ ಆಗಿರಿ”.

ಆದರೆ ಇಷ್ಟು ಸಾಕಾಗಲಿಲ್ಲ, ಏಕೆಂದರೆ ಶಾಲೆಯಲ್ಲಿ ಪರಿಸ್ಥಿತಿ ಸುಧಾರಿಸಲೇ ಇಲ್ಲ. ಇದೆಲ್ಲದರಿಂದ ರೋಸಿಹೋದ ನನ್ನ ಪತಿ ಕೊನೆಗೆ ಈ ವಿಷಯವನ್ನು ಶಾಲೆಯ ಪ್ರಿನ್ಸಿಪಾಲ್‌ ಮತ್ತು ಶಿಕ್ಷಕಕ ಹತ್ತಿರ ಒಯ್ದರು. ಏನಾದರೂ ಮಾಡಲೇಬೇಕಿತ್ತಲ್ಲ? ಏಕೆಂದರೆ ಕೆಲವೊಮ್ಮೆ ಮಕ್ಕಳು ಬಹಳ ಕ್ರೂರಿಗಳಾಗಿಬಿಡಬಲ್ಲರು. ಇನ್ನೊಬ್ಬರಿಗೆ ತಾವು ಯಾವ ಮಟ್ಟದಲ್ಲಿ ನೋವು ಕೊಡಬಲ್ಲೆವು ಎನ್ನುವುದು ಬಹುಶಃ ಅವರಿಗೂ ಗೊತ್ತಿರುವುದಿಲ್ಲ. ಆದರೆ ದೊಡ್ಡವರು ಇದನ್ನೆಲ್ಲ ನೋಡಿಕೊಂಡು ಸುಮ್ಮನೇ ಕೂರಲಿಕ್ಕಾಗುವುದಿಲ್ಲವಲ್ಲ?
ಈ ವಿಷಯದಲ್ಲಿ ನಾವು ಲಕ್ಕಿ ಆಗಿದ್ದೆವು ಎಂದೇ ಹೇಳಬೇಕು. ಪ್ರಿನ್ಸಿಪಾಲ್‌ ಮತ್ತು ಟೀಚರ್‌ಗಳು ನಮ್ಮ ಬೆಂಬಲಕ್ಕೆ ಬಂದರು. ಮಗನ ಕ್ಲಾಸ್‌ಮೇಟ್ಸ್‌ಗಳ ಜೊತೆ ಮಾತನಾಡಿ, ಹೇಗೆ ಈ ಹೀಯಾಳಿಕೆಯಿಂದ ಅವನು ಕುಗ್ಗಿಹೋಗುತ್ತಿದ್ದಾನೆ ಎನ್ನುವುದನ್ನು ವಿವರಿಸಿದರು. ಅಲ್ಲದೇ ಅವನನ್ನು ಇನ್ನಷ್ಟು ಬಹಿರ್ಮುಖೀಯಾಗಿ ಸಲು ಪ್ರಯತ್ನಿಸಿದರು. 

ಇದೆಲ್ಲ ನಡೆದು ನಾಲ್ಕು ವರ್ಷಗಳಾಗಿವೆ. ನಮಗೆ ಈ ಎಲ್ಲಾ ಘಟನೆಗಳು ದೂರದ ನೆನಪಾಗಿದ್ದವು. ಆದರೆ ಅವನಿಗಲ್ಲ. ಈಗಲೂ ಅವನು ತನ್ನ ದೇಹದ ಬಗ್ಗೆ ಬಹಳ ಕಾನ್ಶಿಯಸ್‌ ಆಗಿರುತ್ತಾನೆ. ಅವನು ಜಾಗಿಂಗ್‌ ಮತ್ತು ಜಿಮ್‌ಗೆ ಹೋಗುವುದನ್ನು ನೋಡಿ ನಮಗೆ ಈ ಅನುಮಾನ ಬಂದಿರಲೇ ಇಲ್ಲ. ಈಗ ಅರ್ಥವಾಗುತ್ತಿದೆ, ಮತ್ತೂಮ್ಮೆ “ದುರ್ಬಲ’ ಎನಿಸಿಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ಅವನು ತನ್ನ ದೇಹವನ್ನು ದಂಡಿಸುತ್ತಿದ್ದಾನೆ. ಇಷ್ಟೇ ಅಲ್ಲ ತನಗಿಂತ ಕಿರಿಯರ ವಿಷಯದಲ್ಲೂ ಅವನು ಬಹಳ ಕಾಳಜಿ ಬೆಳೆಸಿಕೊಂಡಿ ದ್ದಾನೆ. ತಾನೆದುರಿಸಿದಂಥ ಪರಿಸ್ಥಿತಿ ಅವರಿಗೆ ಬರದಿರಲಿ ಎಂದು ಹೀಗೆ ಮಾಡುತ್ತಿರಬಹುದು. 

ಆದರೆ ಒಂದು ವಿಷಯ ನನ್ನ ತಲೆ ಕೊರೆಯುತ್ತಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಅದ್ಹೇಗೆ ದೇಹದ ಬಗ್ಗೆ ಮಾತನಾಡುವು
ದನ್ನು ಕಲಿಯುತ್ತವೆ? ನನ್ನ ಗೆಳೆತಿಯೊಬ್ಬಳ ಮಗಳಿಗೀಗ 12  ವರ್ಷ. ಆಕೆಯನ್ನು ಸಹಪಾಠಿಗಳು ವಿಪರೀತ ಹೀಯಾಳಿಸುತ್ತಾ ರಂತೆ. ಈಗ ಆ ಹುಡುಗಿ ತಾನು ಬಹಳ ಅಸಹ್ಯವಾಗಿದ್ದೇನೆ ಎಂದು ಕೊರಗುತ್ತಿದ್ದಾಳೆ. 

ಇದು ಯಾವ ಮಟ್ಟಕ್ಕೆ ಹೋಯಿತೆಂದರೆ ನನ್ನ ಗೆಳತಿ ಕೂಡಲೇ ಮಗಳನ್ನು ಆ ಶಾಲೆಯಿಂದ ಹೊರತಂದಳು. ಒಂದು ತರಗತಿಯಲ್ಲಿ 10-15 ವಿದ್ಯಾರ್ಥಿಗಳಷ್ಟೇ ಇರುವ ಹೊಸ ಶಾಲೆಯಲ್ಲಿ ಅವಳನ್ನೀಗ ಸೇರಿಸಿದ್ದಾಳೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರೆ ಶಿಕ್ಷಕರು ಅವರ ಮೇಲೆ ನಿಗಾ ಇಟ್ಟಿರುತ್ತಾರೆ ಎನ್ನುವ ಕಾರಣಕ್ಕೆ. 

ನಾನೂ ಆ ಹುಡುಗಿಗೆ ಕಾನ್ಸೆಲಿಂಗ್‌ ಕೊಟ್ಟಿದ್ದೇನೆ. “ಬಾಹ್ಯ ಸೌಂದರ್ಯವೇ ಎಲ್ಲವೂ ಅಲ್ಲ, ಮನಸ್ಸು ಸುಂದರವಾಗಿರುವುದೇ ಎಲ್ಲಕ್ಕಿಂತ ಮುಖ್ಯ’ ಎನ್ನುವುದನ್ನು ವಿವರಿಸಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ “ಸೌಂದರ್ಯದ ಬಗ್ಗೆ ಚಿಂತಿಬೇಡ, ನೀನಿನ್ನೂ ಚಿಕ್ಕವಳು, ಈ ಬಾಲ್ಯವನ್ನು ಎಂಜಾಯ್‌ ಮಾಡು’ ಎಂದು ಹುರಿದುಂಬಿಸಿದ್ದೇನೆ. 

ಯಾವ ವಯಸ್ಸಿನಲ್ಲಿ ಬಣ್ಣ, ಅಳತೆ, ಎತ್ತರ ನಮ್ಮ ಪ್ರಜ್ಞೆಯಲ್ಲಿ ಜಾಗವನ್ನೂ ಪಡೆದಿರಬಾರದೋ, ಅಂಥ ಚಿಕ್ಕ ವಯಸ್ಸಿನಲ್ಲೇ 
ಮಕ್ಕಳ ಮನಸ್ಸುಗಳು ಕಲ್ಮಶವಾಗತೊಡಗಿವೆ. ಕಿಮ್‌ ಕರ್ದಾಶಿಯನ್‌(ರಿಯಾಲಿಟಿ ಶೋ ತಾರೆ) ಮತ್ತು ಕಡಿದಾದ ಮೈಮಾಟ
ವನ್ನು ಇನ್ಸ್‌ಟಾಗ್ರಾಂನಲ್ಲಿ ಕ್ಷಣಕ್ಷಣಕ್ಕೂ ಅಪ್ಲೋಡ್‌ ಮಾಡುವ  ಸ್ಟಾರ್‌ಗಳ ಈ ಜಗತ್ತಿನಲ್ಲಿ ಬೆಳೆಯುವುದು ಮೊದಲಿಗಿಂತ 
ಬಹಳ ಕಷ್ಟದ ಕೆಲಸ. ಈ ವಿಷಯ ನಮಗೆ ಗೊತ್ತಾಗುತ್ತಿಲ್ಲ. ಆದರೆ ಇಂದಿನ ಮಕ್ಕಳು ಇಂಥ ಅನೇಕ ಒತ್ತಡಗಳ ನಡುವೆ ಬೆಳೆಯಲಾರಂಭಿಸಿದ್ದಾರೆ. 

ಈಗಂತೂ ಎಲ್ಲವೂ ಪಫೆìಕ್ಟ್ ಆಗಿರಬೇಕು. ಯಾವುದೇ ವಸ್ತುವಿರಲಿ ಅದು ಬ್ರಾಂಡೆಂಡ್‌ ಆಗಿರಬೇಕು ಎನ್ನುತ್ತಾರೆ ನನ್ನ ಮಕ್ಕಳು. “”ಅಯ್ಯೋ ಅಮ್ಮ, ಈಗಿನ ಕಾಲದಲ್ಲಿ ಲಿಬರ್ಟಿ ಅಥವಾ ಬಾಟಾ ಶೂಸ್‌ ಯಾರು ಹಾಕ್ಕೊಳ್ತಾರೆ?” ಎಂಬ ಪ್ರಶ್ನೆ ತೂರಿ ಬಿಡುತ್ತಾರೆ. ದೆಹಲಿಯ ಉಪನಗರವೊಂದರ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದ ಈ 8 ಅಥವಾ 10ನೇ ತರಗತಿಯ ಮಕ್ಕಳು ಅದ್ಹೇಗೆ ಬ್ರಾಡ್‌ಗಳ ಬಗ್ಗೆ ಮಾತನಾಡುವುದನ್ನು ಕಲಿತವು? ಎಲ್ಲಿ ಕಲಿತವು?  ನಾವು ಬೆಳೆಯುವ ಸಮಯದಲ್ಲಿ ಹೀಗಿರಲಿಲ್ಲ. ಆಗೆಲ್ಲ ನಾವು ಹೇಗೆ ಕಾಣಿಸುತ್ತೇವೆ, ಏನು ಧರಿಸುತ್ತೇವೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಅಪ್ಪ-ಅಮ್ಮ ಏನು ತಂದು ಕೊಡುತ್ತಿದ್ದರೋ ಅದನ್ನೇ ಹಾಕಿಕೊಳ್ಳುತ್ತಿದ್ದೆವು. ನಾವು ಆಗ ಸ್ನೀಕರ್ಸ್‌ ಅಥವಾ ಸ್ಟಡ್ಸ್‌ ಧರಿಸುತ್ತಿರಲಿಲ್ಲ, ಹೆಚ್ಚೆಂದರೆ ಬಿಳಿಯ ನ್ಪೋರ್ಟ್ಸ್ ಶೂಸ್‌ ಮಾತ್ರ ಇರುತ್ತಿತ್ತು. ಅದರ ಲೇಸ್‌ ಕಟ್ಟಿಕೊಂಡು ಶಾಲೆಯತ್ತ ಹೊರಟೆವೆಂದರೆ ನಮ್ಮ ಗಮನವೆಲ್ಲ ಇರುತ್ತಿದ್ದದ್ದು ಯಾರು ಹೋಮ್‌ವರ್ಕ್‌ ಮಾಡಿದ್ದಾರೆ, ಯಾರು ಆಟವಾಡು ವುದಕ್ಕೆ ಫ್ರೀ ಆಗಿದ್ದಾರೆ ಎನ್ನುವುದರ ಬಗ್ಗೆಯಷ್ಟೆ. 

ಈಗ ಮಕ್ಕಳ ಆಟದ ಸಮಯವೆಂದರೆ ಇನ್ಸ್‌ಟಾಗ್ರಾಂ, ಹೌಸ್‌ ಪಾರ್ಟಿ ಅಥವಾ ಇನ್ಯಾವುದೋ ಸಾಮಾಜಿಕ ಮಾಧ್ಯಮದ ಚಾಟ್‌ ರೂಂ ಅಷ್ಟೇ ಆಗಿ ಹೋಗಿದೆ. ಎಲ್ಲ ಮಕ್ಕಳ ಕೈಯಲ್ಲೂ ಮೊಬೈಲ್‌ಗ‌ಳು. ಅವರ ಸಂವಹನವೆಲ್ಲ ಮೀಮ್‌-ಎಮೋಜಿಗಳನ್ನು ಫಾರ್ವರ್ಡ್‌ ಮಾಡುವುದಕ್ಕೆ ಸೀಮಿತವಾಗಿದೆ. ಯಾವುದೇ ಮಕ್ಕಳೂ ಈಗ ಕಾಲೋನಿಗಳಲ್ಲಿ ಗೆಳೆಯರನ್ನು ಹುಡುಕಿಕೊಂಡು ಓಡಾಡುತ್ತಿಲ್ಲ. ಹೊರ ಬಂದರೂ ಅವರಿಗೆ ಗೆಳೆಯರು ಬೇಕಿಲ್ಲ, ಕೈಯಲ್ಲಿರುವ ಮೊಬೈಲೇ ಎಲ್ಲ. 

ನನಗೆ ಗೊತ್ತಿದೆ. ಇಷ್ಟೆಲ್ಲ ಮಾತನಾಡಿದ ಮೇಲೆ ಒಂದು ಅನುಮಾನ ತಲೆಯಲ್ಲಿ ಸುಳಿದಿರುತ್ತದೆ. ನಾವೂ ನಮ್ಮ ಹಿಂದಿನ ತಲೆಮಾರಿನವರಂತೆಯೇ ಮಾತನಾಡಲಾರಂಭಿಸಿದ್ದೇವಾ? (“ಅಯ್ಯೋ ನಮ್ಮ ಕಾಲದಲ್ಲೇ ಚೆನ್ನಾಗಿತ್ತು, ಈಗಿನ ಹುಡುಗರು ಹಾಳಾಗಿಹೋಗಿದ್ದಾರೆ’) ಹಾಗೆ ಯೋಚಿಸುವುದನ್ನು ಬಿಡಬೇಕು ಕಾಲ ಚಕ್ರ ತಿರುಗುತ್ತಲೇ ಇರುತ್ತದೆ, ಬದಲಾವಣೆ ಜಗದ ನಿಯಮ ಎನ್ನುತ್ತೀರಾ? 

ಆದರೆ ಈ ತಲೆಮಾರಿನ ಚಕ್ರ ನೈಸರ್ಗಿಕವಾದದ್ದಲ್ಲ. ಇದು ಕೃತಕವಾಗಿ ಸೃಷ್ಟಿಯಾದ ಕಾಲಚಕ್ರ. ಈ ಚಕ್ರ ವಾಸ್ತವವನ್ನು ಮರೆ ಮಾಚುತ್ತಿದೆ, ಅತ್ಯಂತ ಫೇಕ್‌ ಆಗಿದೆ. ಈ ನಕಲಿ ಚಕ್ರವು ಜನರಿಂದ ದೂರವಿರಲು, ಸಂವೇದನಾಶೂನ್ಯರಾಗಲು ಮಕ್ಕಳಿಗೆ ಕಲಿಸಿಕೊಡು ತ್ತಿದೆ. ಒಬ್ಬ ವ್ಯಕ್ತಿಯ ಆಂತರ್ಯಕ್ಕಿಂತಲೂ ಆತನ ಬಾಹ್ಯ ಸೌಂದರ್ಯವೇ ಮುಖ್ಯ ಎನ್ನುವ ಭಾವನೆ ಬಿತ್ತುತ್ತಿದೆ. 

ಯಾವ ಮಟ್ಟಕ್ಕೆ ಬಾಡಿ ಇಮೇಜ್‌ ಎನ್ನುವುದು ಈಗಿನ ಮಕ್ಕಳಿಗೆ ದೊಡ್ಡ ವಿಷಯವಾಗಿದೆಯೆಂದರೆ, ತಾನು ನೋಡಲು ಚೆನ್ನಾಗಿಲ್ಲ ಎಂದು 6ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಯ ಬಗ್ಗೆ ಯೋಚಿಸುವಷ್ಟು! ನನ್ನ ಮಗನಿಗೆ ತನ್ನ ಮೇಲೆ ತನಗೆ ನಂಬಿಕೆ ಬರಲು ಅಜಮಾಸು 3 ವರ್ಷಗಳೇ ಹಿಡಿಯಿತು. ಈ ಪ್ರಕ್ರಿಯೆ ನಿಧಾನವಾಗಿತ್ತು ಮತ್ತು ನಮ್ಮ ಇಡೀ ಕುಟುಂಬವೇ ಅವನ ಸಹಾಯಕ್ಕಿತ್ತು. 

ನಿರಂತರ ಪ್ರೇರಣೆಯೇ ಯಶಸ್ಸಿನ ರಹಸ್ಯ. ಈಗಲೂ ಅವನು ಒಮ್ಮೊಮ್ಮೆ ತನ್ನ ಸಾಮರ್ಥಯವನ್ನು ಕಡಿಮೆ ಅಂದಾಜುಹಾಕುತ್ತಾನೆ. ಆಗ ನಾವೆಲ್ಲ ಅವನಿಗೆ “”ನೀನು ಬಲಶಾಲಿ, ನಿನ್ನ ಜೀವನ ನಿನ್ನ ಹಿಡಿತದಲ್ಲಿದೆ” ಎನ್ನುವುದನ್ನು ನೆನಪುಮಾಡಿಕೊಡುತ್ತೇವೆ. 
ನನ್ನ ಪತಿ ಹಿರಿಯ ಮಗನನ್ನು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಾರೆ, ಇನ್ನು ನನ್ನ ಸಣ್ಣ ಮಗನ ವಿಷಯಕ್ಕೆ ಬಂದರೆ, ಅವನು ತನ್ನ ಅಣ್ಣ ಅನುಭವಿಸಿದ ಕಷ್ಟವನ್ನು ನೋಡಿದ್ದಾನೆ. ಹೀಗಾಗಿ ಯಾರಾದರೂ ತನಗೆ ಅಥವಾ ಇನ್ನಿತರ ಗೆಳೆಯರಿಗೆ ತೊಂದರೆ ಕೊಡಲು ಬಂದರೆ ಅದನ್ನು ಬಲವಾಗಿ ವಿರೋಧಿಸುತ್ತಾನೆ. 

ಈಗ ನಮ್ಮ ಮನೆಯಲ್ಲಿ ಒಂದು ಕಟ್ಟುನಿಟ್ಟು ನಿಯಮ ಜಾರಿಗೆ ತಂದಿದ್ದೇವೆ-ಎಲ್ಲರೂ ಮಾತನಾಡಬೇಕು. ನಾವು ಜೀವನದ ಬಗ್ಗೆ ಮಾತನಾಡುತ್ತೇವೆ, ಸಂಗೀತದ ಬಗ್ಗೆ ಮಾತನಾಡುತ್ತೇವೆ, ಆಯಾ ದಿನದ ಬಗ್ಗೆ ಮಾತನಾಡುತ್ತೇವೆ, ಶಾಲೆ ಮತ್ತು ಸಿನೆಮಾಗಳ ಬಗ್ಗೆ ಮಾತನಾಡುತ್ತೇವೆ. ಎಲ್ಲಕ್ಕಿಂತಲೂ ಹೆಚ್ಚಾಗಿ ನಾವು ನಮ್ಮ ಭಾವನೆ ಗಳ ಬಗ್ಗೆ ಮಾತನಾಡುತ್ತೇವೆ. ಯಾರಿಗೆ ಯಾವುದೇ ಸಮಸ್ಯೆ ಬರಲಿ, ಯಾವ ವಿಷಯವಾದರೂ ಮನಸ್ಸನ್ನು ಕೊರೆಯುತ್ತಿರಲಿ ಅದನ್ನು ಮನೆಯವರೊಡನೆ ಹಂಚಿಕೊಳ್ಳಬೇಕು ಎನ್ನುವ ನಿಯಮವಿದು. ನಾವೆಲ್ಲರೂ ಸೇರಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಎಷ್ಟೇ ಕಷ್ಟ ಬರಲಿ, ಜೀವನವನ್ನು ಅಂತ್ಯ ಗೊಳಿಸುವುದು ಅದಕ್ಕೆ ಪರಿಹಾರವೇ ಅಲ್ಲ ಎನ್ನುವುದನ್ನು ಮಕ್ಕಳಿಗೆ ಆಗಾಗ ಮನವರಿಕೆ ಮಾಡಿಕೊಡುತ್ತಲೇ ಇರುತ್ತೇವೆ. 

ಇಷ್ಟೆಲ್ಲ ಆದರೂ ಈಗಲೂ ಕೆಲವೊಮ್ಮೆ ನನ್ನ ಹಿರಿಯ ಮಗ ಹೇಳುತ್ತಾನೆ-“ನನಗೆ ಗೊತ್ತು, ನಾನು ನೋಡೋಕ್ಕೆ ಅಷ್ಟೊಂದು ಚೆನ್ನಾಗಿಲ್ಲ’. ಆದರೆ ಕೂಡಲೇ ತನ್ನ ಮಾತನ್ನು ಅರ್ಧಕ್ಕೆ ನಿಲ್ಲಿಸಿ ನಗುತ್ತಾನೆ-“ಇಲ್ಲ ಅಮ್ಮ, ಸುಮ್ನೆ ತಮಾಷೆ ಮಾಡ್ತಾ ಇದೀನಿ…’
ಆದರೆ ನನ್ನ ತಲೆಯಲ್ಲಿ ಮತ್ತೆ ಪ್ರಶ್ನೆಗಳೇಳಲಾರಂಭಿಸುತ್ತವೆ. ಈ ಯೋಚನೆಯಲ್ಲಿ ನನಗೆ ರಾತ್ರಿಯೆಲ್ಲ ನಿದ್ದೆ ಬರುವುದೇ ಇಲ್ಲ.

ಮಣಿಕಾ ಅಹಿರ್ವಾಲ್‌

Advertisement

Udayavani is now on Telegram. Click here to join our channel and stay updated with the latest news.

Next