Advertisement
ಕೆ.ಆರ್.ಪೇಟೆ ಪಟ್ಟಣದ ಯಶಸ್ವಿನಿ ಸಮೂದಾಯ ಭವನದಲ್ಲಿ ನಡೆದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಶಾಸಕ ನಾರಾಯಣಗೌಡ ಅವರ ವಿಶ್ವಾಸದ್ರೋಹ ಹಾಗೂ ತಮ್ಮ ಸಹೋದರಿ ಅನುಸೂಯ ಮಂಜುನಾಥ್ ಅವರ ಬಗ್ಗೆ ಮಾಡಿರುವ ಸುಳ್ಳು ಆರೋಪಗಳಿಂದ ನೊಂದು ಕಾರ್ಯಕರ್ತರ ಎದುರು ಕಣ್ಣೀರು ಹಾಕಿದರು.
Related Articles
Advertisement
ಮಾಧ್ಯಮದವರಿಗೆ ಮನವಿ: ನನ್ನ ಮಗ ನಿಖೀಲ್ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಕಾರ್ಯಕರ್ತರಿಗೆ ಶಕ್ತಿಯನ್ನು ತುಂಬಲು ನಾನು ರಾಜಕಾರಣ ಮಾಡ್ತಿದ್ದೇನೆ, ಇಷ್ಟು ಸಾಕು, ಮಾಧ್ಯಮಗಳ ನಿರಂತರವಾದ ಅಪಪ್ರಚಾರದಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಸೋತಿದ್ದಾನೆ. ದಯಮಾಡಿ ಮಾಧ್ಯಮಗಳು ನನ್ನ ಕುಟುಂಬದ ವಿರುದ್ಧ ಮಾಡುತ್ತಿರುವ ಅಪಪ್ರಚಾರ, ಮಾನಸಿಕ ಹಿಂಸೆ ನೀಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು. ಮಾಜಿಸಚಿವ .ಪುಟ್ಟರಾಜು, ಸಾರಾ ಮಹೇಶ್, ಶಾಸಕ ಸುರೇಶ್‌ಗೌಡ, ಸಿ.ಎನ್.ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಎಚ್.ಟಿ.ಮಂಜು, ಜಿ.ಪಂ ಸದಸ್ಯ ಬಿ.ಎಲ್.ದೇವರಾಜು, ಮುಖಂಡ ಬಸ್ ಕೃಷ್ಣೇಗೌಡ, ಪುರಸಭೆ ಸದಸ್ಯ ಕೆ.ಎಸ್.ಸಂತೋಷ್ ಸೇರಿದಂತೆ ಜೆಡಿಎಸ್ ಕಾರ್ಯಕರ್ತರಿದ್ದರು.
ದೇವೇಗೌಡರಿಗೂ ಕೆಆರ್‌ಪೇಟೆಗೂ ನಂಟು: ದೇವೇಗೌಡರಿಗೂ ಕೆ.ಆರ್.ಪೇಟೆ ಕ್ಷೇತ್ರಕ್ಕೂ ಬಿಡಿಸಲಾಗದ ನಂಟಿದೆ. ಹೇಮಾವತಿ ನೀರನ್ನು ಈ ಭಾಗಕ್ಕೆ ಕೊಡಿಸಿದ ಕೀರ್ತಿ ದೇವೇಗೌಡರದ್ದಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಜೆಡಿಎಸ್ ಕಾರ್ಯಕರ್ತರ ಜತೆ ಮಾತನಾಡಿದ ಅವರು, ಕೆಲವು ಯುವಕರಿಗೆ ಈ ವಿಚಾರ ಗೊತ್ತಿಲ್ಲ. ಅವಕ್ಕೆ ಬರೀ ಸಾಮಾಜಿಕ ಜಾಲತಾಣದಲ್ಲಿ ನಿಖೀಲ್ ಎಲ್ಲಿದ್ದೀಯಪ್ಪ.. ಕುಮಾರ ಎಲ್ಲಿದ್ದೀಯಪ್ಪ.. ಅನ್ನೋದಷ್ಟೇ ಗೊತ್ತು. ಈ ಕ್ಷೇತ್ರದ ಜನರು ಹಿಂದಿನಿಂದಲೂ ದೇವೇಗೌಡರ ಜೊತೆ ಇದ್ದಾರೆ. ಇವತ್ತು ನಮ್ಮನ್ನು ಬಿಟ್ಟು ಹೋದವನ (ನಾರಾಯಣಗೌಡ) ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ, ಆ ವಿಷಯದಲ್ಲಿ ನಮ್ಮ ಕುಟುಂಬದ ಸ್ವಯಂಕೃತ ಅಪರಾಧವೂ ಇದೆ ಎಂದು ಹೇಳಿದರು.
ಒಕ್ಕಲಿಗ ಅಧಿಕಾರಿಗಳ ಚೆಂಡಾಟ:
ಯಡಿಯೂರಪ್ಪ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಬಿಜೆಪಿ ಸರ್ಕಾರದಲ್ಲಿ ಒಕ್ಕಲಿಗ ಅಧಿಕಾರಿಗಳನ್ನು ಚೆಂಡಾಡುತ್ತಿದ್ದಾರೆ. ರವಿಕಾಂತೇ ಗೌಡರನ್ನು ಎತ್ತಂಗಡಿ ಮಾಡಿದ್ದೇಕೆ. ಅವರು ಯಾವ ತಪ್ಪು ಮಾಡಿದರು ಅಂತ ವರ್ಗಾವಣೆ ಮಾಡಿದರು. ಅವರು ಕುಮಾರಸ್ವಾಮಿ ಅಭಿಮಾನಿ ಎಂಬ ಕಾರಣಕ್ಕೆ ವರ್ಗಾವಣೆ ಮಾಡಿದರು ಎಂದು ದೂಷಿಸಿದರು. ನನ್ನನ್ನು ನಂಬಿಕೊಂಡಿರುವ ಲಕ್ಷಾಂತರ ಕಾರ್ಯಕರ್ತರಿಗಾಗಿ ನಾನು ಇನ್ನೂ ರಾಜಕೀಯದಲ್ಲಿದ್ದೇನೆ. ಇಲ್ಲದಿದ್ದರೆ ನಾನು ಇಷ್ಟೊತ್ತಿಗೆ ರಾಜಕೀಯ ನಿವೃತ್ತಿ ಘೋಷಿಸುತ್ತಿದ್ದೆ. ನನಗೆ ದೇವೇಗೌಡರ ರೀತಿ ಇಳಿ ವಯಸ್ಸಿನಲ್ಲೂ ರಾಜಕೀಯ ಮಾಡುವ ಹಂಗಿಲ್ಲ ಎಂದು ನೇರವಾಗಿ ಹೇಳಿದರು.
ವೃದ್ಧರ ಜತೆ ಬದುಕಲು ಚಿಂತನೆ:
ನಾನು ಮುಖ್ಯಮಂತ್ರಿ ಆದ ದಿನದಿಂದ ಸರ್ಕಾರ ತೆಗೆಯಲು ಮಾಧ್ಯಮಗಳು ಮುಂದಾದವು. ನನ್ನ ಮಗನ ಸೋಲಿನಲ್ಲೂ ಮಾಧ್ಯಮಗಳ ಪಾತ್ರವಿದೆ. ಆದರೆ, ನನಗೆ ಅಧಿಕಾರಕ್ಕಿಂತ ಜನರ ಪ್ರೀತಿ ಮುಖ್ಯ. ಕೇತೋಗಾನಹಳ್ಳಿಯಲ್ಲಿ ನಾನು ಸಂಪಾದಿಸಿದ ಭೂಮಿಯಲ್ಲಿ ವೃದ್ಧಾಶ್ರಮ ನಿರ್ಮಿಸಲು ನಿರ್ಧಾರ ಮಾಡಿದ್ದೇನೆ. ವೃದ್ಧಾಶ್ರಮದಲ್ಲಿ ವೃದ್ಧರ ಜೊತೆ ಬದುಕಲು ಚಿಂತಿಸಿದ್ದೇನೆ ಎಂದರು. ನಾಲೆಗಳಿಗೆ ನೀರು ಬಿಡಿಸಿದ್ದಕ್ಕೆ ಚುನಾವಣಾ ಆಯೋಗದ ಮೂಲಕ ಸ್ವಾಭಿಮಾನಿಗಳು ನನಗೆ ನೋಟಿಸ್ ಕೊಡಿಸಿದ್ದರು ಎಂದು ಸಂಸದೆ ಸುಮಲತಾ ಹೆಸರೇಳದೆ ನಿಂದಿಸಿದರು.