Advertisement

ನನ್ನದು ಸ್ವಾಭಿಮಾನದ ರಾಜಕಾರಣ: ಪ್ರಸಾದ್‌ 

11:56 AM Nov 05, 2017 | |

ಮೈಸೂರು: “ನನ್ನದು ಹೋರಾಟದ ಜೀವನ, ಹಠ-ಛಲದಿಂದ ಬಂದವನು ನಾನು. ಸ್ವಾಭಿಮಾನದ ರಾಜಕಾರಣ ಮಾಡಿದ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮಂತೆ ದುರಹಂಕಾರ, ದುರಾಭಿಮಾನ ಇಲ್ಲ’ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, 45 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಒಬ್ಬರ ಹತ್ತಿರವೂ ಅಧಿಕಾರಕ್ಕಾಗಿ ಲಾಬಿ ಮಾಡಿಲ್ಲ. ಆದರೆ, ನೀವು(ಸಿದ್ದರಾಮಯ್ಯ) ಮುಖ್ಯಮಂತ್ರಿಯಾಗಬೇಕು ಎನ್ನುವ ಕಾರಣಕ್ಕೆ ಹತಾಶರಾಗಿ ಎಲ್ಲೆಲ್ಲಿಗೆ ಹೋಗಿದ್ದಿರಿ ಎಂಬುದು ಗೊತ್ತಿದೆ. ಬಗ್ಗಿದರೆ ಜುಟ್ಟು ಹಿಡಿಯುವ, ಎದ್ದರೆ ಕಾಲು ಹಿಡಿಯುವ ಜಾಯಮಾನ ನಿಮ್ಮದು ಎಂದು ಟೀಕಿಸಿದರು.

ಮಹಾನ್‌ ನಾಯಕರು: ಎಚ್‌.ಡಿ.ದೇವೇಗೌಡರು ಮಹಾನ್‌ ನಾಯಕರು ಎಂದು ಜರಿದ ಶ್ರೀನಿವಾಸಪ್ರಸಾದ್‌, ನಂಜನಗೂಡು ಉಪ ಚುನಾವಣೆ ಗೆಲುವಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ನ‌ ಪ್ರಶಂಸೆಗೆ ಪಾತ್ರವಾಗಿದ್ದರೆ, ಅದಕ್ಕೆ ದೇವೇಗೌಡರು ಕಾರಣ ಎಂದರು.  

ಹೋರಾಟದ ಹಿನ್ನೆಲೆಯೇ ಇಲ್ಲದೆ, ಹೈಕಮಾಂಡ್‌ಗೆ ಹಣ ಕೊಟ್ಟು ಎಂಎಲ್‌ಸಿ, ಮಂತ್ರಿ, ಪಿಸಿಸಿ ಅಧ್ಯಕ್ಷರಾಗುವ ಪರಮೇಶ್ವರ್‌, 7ವರ್ಷ ಪಿಸಿಸಿ ಅಧ್ಯಕ್ಷನಾಗಿದ್ದೇ ಸಾಧನೆ ಎಂದು ಬೀಗುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವಕಾಶವಾದಿ ರಾಜಕಾರಣಿ, ರಾಜ್ಯದಲ್ಲಿ ಕಾಂಗ್ರೆಸ್‌ ಕತೆ ಮುಗಿಯಿತು ಎಂದು ಗೊತ್ತಾದ ಕೂಡಲೇ ದೆಹಲಿಗೆ ಹೋಗಿ ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು.

ಹುಚ್ಚು ಆಂಜನೇಯ: ಎಚ್‌.ಆಂಜನೇಯ ಸಮಾಜ ಕಲ್ಯಾಣ ಇಲಾಖೆ ಸಚಿವರೋ, ಸಿದ್ದರಾಮಯ್ಯ ಸೇವಕರೋ ಗೊತ್ತಿಲ್ಲ. ಸಿದ್ದರಾಮಯ್ಯ ಗುಲಾಮನಂತೆ ವರ್ತಿಸುವ ಆತ ಎಚ್‌ ಅಲ್ಲ ಹುಚ್‌ ಆಂಜನೇಯ ಎಂದು ಲೇವಡಿ ಮಾಡಿದರು.

Advertisement

ಹೆಜ್ಜಿಗೆಯಿಂದ ತಿ.ನರಸೀಪುರಕ್ಕೆ ಹೋಗಲು ಬಸ್‌ಗೆ ಕಾಸಿಲ್ಲದೆ, ಹೊಳೆ ಹಾಯ್ದು ಹೋಗುತ್ತಿದ್ದ ಸಚಿವ ಮಹದೇವಪ್ಪ, ನಂಜನಗೂಡಿನಲ್ಲಿ 5000 ಜನರಿಗೆ ಬಾಡೂಟ ಹಾಕಿಸಿ, ನಮ್ಮ ತಾತನ ಕಾಲದಿಂದಲೂ ಹಾಕಿಸುತ್ತಿದ್ದೇವೆ ಎನ್ನುತ್ತಾರೆ. ಹಾಗಿದ್ದರೆ, ಹೊಳೆ ಹಾಯ್ದು ಹೋಗುತ್ತಿದ್ದದ್ದೇಕೆ ಎಂದು ಪ್ರಶ್ನಿಸಿದರು.

ಶಾಸಕ ಜಿ.ಟಿ.ದೇವೇಗೌಡ, ಎಚ್‌.ವಿಶ್ವನಾಥ್‌ ಪದೇ ಪದೇ ತಮ್ಮನ್ನು ಭೇಟಿ ಮಾಡುತ್ತಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಬೇರೆ ಬೇರೆ ಪಕ್ಷದಲ್ಲಿದ್ದರೂ ನಾವೆಲ್ಲರೂ ಆತ್ಮೀಯರು. ನಾವೇನು ಮಠಾಧೀಶರಲ್ಲ. ಇದರಲ್ಲಿ ಒಳ ಸಂಚು ಏನಿಲ್ಲ ಎಂದು ಸ್ಪ$ಷ್ಟಪಡಿಸಿದರು.

ಧ್ರುವ ನಿಸ್ಸೀಮ: ಮನೆ ಮನೆಗೆ ಕಾಂಗ್ರೆಸ್‌ ಹೆಸರಲ್ಲಿ ಕಾಂಗ್ರೆಸ್‌ನವರು ಈಗಿನಿಂದಲೇ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಂಸದ ಧ್ರುವನಾರಾಯಣ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಿ, ಹಣ ಹಂಚುವುದರಲ್ಲಿ ಅವರು ನಿಸ್ಸೀಮರು ಎಂದು ಲೇವಡಿ ಮಾಡಿದರು.

ಮಾಂಸಹಾರಿ ಕ್ಯಾಂಟೀನ್‌ ಮಾಡಿ: ಸಿದ್ದರಾಮಯ್ಯ ಮಾಂಸಹಾರ ಪ್ರಿಯರು, ಇಂದಿರಾ ಕ್ಯಾಂಟೀನ್‌ ಸಸ್ಯಾಹಾರಿ ಏಕೆ ಮಾಡಿದ್ದಾರೋ ಗೊತ್ತಿಲ್ಲ. ಮಾಂಸಹಾರಿ ಅಯ್ಯ ಕ್ಯಾಂಟೀನ್‌ ಮಾಡಿ ಎಂದು ಜರಿದರು. 

ಮಾಜಿ ಸಚಿವ ಎಸ್‌.ಎ.ರಾಮದಾಸ್‌, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ನಗರ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ಮುಖಂಡರಾದ ಕೆ.ಆರ್‌.ಮೋಹನ್‌ ಕುಮಾರ್‌, ಸಿ.ರಮೇಶ್‌, ಎಚ್‌.ವಿ.ರಾಜೀವ್‌, ಸಿ.ಬಸವೇಗೌಡ ಮತ್ತಿತರರಿದ್ದರು.

ಅಭ್ಯರ್ಥಿ ಹಾಕಲ್ಲ ಎಂದಿದ್ದ ಜೆಡಿಎಸ್‌ ಏನು ಮಾಡಿತು?
2013ರ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ 42 ಸಾವಿರ ಮತಗಳಿಸಿದ್ದರೆ, ಅಂತಹ ಕಡೆ ಉಪ ಚುನಾವಣೆಗೆ ಅಭ್ಯರ್ಥಿ ಹಾಕಲ್ಲ. ನಮಗೆ ಶಕ್ತಿ ಇಲ್ಲ ಎನ್ನುವ ದೇವೇಗೌಡರು, ಠೇವಣಿ ಕಳೆದುಕೊಂಡಿದ್ದ ಹೆಬ್ಟಾಳ-ದೇವದುರ್ಗ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿದ್ದರು.

ಶ್ರೀನಿವಾಸಪ್ರಸಾದ್‌ ಪಕ್ಷೇತರರಾಗಿ ಸ್ಪರ್ಧಿಸಿದರೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ 2 ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತೇವೆ ಎಂದು ದೇವೇಗೌಡರು ಹೇಳಿದರೆ, ಜೆಡಿಎಸ್‌ ಜಿಲ್ಲಾಧ್ಯಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ ಎನ್ನುತ್ತಾರೆ. ಇದೆಲ್ಲವೂ ಜನತೆಗೆ ಗೊತ್ತಾಗುವುದಿಲ್ಲವೇ ಎಂದು ಬಿಜೆಪಿ ಮುಖಂಡ ಶ್ರೀನಿವಾಸ್‌ ಪ್ರಸಾದ್‌ ಪ್ರಶ್ನಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next